For the best experience, open
https://m.samyuktakarnataka.in
on your mobile browser.

ಬರ ಪರಿಹಾರ: ನಾಳೆ ಅಮಿತ್‌ ಶಾ ಅಧ್ಯಕ್ಷತೆಯ ಸಭೆಯಲ್ಲಿ ತೀರ್ಮಾನ

02:20 PM Dec 22, 2023 IST | Samyukta Karnataka
ಬರ ಪರಿಹಾರ  ನಾಳೆ ಅಮಿತ್‌ ಶಾ ಅಧ್ಯಕ್ಷತೆಯ ಸಭೆಯಲ್ಲಿ ತೀರ್ಮಾನ

ಮೈಸೂರು: ದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗಿ ರಾಜ್ಯದ ಬರ ಪರಿಸ್ಥಿತಿ ಕುರಿತು ವಿವರಿಸಲಾಗಿದ್ದು, ಡಿಸೆಂಬರ್‌ 23ರಂದು ಅಮಿತ್‌ ಶಾ ಅವರ ಅಧ್ಯಕ್ಷತೆಯ ಉನ್ನತ ಮಟ್ಟದ ಸಮಿತಿಯ ಸಭೆಯಲ್ಲಿ ಪರಿಹಾರ ಬಿಡುಗಡೆ ಕುರಿತು ತೀರ್ಮಾನವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬರ ಪರಿಹಾರ ಸೇರಿದಂತೆ ರಾಜ್ಯದ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಅವುಗಳನ್ನು ಕೇಂದ್ರ ಸರ್ಕಾರ ಈಡೇರಿಸುವ ಭರವಸೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಶಾಭಾವ ವ್ಯಕ್ತಪಡಿಸಿದರು.
ನವದೆಹಲಿಯಲ್ಲಿ ಪ್ರಧಾನಿ ಹಾಗೂ ಕೇಂದ್ರ ಗೃಹ ಸಚಿವರ ಭೇಟಿ ಬಗ್ಗೆ ಪ್ರತಿಕ್ರಿಯೆ ನೀಡಿ, ರಾಜ್ಯದ ಮನವಿಗೆ ಸಕಾರಾತ್ಮಕ ಸ್ಪಂದನೆ ದೊರಕಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಉನ್ನತ ಮಟ್ಟದ ಸಮಿತಿಯ ಅಧ್ಯಕ್ಷರಾಗಿದ್ದು, ಅವರು ಬರಪರಿಸ್ಥಿತಿಯ ಬಗ್ಗೆ ನಾಳೆ 23 ರಂದು ಸಭೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.
ಪ್ರಧಾನ ಮಂತ್ರಿಯವರನ್ನು ಭೇಟಿಯಾದ ಸಂದರ್ಭದಲ್ಲಿ ಬರ ಪರಿಸ್ಥಿತಿಯ ಜೊತೆಗೆ ಮಹಾದಾಯಿ, ಮೇಕೆದಾಟು, ಭದ್ರಾಮೇಲ್ದಂಡೆ ಯೋಜನೆಗಳ ಬಗ್ಗೆ, ಹಾಗೂ ನರೇಗಾ ಯೋಜನೆಯಡಿ ಮಾನವ ದಿನಗಳನ್ನು 150 ದಿನಗಳಿಗೆ ವಿಸ್ತರಿಸುವ ಬಗ್ಗೆ ಶೀಘ್ರ ತೀರ್ಮಾನ ಕೈಗೊಳ್ಳಲು ಮನವಿ ಮಾಡಲಾಗಿದೆ.
ಪ್ರಧಾನಿ ಮೋದಿಯವರು ಕರ್ನಾಟಕ ಬರ ಪರಿಸ್ಥಿತಿ ಹಾಗೂ ಮೇಲಿನ ಬೇಡಿಕೆಗಳ ಬಗ್ಗೆ ಸಮಾಧಾನಚಿತ್ತರಾಗಿ ಆಲಿಸಿ, ಸಂಬಂಧಪಟ್ಟ ಸಚಿವರ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದರು.

ಕೋವಿಡ್–ಜನರು ಆತಂಕ ಪಡಬೇಕಾಗಿಲ್ಲ
ಮೈಸೂರಿನಲ್ಲಿ 6 ಜನರಿಗೆ ಕೋವಿಡ್ ತಗುಲಿದ್ದು, ಅವರಿಗೆ ಇತರೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಭವಿಷ್ಯದಲ್ಲಿ ಪ್ರವಾಸಿ ತಾಣಗಳನ್ನು ಬಂದ್ ಮಾಡುವ ಸಾಧ್ಯತೆ ಇದೆಯೇ ಎಂಬುದಕ್ಕೆ ಪ್ರತಿಕ್ರಿಯೆ ನೀಡಿ, ಈಗ ಸಧ್ಯದ ಪರಿಸ್ಥಿತಿಯಲ್ಲಿ ಯಾರೂ ಕೂಡ ಆತಂಕ ಪಡುವ ಅಗತ್ಯವಿಲ್ಲ. ಆದರೆ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ತಾಂತ್ರಿಕ ಸಲಹಾ ಸಮಿತಿಯ ಸಲಹೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.