For the best experience, open
https://m.samyuktakarnataka.in
on your mobile browser.

ಬರ್ಬರ ಕೊಲೆಯ ಸುತ್ತಮುತ್ತ

02:00 AM Jun 14, 2024 IST | Samyukta Karnataka
ಬರ್ಬರ ಕೊಲೆಯ ಸುತ್ತಮುತ್ತ

ಚಿತ್ರದುರ್ಗದ ರೇಣುಕಾಸ್ವಾಮಿ ಎಂಬುವರ ನಿಗೂಢ ಕೊಲೆ ಪ್ರಕರಣದಲ್ಲಿ ಚಲನಚಿತ್ರ ನಟ ದರ್ಶನ್ ಕೈವಾಡವಿದೆ ಎಂಬ ಗುರುತರ ಆರೋಪ ಸಾರ್ವಜನಿಕ ವಲಯದಲ್ಲಿ ಹಲವು ಹತ್ತು ಪ್ರಶ್ನೆಗಳನ್ನು ಸೃಷ್ಟಿಸಿದೆ. ಕಲಾವಿದರು ಸಾಂಸ್ಕೃತಿಕ ರಾಯಭಾರಿಗಳು. ಇಂತವರ ನಡೆನುಡಿಯನ್ನು ಸಮಾಜದಲ್ಲಿ ಅನುಕರಣೆಯಾಗುವ ಸಾಧ್ಯತೆಗಳು ಹೆಚ್ಚು. ಹಲವಾರು ಸಂದರ್ಭದಲ್ಲಿ ತರುಣ ಜನಾಂಗಕ್ಕೆ ಮಾರ್ಗದರ್ಶಿಯಾಗುವ ಇವರ ಸಾರ್ವಜನಿಕ ವರ್ತನೆ ಸಾಮಾಜಿಕವಾಗಿ ನಾನಾ ರೀತಿಯಲ್ಲಿ ಪರಿಣಾಮಗಳನ್ನು ಬೀರುವುದು ಜಗತ್ತಿನಾದ್ಯಂತ ಖಚಿತವಾಗಿರುವ ಸಂದರ್ಭದಲ್ಲಿ ದರ್ಶನ್ ಅವರು ಈ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವುದು ನಿಜವೇ ಆಗಿದ್ದರೆ ಅದು ನಿಜಕ್ಕೂ ಅಕ್ಷಮ್ಯ. ಏಕೆಂದರೆ, ಇದು ಕೇವಲ ಅಪರಾಧದ ದೃಷ್ಟಿಯಿಂದ ಮಾತ್ರವಲ್ಲ, ಸಮಾಜದ ನಂಬಿಕೆಯ ತಿರುಳನ್ನೇ ನಿರ್ನಾಮ ಮಾಡುವಂತಹ ಸಾಮರ್ಥ್ಯವನ್ನು ಪಡೆದಿದೆ ಎಂಬುದು ಬಹಳ ಮುಖ್ಯವಾಗಿರುವ ಸಂಗತಿ.
ರೇಣುಕಾಸ್ವಾಮಿಯ ಕೊಲೆಯ ಹಿಂದಿನ ಪೂರ್ವಾಪರಗಳು ಈಗ ಪೊಲೀಸರ ತನಿಖೆಯ ವಸ್ತುವಾಗಿರುವಾಗ ಅದನ್ನು ವಿಚಾರ ವಿಮರ್ಶೆಗೆ ಒಳಪಡಿಸುವುದು ಯಾವುದೇ ದೃಷ್ಟಿಕೋನದಿಂದಲೂ ಸಾಧುವಲ್ಲ. ಆದರೆ, ಈ ಪ್ರಕರಣ ಸಮಾಜದ ಮೇಲೆ ಬೀರಿರುವ ದುಷ್ಪರಿಣಾಮದ ಬಗ್ಗೆ ಚರ್ಚಿಸದೇ ಹೋದರೆ ನಿಜಕ್ಕೂ ಅದೊಂದು ಸಾಮಾಜಿಕ ಬೇಜವಾಬ್ದಾರಿ ಎನಿಸಿಕೊಳ್ಳುವ ಅಪಾಯವೂ ಉಂಟು. ಕೊಲೆ ನಡೆದಿರುವ ರೀತಿ ನಿಜಕ್ಕೂ ಘೋರ. ಚಿತ್ರದುರ್ಗದಿಂದ ಅಪಹರಿಸಿ ಶೆಡ್ ಒಂದರಲ್ಲಿ ಬಲಾತ್ಕಾರವಾಗಿ ಕೂಡಿ ಹಾಕಿ ನಾನಾ ರೀತಿಯ ಚಿತ್ರಹಿಂಸೆಗೆ ಗುರಿಪಡಿಸಲಾಗಿದೆ ಎಂಬ ವರದಿಗಳು ಮಾತ್ರ ಜನರನ್ನು ತಲ್ಲಣಗೊಳಿಸಿವೆ. ಇಂತಹ ಕ್ರೌರ್ಯದ ಪರಮಾವಧಿ ಎನಿಸುವ ದುರ್ಘಟನೆಗೆ ಕಾರಣವೂ ಕೂಡಾ ಮಹತ್ವವಾಗಿರುವುದನ್ನು ನಿರ್ಲಕ್ಷಿಸಬಾರದು. ಯುವ ಜನಾಂಗದಲ್ಲಿ ಅನಗತ್ಯವಾಗಿ ಮೊಬೈಲ್ ಸಂದೇಶಗಳನ್ನು ಕಳುಹಿಸುವುದು ಹಾಗೂ ಅಸಭ್ಯ ಭಾಷೆಯನ್ನು ಬಳಸುವ ಜೊತೆಗೆ ಸಚಿತ್ರವಾಗಿ ವಾಟ್ಸಾಪ್ ಸೌಲಭ್ಯವನ್ನು ಬಳಸಿಕೊಂಡು ಮನಬಂದವರಿಗೆಲ್ಲಾ ರವಾನಿಸಿ ವಿಕಟ ಸಂತೋಷವನ್ನು ಅನುಭವಿಸುವುದು ಒಂದು ಮಾನಸಿಕ ರೋಗ. ಇಂತಹ ರೋಗಕ್ಕೆ ಚಿಕಿತ್ಸೆ ನೀಡಲು ಸಮರ್ಥರಾಗಿರುವವರು ಮನೋವೈದ್ಯರು ಎಂಬುದು ನಿಜವೇ. ಇದರ ಜೊತೆಗೆ ಕಾನೂನು ಪ್ರಕ್ರಿಯೆಯನ್ನು ಜರುಗಿಸಿ ಇಂತಹ ಸಂದೇಶ ಕಳುಹಿಸಿದ ರೇಣುಕಾಸ್ವಾಮಿಯ ವಿರುದ್ಧ ಶಿಸ್ತುಕ್ರಮ ಜರುಗಿಸಲು ಮುಕ್ತ ಅವಕಾಶವಿತ್ತು. ಅದನ್ನು ಬಿಟ್ಟು ಕಾನೂನನ್ನು ಕೈಗೆ ತೆಗೆದುಕೊಂಡು ಎಲ್ಲೋ ಇದ್ದ ರೇಣುಕಾಸ್ವಾಮಿಯನ್ನು ಪತ್ತೆ ಹಚ್ಚಿ ಎಲ್ಲಿಂದಲೋ ಬಂದವರು ಆತನನ್ನು ಅಪಹರಿಸಿ ವಿಕೃತ ದೌರ್ಜನ್ಯಕ್ಕೆ ಗುರಿಪಡಿಸಿರುವ ಪ್ರಕರಣ ಸಾರ್ವಜನಿಕರ ದೃಷ್ಟಿಯಲ್ಲಿ ಪೈಶಾಚಿಕ ಕೃತ್ಯ. ಇಂತಹ ಪಿಶಾಚಿಗಳಿಗೆ ಕ್ಷಮೆ ಎಂಬುದು ಇರಲೇಬಾರದು. ಹಾಗೊಮ್ಮೆ ಕ್ಷಮೆ ಕೋರಿದರೆ ಇಂತಹ ಪಿಶಾಚಿ ಸಂತತಿ ರಕ್ತಾಬೀಜಾಸುರನ ವಂಶದಂತೆ ಹೆಚ್ಚಾಗುವ ಸಾಧ್ಯತೆಗಳು ಇವೆ ಎಂಬುದನ್ನು ಮರೆಯಬಾರದು.
ಪ್ರಕರಣದಲ್ಲಿ ಪೊಲೀಸರ ತನಿಖಾ ವಿಧಾನ ನಿಜಕ್ಕೂ ಮೆಚ್ಚುವಂತದ್ದು. ಸಂಯಮ ಮೀರದ ರೀತಿಯಲ್ಲಿ ನಡೆದುಕೊಂಡು ಕಾನೂನಿನ ಕಣ್ಣಿನಲ್ಲಿ ಸರಿ ತಪ್ಪುಗಳನ್ನು ಗುರುತಿಸಿ ಆರೋಪಿಗಳ ವಿಚಾರಣೆ ಮಾಡುತ್ತಿರುವ ರೀತಿ ತೃಪ್ತಿಕರವೇ. ಆದರೆ, ವಿಚಾರಣೆಯ ನಡುವೆ ಪೊಲೀಸ್ ಠಾಣೆಗೆ ಶಾಮಿಯಾನ ಹಾಕಿಸಿ ಜನಗಳು ಸುಳಿಯದಂತೆ ಮಾಡಿದ ರೀತಿ ಸಹಜವಾಗಿಯೇ ಸಾರ್ವಜನಿಕರಲ್ಲಿ ಸಂಶಯಗಳಿಗೆ ಗ್ರಾಸವಾಗಿದೆ. ಇದರ ಜೊತೆಗೆ ಇಡೀ ಪೊಲೀಸ್ ಠಾಣೆಯ ಎರಡು ಕಿಲೋಮೀಟರ್ ಸರಹದ್ದಿನಲ್ಲಿ ನಿಷೇಧಾಜ್ಞೆ ಜಾರಿ ಮಾಡಿರುವುದಂತೂ ಅರ್ಥವಾಗದ ಸಂಗತಿ. ಈ ಕ್ರಮಗಳು ಜನರಿಗೆ ಅರ್ಥವಾಗಬೇಕಿದ್ದರೆ ಪೊಲೀಸರು ಅಧಿಕೃತವಾಗಿ ಮಾಧ್ಯಮಗಳ ಮೂಲಕ ವಿವರಣೆಯನ್ನು ನೀಡಲು ಮುಕ್ತ ಅವಕಾಶವಿತ್ತು. ಅದನ್ನು ಬಿಟ್ಟು ಮಾಧ್ಯಮಗಳ ಮೇಲೆ ಪೌರುಷ ತೋರಿಸಿದ ಧೋರಣೆ ಒಟ್ಟಾರೆ ತನಿಖಾ ಪ್ರಕ್ರಿಯೆಗೆ ಕಪ್ಪು ಚುಕ್ಕೆ ಇಟ್ಟಂತಾಗಿದೆ.
ಬಹುಶಃ ಪೊಲೀಸರು ಇಂತಹ ಕ್ರಮಗಳನ್ನು ಕೈಗೊಳ್ಳಲು ಪ್ರಸಿದ್ಧ ನಟ ಠಾಣೆಯಲ್ಲಿ ಬಂಧಿಯಾಗಿರುವುದು ಕಾರಣವಿರಬೇಕು. ನಟನ ಅಭಿಮಾನಿಗಳು ಹಾಗೂ ಇನ್ನಿತರ ಜನ ಪೊಲೀಸ್ ಠಾಣೆಯ ಕಡೆ ಗುಂಪು ಗುಂಪಾಗಿ ಬಂದು ತನಿಖೆಗೆ ಅಡ್ಡಿಪಡಿಸಬಹುದು ಎಂಬ ಕಾರಣವೂ ಇರಬಹುದು. ಆದರೆ, ಇಂತಹ ಹಲವು ಹತ್ತು ಪ್ರಕರಣಗಳನ್ನು ಯಾವುದೇ ನಿರ್ಬಂಧಗಳಿಲ್ಲದೆ ನಿಭಾಯಿಸಿರುವ ಅನುಭವ ಪೊಲೀಸ್ ಇಲಾಖೆಗೆ ಹಾಗೂ ಅಧಿಕಾರಿಗಳಿಗೆ ಇದೆ. ಕರ್ನಾಟಕದ ಪೊಲೀಸರಂತೂ ಈ ವಿಚಾರದಲ್ಲಿ ಅತ್ಯಂತ ಜಾಣರು. ಮಾಜಿ ಮುಖ್ಯಮಂತ್ರಿಗಳನ್ನೇ ಬಂಧನಕ್ಕೆ ಒಳಪಡಿಸುವಾಗ ಯಾವುದೇ ನಿರ್ಬಂಧಗಳನ್ನು ಹೇರದ ಪೊಲೀಸರು ಈಗ ಏಕೆ ಇಂತಹ ದುಡುಕಿನ ಕ್ರಮಕ್ಕೆ ಮುಂದಾದರು ಎಂಬುದು ಮಾತ್ರ ಒಗಟು. ಪೊಲೀಸರು ಜನಸ್ನೇಹಿಯಾಗಿದ್ದರೆ ಅವರ ತನಿಖೆಗೆ ವಿಶ್ವಾಸಾರ್ಹತೆಯ ಗುರಾಣಿ ಇದ್ದೇ ಇರುತ್ತದೆ. ಪಾರದರ್ಶಕತೆ ಎಂದರೆ ಆರೋಪಿಗಳ ವಿಚಾರಣೆ ಜನರ ಮುಂದೆ ನಡೆಯಬೇಕು ಎಂದೇನೂ ಅಲ್ಲ. ವಿಚಾರಣೆ ನಡೆಯುವ ವಿಧಾನ ಸಾಂಪ್ರದಾಯಿಕವಾಗಿ ಹಾಗೂ ಕಾನೂನುಬದ್ಧವಾಗಿ ನಡೆಯಬೇಕೆಂಬುದಷ್ಟೆ ಇದರ ಹಿಂದಿರುವ ಕಳಕಳಿ.
ಅದೇನೇ ಇರಲಿ ಕನ್ನಡ ಚಲನಚಿತ್ರ ರಂಗದ ಮೇಲೆ ನಾನಾ ರೀತಿಯ ಪರಿಣಾಮಗಳನ್ನು ಬೀರುವ ಸಾಮರ್ಥ್ಯವಿರುವ ಈ ಕೊಲೆ ಪ್ರಕರಣದ ತನಿಖೆ ಪಾರದರ್ಶಕವಾಗಿ ಹಾಗೂ ಸತ್ಯ ನಿಷ್ಠ ಮತ್ತು ವಸ್ತುನಿಷ್ಠವಾಗಿ ನಡೆಯುವ ಮೂಲಕ ಪ್ರಕರಣದ ಸತ್ಯಾಸತ್ಯತೆ ಹೊರಬಿದ್ದರೆ ಆಗ ನಿಜವಾಗಲೂ ಕರ್ನಾಟಕದ ಪೊಲೀಸರ ಸಾಮರ್ಥ್ಯದ ಘನತೆಯ ಕಿರೀಟಕ್ಕೆ ಮತ್ತೊಂದು ಹೊಸ ಗರಿ ಸೇರುವುದಂತೂ ಖಂಡಿತ.