ಬಸವಣ್ಣನವರು ಹೊಳೆಗೆ ಹಾರಿ ಸಾಯುವ ಹೇಡಿ ಆಗಿರಲಿಲ್ಲ
ಹೊಸದುರ್ಗ: ಬಸವನಗೌಡ ಪಾಟೀಲ ಯತ್ನಾಳ್ ಅವರಿಗೆ ತಾವೇನು ಮಾತನಾಡುತ್ತೇವೆ ಎನ್ನುವ ಪ್ರಜ್ಞೆ ಇರುವಂತಿಲ್ಲ. ದೊಡ್ಡವರನ್ನು ಹೀಯಾಳಿಸಿದರೆ, ಬೈದರೆ, ಸಾರ್ವಜನಿಕರಿಂದ ಚಪ್ಪಾಳೆ ತಟ್ಟಿಸಿಕೊಂಡರೆ ತಾವು ದೊಡ್ಡವರಾಗುತ್ತೇವೆ ಎನ್ನುವ ಭ್ರಮಾಲೋಕದಲ್ಲೇ ತೇಲಾಡುವಂತಿದೆ ಎಂದು ಸಾಣೇಹಳ್ಳಿ ಶ್ರೀಗಳು ತಮ್ಮ ಹೇಳಿಕೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಶ್ರೀಗಳು, ಈ ಹಿಂದೆ ಗಣಪತಿ ವಿಚಾರವಾಗಿ ನಾವಾಡಿದ ಮಾತುಗಳನ್ನು ಅರ್ಥ ಮಾಡಿಕೊಳ್ಳದೆ ನಮ್ಮನ್ನೇ ನಿಂದಿಸಿದ್ದರು. ಅಹಂಕಾರಕ್ಕೆ ಉದಾಸೀನವೇ ಮದ್ದೆಂದು ನಾವು ಪ್ರತಿಕ್ರಿಯಿಸಿರಲಿಲ್ಲ.
ಈಗ ಬಸವಣ್ಣನವರು ತಮ್ಮ ಧರ್ಮಗುರುಗಳು, ಸಕಲ ಜೀವಾತ್ಮರ ಲೇಸ ಬಯಸಿದವರು ಎನ್ನುವುದನ್ನೇ ಮರೆತು ಮಾಧ್ಯಮಗಳಲ್ಲಿ ನಾಲಗೆ ಹರಿಬಿಟ್ಟಿದ್ದಾರೆ. ಅವರಿಗೆ ಬಸವ ಧರ್ಮದ ಪರಿಚಯವೇ ಇದ್ದಂತಿಲ್ಲ. ಬಸವಣ್ಣನವರು ಹೊಳೆಗೆ ಹಾರಿಕೊಂಡು ಸಾಯುವ ಹೇಡಿಗಳಾಗಿರಲಿಲ್ಲ. ಬಸವಣ್ಣನವರ ಇತಿಹಾಸವನ್ನು ಮತ್ತು ವಚನಗಳನ್ನು ಇನ್ನಾದರೂ ಓದುವ ಪ್ರಯತ್ನ ಮಾಡಲಿ. ಬಸವಣ್ಣನವರ ಬಗ್ಗೆ, ಲಿಂಗಾಯತರ ಬಗ್ಗೆ ಆಡಿರುವ ಮಾತುಗಳನ್ನು ನಾವು ಅನಿವಾರ್ಯವಾಗಿ ಸಾರ್ವಜನಿಕವಾಗಿಯೇ ಖಂಡಿಸುತ್ತೇವೆ ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.