ಬಾಂಗ್ಲಾದೇಶದಲ್ಲಿ ದಂಗೆ
ಭಾರತದ ಮಿತ್ರರಾಷ್ಟ್ರ, ಬಾಂಗ್ಲಾದೇಶದಲ್ಲಿ ದಂಗೆಯ ಚಂಡಮಾರುತ. ಬಾಂಗ್ಲಾದೇಶದ ವಿಮೋಚನಾ ಚಳವಳಿಯಲ್ಲಿ ಪಾಲ್ಗೊಂಡವರ ಕುಟುಂಬಗಳಿಗೆ ಮೀಸಲಾತಿ ಕಲ್ಪಿಸುವ ಶೇಖ್ ಹಸೀನಾ ನೇತೃತ್ವದ ಸರ್ಕಾರದ ವಿರುದ್ಧ ಹೋರಾಟಕ್ಕೆ ಇಳಿದ ಯುವ ಜನಾಂಗಕ್ಕೆ ದೇಶಾದ್ಯಂತ ಒಕ್ಕೂರಲ ಬೆಂಬಲ ದೊರಕಿದ ಪರಿಣಾಮವಾಗಿ ಈಗ ಭುಗಿಲೆದ್ದಿರುವ ದಂಗೆ.
ನೂರಾರು ಜನರ ಸಾವಿನ ಸರಮಾಲೆ ನಡುವೆ ಪ್ರಧಾನಿ ಶೇಖ್ ಹಸೀನಾ ದೇಶಭ್ರಷ್ಟವಾಗಿರುವುದು ನಾನಾ ರೀತಿಯ ಬೆಳವಣಿಗೆಗೆ ಆಸ್ಪದ ಮಾಡಿಕೊಟ್ಟಿದೆ. ರಾಜೀನಾಮೆ ನೀಡಿರುವ ಶೇಖ್ ಹಸೀನಾ ಅವರ ಜಾಗದಲ್ಲಿ ಪರ್ಯಾಯ ಸರ್ಕಾರ ರಚನೆ ಮಾಡುವುದಾಗಿ ಮಿಲಿಟರಿ ಮುಖ್ಯಸ್ಥರು ಘೋಷಿಸಿದ್ದಾರೆ. ಸರ್ಕಾರದ ವಿರುದ್ಧ ಭುಗಿಲೆದ್ದಿರುವ ಈ ಚಳವಳಿ ಜನಾಂಗೀಯ ಹೋರಾಟದ ಮಸಿ ಮೆತ್ತಿಕೊಂಡಂತೆ ಕಂಡುಬರುತ್ತಿರುವುದು ಬೇಸರದ ಸಂಗತಿ.
ಏಕೆಂದರೆ ಬಾಂಗ್ಲಾದೇಶದ ವಿಮೋಚನಾ ಚಳವಳಿಯ ನಾಯಕ ಹಾಗೂ ದೇಶಕ್ಕೊಂದು ಅಸ್ತಿತ್ವ ತಂದುಕೊಟ್ಟ ಶೇಖ್ ಮುಜಿಬುಲ್ ರೆಹಮಾನ್ ಜಾತ್ಯತೀತ ಮನೋಭಾವದಿಂದ ದೇಶ ಕಟ್ಟಿದ್ದರು. ಮುಜಿಬುಲ್ ಪುತ್ರಿ ಶೇಖ್ ಹಸೀನಾ ಕೂಡ ತಂದೆಯ ವೈಚಾರಿಕ ನೆಲೆಗಟ್ಟಿನಲ್ಲಿಯೇ ದೇಶವನ್ನು ಮುನ್ನಡೆಸಿಕೊಂಡು ಬಂದಿದ್ದರು. ಕೇವಲ ಭಾರತದ ಜತೆ ಸೌಹಾರ್ದಯುತ ಸಂಬಂಧ ಇಟ್ಟುಕೊಂಡ ಮಾತ್ರಕ್ಕೆ ಹಿಂದೂಪರ ಬಲವನ್ನು ಗುರುತಿಸುವುದು ಕುತರ್ಕವಷ್ಟೇ.
ಬಾಂಗ್ಲಾದೇಶದಲ್ಲಿ ಈಗಂತೂ ಅರಾಜಕತೆ ತಾಂಡವವಾಡುತ್ತಿದೆ. ರಾಜಕೀಯ ನೆಲೆಗಟ್ಟು ಛಿದ್ರವಾಗಿದೆ. ಇದನ್ನು ಸದುಪಯೋಗಪಡಿಸಿಕೊಂಡ ಮಿಲಿಟರಿ ವಿಭಾಗವು ಆಡಳಿತ ಸ್ಥಾಪನೆ ಮಾಡುವ ಸಾಧ್ಯತೆ ಹೆಚ್ಚಾಗಿ ಕಂಡುಬರುತ್ತಿದೆ. ಹಾಗೆ ನೋಡಿದರೆ ಬಾಂಗ್ಲಾದೇಶದಲ್ಲಿ ಮಿಲಿಟರಿ ಆಡಳಿತ ಹೊಸದಲ್ಲ. ಜನರಲ್ ಇರ್ಷದ್ ಖಾನ್ ಕಾಲದಿಂದಲೇ ಮಿಲಿಟರಿ ಸರ್ಕಾರ ಆಡಳಿತದ ರುಚಿಯನ್ನು ದೇಶ ಕಂಡಿದೆ. ಇಂತಹ ಸಂದರ್ಭದಲ್ಲಿ ಭಾರತೀಯ ಉಪಖಂಡದಲ್ಲಿ ಮೇಲುಗೈ ಸಾಧಿಸಲು ಹೊಂಚು ಹಾಕುತ್ತಿರುವ ಚೀನಾ ದೇಶ ಭಾರತ ವಿರೋಧಿ ಶಕ್ತಿಗಳಿಗೆ ಕುಮ್ಮಕ್ಕು ನೀಡುವುದು ಖಂಡಿತ. ಹೀಗಾಗಿ ಈಗಿನ ಬೆಳವಣಿಗೆಗಳಲ್ಲಿ ಬಾಂಗ್ಲಾದೇಶಕ್ಕೆ ಮಾತ್ರವಲ್ಲ, ಭಾರತಕ್ಕೂ ಒಂದು ದೊಡ್ಡ ಪರೀಕ್ಷೆ ಎದುರಾಗಿದೆ.
ಭಾರತ ಹಾಗೂ ಬಾಂಗ್ಲಾ ನಡುವಣ ಸಂಬಂಧ ಪರಂಪರಾಗತವಾದದ್ದು, ಅವಿಭಾಜ್ಯ ಭಾರತದಲ್ಲಿ ಬಾಂಗ್ಲಾ ಕೂಡ ಭಾಗವಾಗಿತ್ತು. ಪಾಕಿಸ್ತಾನ ವಿಭಜನೆಯ ನಂತರ ಪೂರ್ವ ಪಾಕಿಸ್ತಾನ ರೂಪ ಪಡೆದುಕೊಂಡರೂ ಕೂಡ ಜನರ ಜತೆಗಿನ ಸಂಬಂಧ ಸೌಹಾರ್ದಯುತವಾಗಿ ಮುಂದುವರಿಯಲು ಬಂಗಾಳಿ ಭಾಷೆ ಹಾಗೂ ಸಂಸ್ಕೃತಿಯೇ ಕಾರಣ. ಆದರೆ ರಾಜಕೀಯ ಒಳಸುಳಿಗಳು ಈಗ ಈ ಸಂಬಂಧಕ್ಕೆ ಹುಳಿ ಹಿಂಡಿವೆ. ಭಾರತೀಯ ಉಪಖಂಡದಲ್ಲಿ ಭಾರತದ ನೆರೆ ರಾಷ್ಟ್ರಗಳಲ್ಲಿ ಅರಾಜಕತೆಯ ವಾತಾವರಣ ಕಂಡುಬಂದಿದೆ. ಈ ಪಟ್ಟಿಗೆ ಈಗ ಬಾಂಗ್ಲಾದೇಶ ಸೇರ್ಪಡೆಯಾಗಿದೆ. ಮ್ಯಾನ್ಮಾರ್, ಶ್ರೀಲಂಕಾ, ಪಾಕಿಸ್ತಾನ ರಾಷ್ಟ್ರಗಳಲ್ಲಿ ಅಸಹನೀಯ ವಾತಾವರಣ ಪರಿಣಾಮವನ್ನು ಅನಿವಾರ್ಯ ಪ್ರಾರಬ್ಧದಂತೆ ಭಾರತ ಸಹಿಸಿಕೊಳ್ಳಬೇಕಷ್ಟೇ.