For the best experience, open
https://m.samyuktakarnataka.in
on your mobile browser.

ಬಹುಕೋಟಿ ಹಗರಣದಲ್ಲಿ ಹೈಕಮಾಂಡ್ ಕೈವಾಡವಿದೆ

05:44 PM May 31, 2024 IST | Samyukta Karnataka
ಬಹುಕೋಟಿ ಹಗರಣದಲ್ಲಿ ಹೈಕಮಾಂಡ್ ಕೈವಾಡವಿದೆ

ಕಲಬುರಗಿ: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದ ಬಹುಕೋಟಿ ಹಗರಣದಲ್ಲಿ ಕೇವಲ ಸಚಿವ ನಾಗೇಂದ್ರರೊಬ್ಬರೇ ಶಾಮೀಲಾಗಿಲ್ಲ. ಕಾಂಗ್ರೆಸ್ ಹೈಕಮಾಂಡ್‌ವರೆಗೂ ಲಿಂಕ್ ಇದೆ ಎಂದು ವಿಜಯಪುರ ಶಾಸಕ ಹಾಗೂ ಕೇಂದ್ರದ ಮಾಜಿ ಸಚಿವ ಬಸನಗೌಡ ಯತ್ನಾಳ ಆರೋಪಿಸಿದ್ದಾರೆ.
ನಗರದ ಪಕ್ಷದ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ನಿಗಮದಲ್ಲಿ ೧೭೩ ಕೋಟಿ ರೂ. ಹೋಗಿದೆ ಎಂದರೆ ಅದು ಸಾಧಾರಣ ಹಗರಣವಲ್ಲ. ಇದರಲ್ಲಿ ರಾಜ್ಯದವರಲ್ಲದೆ ಕಾಂಗ್ರೆಸ್‌ನ ರಾಹುಲ್ ಗಾಂಧಿ ಹಿಡಿದು, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜಿವಾಲ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ, ಸಚಿವ ನಾಗೇಂದ್ರ ಎಲ್ಲರೂ ಶಾಮೀಲಾಗಿದ್ಧಾರೆ ಎಂದು ಬಲವಾಗಿ ಆರೋಪಿಸಿದರು.
ಈ ಹಗರಣ ನಡೆದಿರುವ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ಸಚಿವ ನಾಗೇಂದ್ರ ರಾಜಿನಾಮೆ ನೀಡಬೇಕು. ಸರಕಾರ ಕೇವಲ ಸಚಿವ ನಾಗೇಂದ್ರವೊಬ್ಬರನ್ನು ಬಲಿಪಶು ಮಾಡಬಾರದು. ಈ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು. ತನಿಖೆ ಬಳಿಕ ಅದರಲ್ಲಿ ಶಾಮೀಲಾದ ಎಲ್ಲರಿಗೂ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಹೈಕಮಾಂಡ್‌ಗೆ ಕರ್ನಾಟಕ ಎಟಿಎಂ ಆಗಿದೆ. ರಣದೀಪ್ ಸಿಂಗ್ ಸುರ್ಜಿವಾಲ ಆಗಾಗ ರಾಜ್ಯಕ್ಕೆ ಬಂದು ಹಣ ತೆಗೆದುಕೊಂಡು ಹೋಗಿ ಬೇರೆ ರಾಜ್ಯಗಳ ಚುನಾವಣೆಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಭ್ರಷ್ಟಾಚಾರದ ಹಣವೂ ಸಹ ಅವರು ಬೇರೆ ರಾಜ್ಯದ ಚುನಾವಣೆಗೆ ಉಪಯೋಗಿಸಿಕೊಂಡಿರಬಹುದು ಎಂಬ ಶಂಕೆ ಇದೆ ಎಂದರು.
ಪಿಎಸ್‌ಐ ಹಗರಣ ತನಿಖೆಗೆ ವೀರಭದ್ರನ ಅವತಾರ ತಾಳಿದಂತಹ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಪರಿಶಿಷ್ಟ ಪಂಗಡ ನಿಗಮದಲ್ಲಿ ದೊಡ್ಡ ಹಗರಣ ನಡೆದರೂ ಏಕೆ ಮೌನ ವಹಿಸಿದ್ದಾರೆ. ಎಲ್ಲಿಯಾದರೂ ಜ್ಞಾನಕ್ಕೆ ಹೋಗಿದ್ದಾರೆಯೇ ಎಂದು ನಗೆ ಚಟಾಕಿ ಹಾಕಿಸಿದ ಯತ್ನಾಳ, ಇಂತಹ ದೊಡ್ಡ ಹಗರಣ ಕುರಿತು ಸರಕಾರ ಕೂಡಲೇ ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಒತ್ತಾಯಿಸಿದರು.
ಚುನಾವಣೆ ಬಳಿಕ ಸರಕಾರ ಬೀಳುತ್ತೆ
ಲೋಕಸಭಾ ಚುನಾವಣೆ ಬಳಿಕ ರಾಜ್ಯ ಕಾಂಗ್ರೆಸ್ ಸರ್ಕಾರ ಖಂಡಿತ ಬಿಳುತ್ತೆ ಎಂದು ಭವಿಷ್ಯ ನುಡಿದ ಯತ್ನಾಳ ಅವರು, ಕಾಂಗ್ರೆಸ್‌ನ ಬಹಳಷ್ಟು ಶಾಸಕರು ನಮ್ಮ ಟಚ್‌ನಲ್ಲಿದಾರೆ. ಈ ಬಗ್ಗೆ ಏಕ್‌ನಾಥ್ ಶಿಂಧೆ ಮತ್ತು ಅಜಿತ್ ಪವಾರ್ ಮಾತನಾಡಿದ್ದಾರೆ. ಒಂದು ವರ್ಷವಾಯಿತು ಯಾವುದೇ ಅಭಿವೃದ್ಧಿ ಕೆಲಸವಾಗಿಲ್ಲ. ಹಿಗಂತ ಖುದ್ದು ಕಾಂಗ್ರೆಸ್ ಶಾಸಕರೇ ಅಳಲು ತೋಡಿಕೊಂಡಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ಅನುದಾನ ಸಿಗದೇ ಶಾಸಕರು ಬೇಸತ್ತಿದ್ದಾರೆ. ಅವರವರ ಒಳಜಗಳದಿಂದ ಈ ಸರ್ಕಾರ ಬಿದ್ದುಹೋಗುತ್ತೆ ಎಂದು ಹೊಸ ಬಾಂಬ್ ಸಿಡಿಸಿದರು.