ಬಸವಸಾಗರ ಜಲಾಶಯಕ್ಕೆ ಬಾಗಿನ ಅರ್ಪಣೆ
ಹುಣಸಗಿ: ಈ ಭಾಗದಲ್ಲಿ ಮಳೆ ಕಡಿಮೆಯಾದರೂ ಸಹಿತ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಉತ್ತಮವಾಗಿ ಮಳೆಯಾಗಿರುವ ಹಿನ್ನಲೆಯಲ್ಲಿ ಜಲಾಶಯ ಭರ್ತಿಯಾಗಿದ್ದು, ಸದ್ಯದ ಬೆಳೆಗೆ ಯಾವುದೇ ತೊಂದರೆಯಿಲ್ಲ. ಮುಂದೆ ಮತ್ತೆ ಮಳೆಯಾದರೆ ಎರಡನೇ ಬೆಳೆಗೂ ನೀರು ಖಚಿತವಾಗಿ ಹರಿಸಲಾಗುವುದೆಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಭರವಸೆ ನೀಡಿದರು.
ತಾಲೂಕಿನ ನಾರಾಯಣಪುರ ಬಸವ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿ, ಕೃಷ್ಣಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು,ಈ ಬಾರಿ ಮಳೆಗಾಲ ಆರಂಭದಲ್ಲಿ ಉತ್ತಮ ಮಳೆಯಾಗಿ, ರೈತರು ಭಿತ್ತನೆ ನಂತರ ಮಳೆರಾಯ ಕೈಕೊಟ್ಟು ರೈತರಿಗೆ ಆತಂಕ ಎದುರಾಗಿತ್ತು. ಕೃಷ್ಟ ಜಲಾಶಯನ ಪ್ರದೇಶದಲ್ಲಿ ಎಡಬಿಡದೆ ಸುರಿದ ಮಳೆಯಿಂದ ಬಸವ ಸಾಗರ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬಂದು ಡ್ಯಾಂ ಭರ್ತಿಯಾಗಿ ಈ ಭಾಗದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಹೀಗಾಗಿ ಕುಡಿಯುವ ನೀರಿಗಾಗಿ, ರೈತರ ಜಮೀನುಗಳಿಗೆ ನೀರಾವರಿಗಾಗಿ ಅನುಕೂಲವಾಗುವ ರೀತಿಯಲ್ಲಿ ನೀರನ್ನು ಕಾಲುವೆಗಳ ಮೂಲಕ ಹರಿಸಿಲಾಗುತ್ತಿದೆ ಎಂದರು.
ನಾರಾಯಣಪುರ ಜಲಾಶಯದ ಸಮಗ್ರ ಅಭಿವೃದ್ಧಿಗೆ ನಾವು ಕೂಡಾ ಶ್ರಮವಹಿಸುತ್ತಿದ್ದು, ಈಗಾಗಲೇ ಸುರಪುರ ಶಾಸಕರು ಮತ್ತು ನಾವು ಆಲಮಟ್ಟಿ ಮಾದರಿ ಪ್ರವಾಸೋದ್ಯಮ ತಾಣವಾಗಿಸಲು ಪ್ರಸ್ತಾವನೆ ಸಲ್ಲಿಸಿದ್ದೇವೆ. ಸರಕಾರ ನಮ್ಮ ಮನವಿಗೆ ಸ್ಪಂದಿಸುವ ಭರವಸೆಯಿದೆ ಎಂದು ಅವರು ತಿಳಿಸಿದರು.