ಬಳ್ಳಾರಿಗೆ ಜನಾರ್ದನರೆಡ್ಡಿ ರಾಯಲ್ ಎಂಟ್ರಿ
ಬಳ್ಳಾರಿ: ೧೪ ವರ್ಷಗಳ ಬಳಿಕ ಮಾಜಿ ಸಚಿವ, ಶಾಸಕ ಜನಾರ್ದನರೆಡ್ಡಿ ರಾಯಲ್ ಆಗಿ ಬಳ್ಳಾರಿಗೆ ಗುರುವಾರ ಎಂಟ್ರಿ ಕೊಟ್ಟರು.
ಗಂಗಾವತಿಯಿಂದ ಮಧ್ಯಾಹ್ನ ೩ ಗಂಟೆಗೆ ಹೊರಟ ರೆಡ್ಡಿಯ ಹಿಂದೆ ತೆಲುಗು ಸಿನಿಮಾ ಮಾದರಿಯಲ್ಲಿ ೫೦ಕ್ಕೂ ಹೆಚ್ಚು ಕಾರುಗಳಲ್ಲಿ ಅಭಿಮಾನಿಗಳು ಹಿಂಬಾಲಿಸಿದರು. ಜಿಲ್ಲೆಯ ಗಡಿ ಕಂಪ್ಲಿ ತಾಲೂಕಿನ ಬುಕ್ಕಸಾಗರ ಸೇತುವೆ ಮೂಲಕ ಕಮಲಾಪೂರ, ದೇವಲಾಪೂರ, ದರೋಜಿ, ಕುಡತಿನಿ ಮಾರ್ಗವಾಗಿ ಬಳ್ಳಾರಿಯ ಅಲ್ಲಿಪುರಕ್ಕೆ ಎಂಟ್ರಿಕೊಟ್ಟರು. ಸದ್ಗುರು ಮಹಾದೇವ ತಾತನ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಿ ಹೊರ ಬಂದ ರೆಡ್ಡಿಗೆ, ಬಳ್ಳಾರಿ ಪ್ರವೇಶ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳು ಹೂಮಳೆಗೆರೆಯುವ ಮೂಲಕ ರೆಡ್ಡಿಯನ್ನು ಸ್ವಾಗತಿಸಿಕೊಂಡರು.
ತೆರೆದ ವಾಹನವೇರಿದ ರೆಡ್ಡಿ, ರೈಲ್ವೇ ಕಂಟೋನ್ಮೆಂಟ್, ಒಪಿಡಿ ಕ್ರಾಸ್, ಕಾಗೆ ಪಾರ್ಕ್, ಮೋತಿ ಸರ್ಕಲ್, ರಾಯಲ್ ಸರ್ಕಲ್ ಮೂಲಕ ಕನಕದುರ್ಗಮ್ಮ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ರೆಡ್ಡಿ ಸ್ವಾಗತಕ್ಕಾಗಿ ಬಳ್ಳಾರಿಯ ಹಲವು ಸರ್ಕಲ್‌ಗಳಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಮೆರವಣಿಗೆಯುದ್ದಕ್ಕೂ ಡಿಜೆ ಹಾಕಿ ಅಭಿಮಾನಿಗಲು ಕುಣಿದು ಕುಪ್ಪಳಿಸಿದರು. ರೆಡ್ಡಿ ಆಗಮನ ಹಿನ್ನೆಲೆಯಲ್ಲಿ ಬಳ್ಳಾರಿ ಪ್ರಮುಖ ಬೀದಿಗಳಲ್ಲಿ ಜನಾರ್ದನರೆಡ್ಡಿ ಕಟೌಟ್, ಬ್ಯಾನರ್‌ಗಳನ್ನು ಹಾಕಿದ್ದು ಕಂಡು ಬಂತು. ಕಾರ್ಪೋರೆಟರ್‌ಗಳು ಬಿಜೆಪಿ ಕಾರ್ಯಕರ್ತರು ಸೇರಿ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಜನರು ಜನಾರ್ದನರೆಡ್ಡಿಯನ್ನು ಸ್ವಾಗತಿಸಿಕೊಂಡರು.