ಬಸವಣ್ಣ, ನಾಡಿನ ಸಾಂಸ್ಕೃತಿಕ ರಾಯಭಾರಿ
ಬೆಂಗಳೂರು: ಬಸವಾದಿ ಶರಣರ ಆಶಯಗಳೆಲ್ಲಾ ನಮ್ಮ ಸಂವಿಧಾನದಲ್ಲಿವೆ. ವಚನ ಮತ್ತು ಸಂವಿಧಾನದ ಧ್ಯೇಯೋದ್ದೇಶಗಳು ಒಂದೇ ಆಗಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ವಚನ ಚಳವಳಿಯ ಅಣ್ಣ, ಸಮಾನತೆಯ ಹರಿಕಾರ, ಕಾಯಕಯೋಗಿ ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ ಎಂದು ಘೋಷಿಸುವಂತೆ ಒತ್ತಾಯಿಸಿ ವಿವಿಧ ಮಠಗಳ ಪರಮ ಪೂಜ್ಯ ಗುರುಗಳು, ಮಠಾಧೀಶರು, ಪ್ರಗತಿಪರ ಸ್ವಾಮೀಜಿಗಳು, ಚಿಂತಕರು, ದಲಿತ, ರೈತ, ಕಾರ್ಮಿಕ, ಮಹಿಳಾ ಚಳವಳಿಗಳ ಮುಖಂಡರುಗಳು ಭೇಟಿಮಾಡಿ ಮನವಿ ಸಲ್ಲಿಸಿದರು. ಈ ವೇಳೆ ಚರ್ಚೆ ನಡೆಸಿ, ಮಾತನಾಡಿದರುವ ಅವರು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಅಥವಾ ರಾಯಭಾರಿಯನ್ನಾಗಿಸಬೇಕು ಎನ್ನುವ ಒಕ್ಕೊರಲ ಒತ್ತಾಯವನ್ನು ಗೌರವಿಸುತ್ತೇನೆ. ವೈಯುಕ್ತಿಕವಾಗಿ ನನಗೆ ಈ ಘೋಷಣೆ ಬಗ್ಗೆ ತಕರಾರಿಲ್ಲ. ಈ ಬಗ್ಗೆ ಕ್ಯಾಬಿನೆಟ್ ನಲ್ಲಿ ಚರ್ಚೆಗಿಟ್ಟು ತೀರ್ಮಾನ ತೆಗೆದುಕೊಳ್ಳಲಾಗುವುದು. ಬಸವಾದಿ ಶರಣರ ಆಶಯಗಳೆಲ್ಲಾ ನಮ್ಮ ಸಂವಿಧಾನದಲ್ಲಿವೆ. ವಚನ ಮತ್ತು ಸಂವಿಧಾನದ ಧ್ಯೇಯೋದ್ದೇಶಗಳು ಒಂದೇ ಆಗಿವೆ. ಆದ್ದರಿಂದ ಈ ಮಹತ್ವದ ಸಂಗತಿಯನ್ನು ಕ್ಯಾಬಿನೆಟ್ ಮುಂದೆ ಇಟ್ಟು ತೀರ್ಮಾನಿಸಲಾಗುವುದು ಎಂದರು.