For the best experience, open
https://m.samyuktakarnataka.in
on your mobile browser.

ಬಳ್ಳಾರಿಯಲ್ಲಿ ಮುಂದುವರಿದ ಬಾಣಂತಿಯರ ಮರಣ

08:38 PM Nov 27, 2024 IST | Samyukta Karnataka
ಬಳ್ಳಾರಿಯಲ್ಲಿ ಮುಂದುವರಿದ ಬಾಣಂತಿಯರ ಮರಣ

ಬಳ್ಳಾರಿ: ಬಳ್ಳಾರಿಯ ಜಿಲ್ಲಾಸ್ಪತ್ರೆ ಬಳಿಕ ಬಿಮ್ಸ್‌ನಲ್ಲೂ ಬಾಣಂತಿ ಸಾವಿನ ಪ್ರಕರಣ ವರದಿಯಾಗಿದೆ.
ಜಿಲ್ಲಾಸ್ಪತ್ರೆಯಲ್ಲಿ ನಾಲ್ಕು ಬಾಣಂತಿಯರ ಸಾವಿನ ಪ್ರಕರಣ ಮಾಸುವ ಮುನ್ನ ಬಿಮ್ಸ್‌ನಲ್ಲಿ ಬಾಣಂತಿ ಮಹಾಲಕ್ಷ್ಮೀ(೨೦) ಸಾವಿಗೀಡಾಗಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದ ಮಹಾಲಕ್ಷ್ಮಿ ಸಾವಿಗೀಡಾಗಿದ್ದಾಳೆ ಎಂದು ಪಾಲಕರು ಆರೋಪಿಸಿದ್ದಾರೆ.
ಭಾನುವಾರ ಹೆರಿಗೆಗೆ ದಾಖಲಾಗಿದ್ದ ಕೂಡ್ಲಿಗಿ ತಾಲೂಕಿನ ಸಿಎಸ್‌ಪುರ ಗ್ರಾಮದ ಮಹಾಲಕ್ಷ್ಮಿಗೆ ನಾರ್ಮಲ್ ಹೆರಿಗೆಯಾಗಿತ್ತು. ಆಕೆ ಗಂಡು ಮಗವಿಗೆ ಜನ್ಮ ನೀಡಿದ್ದಳು. ಹೆರಿಗೆ ಬಳಿಕ ರಕ್ತ ಸ್ರಾವ, ನಂಜು ಆಗಿ ಬಾಣಂತಿ ಸಾವೀಗಿಡಾಗಿದ್ದಾಳೆ.
ಬಿಮ್ಸ್ ಆಸ್ಪತ್ರೆ ಮುಂದೆ ಮಹಾಲಕ್ಷ್ಮಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಹೆರಿಗೆ ವೇಳೆ ತೊಂದರೆಯಾಗಿದ್ದು, ವೈದ್ಯರು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಣಂತಿ ಮಹಾಲಕ್ಷ್ಮಿ ಸಾವಿನ ಕುರಿತು ಬಿಮ್ಸ್ ನಿರ್ದೇಶಕ ಡಾ. ಗಂಗಾಧರ್‌ಗೌಡ ಸ್ಪಷ್ಟನೆ ನೀಡಿದ್ದು, ಮಹಾಲಕ್ಷ್ಮಿಗೆ ಅನಿಮಿಯಾ ಇತ್ತು. ಕೂಡ್ಲಿಗಿ ಆಸ್ಪತ್ರೆಗೆ ಹೋಗಿ ಇಲ್ಲಿಗೆ ಬಂದಿದ್ದಾರೆ. ಬರುವ ವೇಳೆ ಆರೋಗ್ಯದಲ್ಲಿ ಏರುಪೇರಾಗಿತ್ತು. ನಾವು ಮೊದಲೇ ತಿಳಿಸಿದ್ದೆವು. ಎಲ್ಲ ಪ್ರಯತ್ನ ಮಾಡಿದ್ದೇವೆ. ಕೆಮ್ಮು, ಇತರೆ ಕಾಯಿಲೆಯಿಂದ ಮಹಾಲಕ್ಷ್ಮಿ ಸಾವಾಗಿದೆ ಎಂದು ಹೇಳಿದ್ದಾರೆ.