For the best experience, open
https://m.samyuktakarnataka.in
on your mobile browser.

ಬರಗಾಲಕ್ಕೆ ಬಾರದ ಹಣ: ಬಂದಿದ್ದು ರಾಜಕೀಯ ಕೆಸರು

11:39 AM Dec 02, 2023 IST | Samyukta Karnataka
ಬರಗಾಲಕ್ಕೆ ಬಾರದ ಹಣ  ಬಂದಿದ್ದು ರಾಜಕೀಯ ಕೆಸರು

ಬರಗಾಲ ಪರಿಹಾರಕ್ಕೆ ರಾಜ್ಯ ಸರ್ಕಾರ ಕೇಂದ್ರದ ಕಡೆ ಕೈತೋರಿಸುತ್ತಿದೆ. ಕೇಂದ್ರದ ಹಣಕಾಸು ಸಚಿವರು ನಮ್ಮ ರಾಜ್ಯದಿಂದಲೇ ಚುನಾಯಿತ ರಾದವರು. ರಾಜ್ಯ ಪ್ರತಿನಿಧಿಸುವ ಎಲ್ಲ ಸಂಸದರು ಕೇಂದ್ರದ ಮೇಲೆ ಒತ್ತಡ ಹೇರಬೇಕು. ರಾಜಕೀಯ ಕೆಸರು ಉಪಯೋಗಕ್ಕೆ ಬರುವುದಿಲ್ಲ.

ರಾಜ್ಯದಲ್ಲಿ ಬರಗಾಲ ಕಾಲಿರಿಸಿ ಮೂರು ತಿಂಗಳು ಕಳೆದಿದೆ. ಇನ್ನೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ರಾಜಕೀಯ ಕೆಸರು ಎರಚಾಟ ಮುಂದುವರಿದಿದೆಯೇ ಹೊರತು ಜನಸಾಮಾನ್ಯರ ಬವಣೆ ತಪ್ಪಿಲ್ಲ. ರಾಜ್ಯ ಸರ್ಕಾರ ಈಗ ಬೆಳೆನಷ್ಟಕ್ಕೆ ಪ್ರತಿ ರೈತನಿಗೆ ೨ ಸಾವಿರ ರೂ. ಬಿಡುಗಡೆ ಮಾಡಿದೆ. ಕೇಂದ್ರದಿಂದ ನಯಾಪೈಸೆ ಬಂದಿಲ್ಲ . ನಮ್ಮ ರಾಜ್ಯದಿಂದ ಆಯ್ಕೆಯಾಗಿ ಹೋಗಿರುವ ಸಂಸದರು ಮತ್ತು ಕೇಂದ್ರ ಸಚಿವರು ಮೌನವಹಿಸಿದ್ದಾರೆ. ಕೇಂದ್ರ ಹಣಕಾಸು ಸಚಿವರೇ ನಮ್ಮ ರಾಜ್ಯದಿಂದ ಆಯ್ಕೆಗೊಂಡವರು. ರಾಜ್ಯದಿಂದ ಪರಿಹಾರ ಬೇಡಿಕೆಗೆ ಪ್ರಧಾನ ಲೆಕ್ಕ ತಪಾಸಣೆ ಅಧಿಕಾರಿ (ಎಜಿ) ಸಹಿ ಮಾಡಿಲ್ಲ ಎಂದು ಕುಂಟು ನೆಪ ನೀಡಿದ್ದಾರೆ. ಇದೆಲ್ಲವೂ ಜನಸಾಮಾನ್ಯರ ಕಣ್ಣೀರು ಒರೆಸುವುದಿಲ್ಲ ಎಂಬುದು ಸ್ಪಷ್ಟ.
ನೈಸರ್ಗಿಕ ವಿಕೋಪ ನಿವಾರಣೆಗೆ ರಾಜ್ಯ ಮತ್ತು ಕೇಂದ್ರದಲ್ಲಿ ಪ್ರತ್ಯೇಕ ನಿಧಿಗಳನ್ನು ಸ್ಥಾಪಿಸಲಾಗಿದೆ. ರಾಜ್ಯದ ನಿಧಿಗೆ ಶೇಕಡ ೭೫ ರಷ್ಟು ಹಣವನ್ನು ಕೇಂದ್ರ ಭರಿಸುತ್ತದೆ. ಅಕ್ಟೋಬರ್ ೬ ರಂದು ಕೇಂದ್ರ ನೀಡಿರುವ ಪ್ರಕಟಣೆಯಲ್ಲಿ ರಾಜ್ಯ ವಿಕೋಪ ನಿಧಿಗೆ ೬೯೭.೬೦ ಕೋಟಿ ರೂ. ಕೇಂದ್ರ ನೀಡಿದೆ. ರಾಜ್ಯ ಸರ್ಕಾರ ೨೩೨ ಕೋಟಿ ರೂ. ಭರಿಸಿದೆ. ಈ ವರ್ಷದ ಮೊದಲ ಕಂತಿನಲ್ಲಿ ಕೇಂದ್ರ ೩೪೮.೮೦ ಕೋಟಿ ರೂ. ನೀಡಿದೆ. ಎರಡನೇ ಕಂತು ಬಂದಿಲ್ಲ. ಇದು ವಾಸ್ತವ ಪರಿಸ್ಥಿತಿ. ರಾಜ್ಯ ವಿಕೋಪ ನಿಧಿಯನ್ನು ಬಳಸಿಕೊಳ್ಳಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ. ಕೇಂದ್ರ ವಿಕೋಪ ನಿಧಿಯಿಂದ ಆಯಾ ರಾಜ್ಯಕ್ಕೆ ಬರುವ ಹಣವನ್ನು ಕೇಂದ್ರ ಹಣಕಾಸು ಆಯೋಗ ತೀರ್ಮಾನಿಸುತ್ತದೆ.ಈ ಹಣದ ಬಿಡುಗಡೆಗೆ ಕೇಂದ್ರ ಗೃಹ ಸಚಿವರ ನೇತೃತ್ವದ ಸಮಿತಿ ಸಭೆ ಸೇರಬೇಕು. ಬಿಜೆಪಿ ಸಂಸದರು, ರಾಜ್ಯದ ಅಧ್ಯಕ್ಷರು, ಪ್ರತಿಪಕ್ಷದ ನಾಯಕರು ದೆಹಲಿಗೆ ಹೋಗಿ ಗೃಹ ಸಚಿವರನ್ನು ಕಂಡು ಹಣ ಬಿಡುಗಡೆ ಮಾಡಿಸಬೇಕು. ಇದು ತುರ್ತಾಗಿ ಆಗಬೇಕಾದ ಕೆಲಸ. ಈಗ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟ ರಚಿಸಿಕೊಂಡಿರುವುದರಿಂದ ಒಟ್ಟಿಗೆ ಹೋಗಿ ಹಣ ತರಬೇಕು. ಅದನ್ನು ಬಿಟ್ಟು ಇಲ್ಲಿ ಹೇಳಿಕೆ ನೀಡುವುದರಿಂದ ಏನೂ ಆಗುವುದಿಲ್ಲ. ರಾಜ್ಯದ ಹಿತ ಬಂದಾಗ ಅಲ್ಲಿಯ ಸಂಸದರು ಒಂದಾಗಿ ಕೆಲಸ ಮಾಡುತ್ತಾರೆ. ಕೇಂದ್ರದ ಮೇಲೆ ಒತ್ತಡ ತರುತ್ತಾರೆ. ನಮ್ಮ ಸಂಸದರಲ್ಲಿ ಅವರ ಪಕ್ಷದ ನಾಯಕರನ್ನೇ ನೋಡುವುದಕ್ಕೆ ಅಂಜಿಕೆ. ರಾಜ್ಯ ಸರ್ಕಾರ ಸೆಪ್ಟೆಂಬರ್ ೨೧ ರಂದೇ ಬರಗಾಲ ಘೋಷಿಸಿತು. ಒಟ್ಟು ೪೮.೧೯ ಲಕ್ಷ ಹೆಕ್ಟೇರ್‌ನಲ್ಲಿ ಬೆಳೆ ನಷ್ಟವಾಗಿದ್ದು, ೬.೫ ಲಕ್ಷ ರೈತರಿಗೆ ೪೬೮೩.೧೩ ಕೋಟಿ ರೂ. ಪರಿಹಾರ ಕೊಡಬೇಕು. ಒಟ್ಟು ಪರಿಹಾರ ೧೮೧೭೧.೪೪ ಕೋಟಿ ರೂ. ವಿತರಣೆಯಾಗಬೇಕು. ರಾಜ್ಯ ಸರ್ಕಾರ ರಾಜ್ಯದ ನಿಧಿಯಿಂದ ಶೇಕಡ ೧೦ ರಷ್ಟು ಹಣವನ್ನು ತುರ್ತು ಕಾಮಗಾರಿಗಳಿಗೆ ಬಳಸಿಕೊಳ್ಳಬಹುದು.೨೩೬ ತಾಲೂಕುಗಳಲ್ಲಿ ೨೨೩ ತಾಲೂಕು ಬರಗಾಲಪೀಡಿತವಾಗಿದೆ.ಕುಡಿಯುವ ನೀರು ಮತ್ತು ಉದ್ಯೋಗ ಭರವಸೆ ಯೋಜನೆಗೆ ೩೨೮ ಕೋಟಿ ರೂ. ನೀಡಿರುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ. ಕಳೆದ ೨೩ ವರ್ಷಗಳಲ್ಲಿ ೧೬ ಬಾರಿ ರಾಜ್ಯ ಬರಗಾಲ ಕಂಡಿದೆ. ಜನರಿಗೆ ಬರಗಾಲ ಹೊಸತೇನಲ್ಲ. ರಾಜಕೀಯ ಮಾತ್ರ ನಿಂತಿಲ್ಲ.ನರೇಗಾ ಯೋಜನೆಯಲ್ಲಿ ವರ್ಷಕ್ಕೆ ೧೦೦ ದಿನ ಉದ್ಯೋಗ ಕೊಡಲು ಅವಕಾಶ ವಿದೆ. ಇದನ್ನು ೧೫೦ ದಿನಗಳಿಗೆ ಹೆಚ್ಚಿಸಲು ಕೇಂದ್ರಕ್ಕೆ ರಾಜ್ಯಕ್ಕೆ ಒತ್ತಾಯಿಸಿದೆ. ಇದಕ್ಕೆ ಇನ್ನೂ ಒಪ್ಪಿಗೆ ದೊರಕಿಲ್ಲ. ಕೇಂದ್ರ ಸರ್ಕಾರ ದಿನಗೂಲಿಯನ್ನು ಹೆಚ್ಚಿಗೆ ಕೊಡುತ್ತದೆ. ರಾಜ್ಯಸರ್ಕಾರದ ದಿನಗೂಲಿ ಕಡಿಮೆ ಇದೆ. ಬರಗಾಲ ಬಂದಾಗಲೆಲ್ಲ ಕೇಂದ್ರದ ಕಡೆ ತಿರುಗಿ ನೋಡುವುದು ಸಾಮಾನ್ಯ. ಪರಿಹಾರ ನೀಡುವುದರಲ್ಲೂ ತಾರತಮ್ಯ ಈಗಲೂ ಮುಂದುವರಿದಿದೆ. ಬರಗಾಲಕ್ಕೂ ರಾಜಕೀಯ ಬಣ್ಣ ನೀಡಿದರೆ ಬಡವರು ಆಕಾಶದತ್ತ ಮುಖ ಮಾಡಿ ಕುಳಿತುಕೊಳ್ಳುವುದು ತಪ್ಪೋಲ್ಲ. ಪ್ರತಿ ರಾಜಕೀಯ ಪಕ್ಷವೂ ಆಡಳಿತಕ್ಕೆ ಬರುವ ಮುನ್ನ ಬರ ಪರಿಹಾರ ಸೂತ್ರ ಬದಲಾಗಬೇಕು ಎಂದು ಒತ್ತಾಯ ಮಾಡುತ್ತವೆ. ಅಧಿಕಾರಕ್ಕೆ ಬಂದ ಮೇಲೆ ಎಲ್ಲವನ್ನೂ ಮರೆತು ಇದ್ದು ಬಿಡುವುದು ರೂಢಿಯಾಗಿದೆ. ಈಗ ಬರಗಾಲ ವಿಶ್ಲೇಷಣೆ ಬಹಳ ವೈಜ್ಞಾನಿಕವಾಗಿ ನಡೆದಿದೆ. ಹಸಿ ಬರ ಇದೆ ಎಂದು ಸ್ಪಷ್ಟಪಡಿಸಲಾಗಿದೆ. ಪರಿಹಾರಕ್ಕೆ ಮಾತ್ರ ರಾಜಕೀಯ ಬಣ್ಣ ಕೊಡುವ ಕೆಲಸ ನಿಂತಿಲ್ಲ. ಅನ್ನ ಕಾಣದ ಜನರಿಗೆ, ಅನ್ನ-ಸ್ವಾತಂತ್ರ್ಯದ ನಡುವೆ ಯಾವುದು ಮೊದಲು ಎಂದರೆ ಅನ್ನ ಎನ್ನದೆ ಅನ್ಯ ಮಾರ್ಗವಿಲ್ಲ.ಮಳೆರಾಯ ಕೃಪೆ ತೋರಿದರೆ ರಾಜಕೀಯ ಕೆಸರು ಎರೆಚಾಟ ಕೊಚ್ಚಿ ಹೋಗುತ್ತದೆ.