ಬಸ್ ಎಕ್ಸೆಲ್ ಕಟ್: ತಪ್ಪಿದ ಅನಾಹುತ
ಕಾರವಾರ: ಜನರನ್ನು ತುಂಬಿದ ಸಾರಿಗೆ ಬಸ್ ಚಲಿಸುತ್ತಿದ್ದಾಗಲೇ ಎಕ್ಸೆಲ್ ತುಂಡಾಗಿ ೫೦ಕ್ಕೂ ಹೆಚ್ಚು ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಪಾಯದಿಂದ ಪಾರಾದ ಘಟನೆ ನಗರದ ಹಬ್ಬುವಾಡ ರಸ್ತೆಯಲ್ಲಿ ಮಂಗಳವಾರ ಸಂಭವಿಸಿದೆ.
ನಗರದಿಂದ ಕೆರವಡಿ ಗ್ರಾಮಕ್ಕೆ ತೆರಳುತ್ತಿದ್ದ ಬಸ್ಸಿನಲ್ಲಿ ಸುಮಾರು ಐವತ್ತಕ್ಕೂ ಅಧಿಕ ಮಂದಿ ಪ್ರಯಾಣಿಸುತ್ತಿದ್ದರು. ಬಸ್ಸಿನ ಹಿಂಬದಿ ಎಕ್ಸಲ್ ಒಮ್ಮೆಲೆ ತುಂಡಾಗಿದ್ದು, ನಡು ರಸ್ತೆಯಲ್ಲಿಯೇ ಬಸ್ ಪಲ್ಟಿಯಾಗುವ ಹಂತಕ್ಕೆ ತಲುಪಿತ್ತು. ಎರಡು ಗಾಲಿಗಳು ಬೇರ್ಪಟ್ಟು ಉರುಳುತ್ತಿದ್ದ ಬಸ್ಸನ್ನು ಸಾರ್ವಜನಿಕರೇ ತಡೆದು ನಿಲ್ಲಿಸಿ ಜಾಕ್ ಕೊಟ್ಟು ಸಂಭವನೀಯ ಅವಘಡ ತಪ್ಪಿಸಿದರು.
ಘಟನೆಯಲ್ಲಿ ಬಸ್ಸಿನಲ್ಲಿದ್ದ ಹಲವರಿಗೆ ಗಾಯಗಳಾಗಿದ್ದು, ಕಿಟಕಿ ಬಾಗಿಲು ಮೂಲಕ ಬಸ್‌ನಿಂದ ಹೊರಬಂದಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಸ್ಥಿತಿಯಲ್ಲಿ ಇಲ್ಲದ ಬಸ್ಸನ್ನು ಓಡಾಡಲು ಬಿಟ್ಟ ಅಧಿಕಾರಿಗಳ ವಿರುದ್ಧ ಇದೀಗ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆಯಲ್ಲಿಯೇ ಬಸ್ ಪಲ್ಟಿಯಾದ ಹಿನ್ನೆಲೆ ಕಾರವಾರ-ಕೈಗಾ ರಸ್ತೆ ಸಂಚಾರ ಕೆಲಕಾಲ ಅಸ್ತವ್ಯಸ್ತಗೊಂಡಿತ್ತು.