ಬಳ್ಳಾರಿಯಲ್ಲೇ ದರ್ಶನ್ ದಸರಾ
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಜಾಮೀನು ಅರ್ಜಿ ಕುರಿತು ಕಳೆದ ಒಂದು ವಾರದಿಂದ ನಡೆಯುತ್ತಿದ್ದ ವಾದ-ಪ್ರತಿವಾದ ವಿಚಾರಣೆಯ ಆದೇಶವನ್ನು ನಗರದ ೫೭ನೇ ಸಿಸಿಎಚ್ ನ್ಯಾಯಾಲಯ ಅ. ೧೪ಕ್ಕೆ ಮುಂದೂಡಿ ಆದೇಶ ನೀಡಿದ್ದು, ಸೋಮವಾರ ದರ್ಶನ್ ಬೇಲ್ ನಿರೀಕ್ಷಿಸಲಾಗಿದೆ.
ಸರ್ಕಾರದ ಅಭಿಯೋಜಕ ಪ್ರಸನ್ನಕುಮಾರ್ ಹಾಗೂ ದರ್ಶನ್ ಪರ ವಕೀಲ ಸಿ.ವಿ. ನಾಗೇಶ್ ಅವರ ಸುದೀರ್ಘ ವಾದ-ಪ್ರತಿವಾದ ಆಲಿಸಿದ ನ್ಯಾ. ಜೈಶಂಕರ್ ಅವರು ಅ. ೧೪ಕ್ಕೆ ಜಾಮೀನು ತೀರ್ಪು ಕಾಯ್ದಿರಿಸಿದ್ದಾರೆ. ಇದೇ ಪ್ರಕರಣದಲ್ಲಿ ಆರೋಪಿಗಳಾದ ಪವಿತ್ರಾಗೌಡ, ರವಿ, ನಾಗರಾಜ್, ಲಕ್ಷ್ಮಣ್ ಹಾಗೂ ದೀಪಕ್ ಜಾಮೀನು ಆದೇಶ ಅದೇ ದಿನವೇ ಬರಲಿದೆ. ದರ್ಶನ್‌ಗೆ ಜಾಮೀನು ಸಿಗದಿದ್ದರೆ ಹೈಕೋರ್ಟ್‌ಗೆ ಹೋಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಸರ್ಕಾರಿ ಅಭಿಯೋಜಕ ಪ್ರಸನ್ನಕುಮಾರ್ ವಾದ ಮಂಡಿಸಿ, ಪಟ್ಟಣಗೆರೆ ಶೆಡ್‌ನಲ್ಲಿ ಮಣ್ಣಷ್ಟೇ ಅಲ್ಲ, ರಕ್ತದ ಕಲೆಯೂ ಸಿಕ್ಕಿದೆ. ಮನೆಯಲ್ಲಿ ಶೂ ಇಟ್ಟ ಬಗ್ಗೆ ದರ್ಶನ್ ಸ್ವ ಇಚ್ಛಾ ಹೇಳಿಕೆ ನೀಡಿದ್ದಾರೆ. ನಂತರ ಪತ್ನಿ ಮನೆಯಲ್ಲಿ ಪೊಲೀಸರು ಶೂ ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳ ಹಾಗೂ ಸಾಕ್ಷಿಗಳ ಕರೆ ದತ್ತಾಂಶ ವಿಶ್ಲೇಷಿಸಲಾಗಿದೆ. ಸುಮಾರು ೧೦ ಸಾವಿರ ಪುಟಗಳ ಸಿಡಿಆರ್ ದತ್ತಾಂಶ ವಿಶ್ಲೇಷಣೆ ಮಾಡಲಾಗಿದೆ. ತನಿಖಾಧಿಕಾರಿಗಳ ಕರ್ತವ್ಯವಾಗಿರುವುದರಿಂದ ಸಿಡಿಆರ್ ಹಾಗೂ ಟವರ್ ಲೋಕೆಷನ್ ಮ್ಯಾಪ್ ಸಿದ್ಧಪಡಿಸಿದ್ದಾರೆ. ನಾವಿರುವ ಸ್ಥಳದ ನಿಖರತೆ ಬಗ್ಗೆ ತಂತ್ರಜ್ಞಾನದಿಂದ ಪತ್ತೆ ಹಚ್ಚಬಹುದಾಗಿದೆ. ಕೇವಲ ೫ ಮೀಟರ್ ವ್ಯತ್ಯಾಸವಾಗಬಹುದಾಗಿದೆ. ತಂತ್ರಜ್ಞಾನ ತುಂಬಾ ಅಭಿವೃದ್ಧಿಯಾಗಿದೆ. ಹೀಗಾಗಿ ವ್ಯಕ್ತಿಯ ಇರುವಿಕೆಯ ಸ್ಥಳದ ನಿಖರತೆ ಪತ್ತೆ ಹಚ್ಚಬಹುದಾಗಿದೆ ಎಂದರು.
ಕೃತ್ಯ ಅರ್ಥವಾಗಲು ನಕ್ಷೆ ತಯಾರಿ:
೧೪ನೇ ಆರೋಪಿ ಪ್ರದೋಶ್ ಸಾಕ್ಷಿ ನಾಶ ಮಾಡಲು ಗೂಗಲ್ ಸರ್ಚ್ ಮಾಡಿದ್ದಾನೆ. ಕೃತ್ಯದಲ್ಲಿ ಭಾಗಿಯಾಗಿಲ್ಲವೆಂದರೆ ಯಾಕೆ ಗೂಗಲ್ ಸರ್ಚ್ ಮಾಡುತ್ತಿದ್ದ ಎಂದು ಪ್ರಶ್ನಿಸಿದರು. ೧೦ ಸಾವಿರ ಪುಟಗಳನ್ನು ಕೊಡುವ ಬದಲು ಸುಲಭವಾಗಿ ಅರ್ಥವಾಗಲು ನಕ್ಷೆ ತಯಾರಿಸಿದ್ದಾರೆ. ತಾಂತ್ರಿಕ ಸಾಕ್ಷಿಗಳು ತನಿಖೆ ಹಾಗೂ ಆರೋಪಪಟ್ಟಿ ಪ್ರಮುಖ ಭಾಗವಾಗಿವೆ. ೨೦೨೦-೨೧ ರಲ್ಲಿ ಶೆಡ್‌ನಲ್ಲಿ ದರ್ಶನ್ ಸಿನಿಮಾ ಚಿತ್ರೀಕರಣವಾಗಿದೆ. ಐಪಿ ವಿಳಾಸ ಆಧಾರದ ಮೇರೆಗೆ ತನಿಖೆ ನಡೆಸಿಲ್ಲ. ಹೇಮಂತ್ ಹೆಸರಿನಲ್ಲಿ ದರ್ಶನ್ ಸಿಮ್ ಬಳಸುತ್ತಿದ್ದಾರೆ ಎಂದು ಆರೋಪಿ ಪರ ವಕೀಲರು ವಾದಿಸಿದ್ದಾರೆ. ಪವಿತ್ರಾ ಗೌಡ ಜೊತೆ ಚಾಟ್ ಮಾಡಿರುವುದೆಲ್ಲವೂ ಹೇಮಂತ್ ಎಂದು ಹೇಳುತ್ತಿದ್ದಾರೆಯೇ ಎಂದು ಪ್ರಶ್ನಿಸಿದರು. ಬಿಲಿಯೇನರ್ ಬಳಿ ಸಾವಿರಾರು ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ.