For the best experience, open
https://m.samyuktakarnataka.in
on your mobile browser.

ಬಾಂಗ್ಲಾದೇಶದ ಹಿಂದುಗಳ ಸುರಕ್ಷತೆಗೆ ಕ್ರಮಕೈಗೊಳ್ಳಲು ಆಗ್ರಹ

07:18 PM Aug 12, 2024 IST | Samyukta Karnataka
ಬಾಂಗ್ಲಾದೇಶದ ಹಿಂದುಗಳ ಸುರಕ್ಷತೆಗೆ ಕ್ರಮಕೈಗೊಳ್ಳಲು ಆಗ್ರಹ

ಮಂಗಳೂರು: ಬಾಂಗ್ಲಾದೇಶದಲ್ಲಿರುವ ಹಿಂದುಗಳ ಮೇಲಿನ ದೌರ್ಜನ್ಯ ಖಂಡಿಸಿ, ಅವರ ಸುರಕ್ಷತೆಗೆ ಕ್ರಮ ಕೈಗೊಳ್ಳಲು ಆಗ್ರಹಿಸಿ, ಜನಜಾಗೃತಿಗಾಗಿ ಹಿಂದು ಹಿತರಕ್ಷಣಾ ಸಮಿತಿ ಮಂಗಳೂರು ನೇತೃತ್ವದಲ್ಲಿ ನಗರದ ಮಿನಿ ವಿಧಾನಸೌಧ ಮುಂಭಾಗ ಸೋಮವಾರ ಮಾನವ ಸರಪಳಿ ರಚಿಸಿ ಪ್ರತಿಭಟನೆ ಮಾಡಲಾಯಿತು.
ಬಾಂಗ್ಲಾದೇಶದಲ್ಲಿರುವ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಈ ವೇಳೆ ಘೋಷಣೆ ಕೂಗಲಾಯಿತು. ಬಾಂಗ್ಲಾ ಹಿಂದುಗಳ ಜತೆ ನಾವಿದ್ದೇವೆ ಎಂದು ಧೈರ್ಯ ತುಂಬಲಾಯಿತು. ಬಾಂಗ್ಲಾ ಹಿಂದುಗಳ ನೆರವಿಗೆ ಭಾರತ ಸರಕಾರ ಹಾಗೂ ವಿಶ್ವ ಸಮುದಾಯ ಧಾವಿಸಬೇಕು ಎಂದು ವಿನಂತಿಸಲಾಯಿತು.

ಈ ವೇಳೆ ಮಾತನಾಡಿದ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ವಕ್ತಾರ ಸತೀಶ್ ಪ್ರಭು, ಬಾಂಗ್ಲಾದೇಶದಲ್ಲಿ ಪ್ರಜಾಪ್ರಭುತ್ವದ ರಕ್ಷಣೆಯ ಹೆಸರಿನಲ್ಲಿ ಹಿಂದುಗಳ ಮೇಲೆ ದೌರ್ಜನ್ಯ ನಡೆಸುತ್ತಿರುವುದು ಖಂಡನೀಯ. ಹಿಂದುಗಳ ಮೇಲೆ ದಾಳಿ, ಹಿಂದುಗಳ ಮನೆಗಳಿಗೆ ಬೆಂಕಿ ಹಾಕುವುದು, ಹಿಂದು ದೇವಾಲಯ, ವಾಣಿಜ್ಯ ಸಂಸ್ಥೆಗಳ ಮೇಲೆ ಅವ್ಯಾಹತವಾಗಿ ದಾಳಿ ನಡೆಸಲಾಗುತ್ತಿದೆ, ಹಿಂದು ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿ ಕ್ರೌರ್ಯದ ಪರಮಾವಧಿಯಂತೆ ವರ್ತಿಸಲಾಗುತ್ತಿದೆ. ಬಾಂಗ್ಲಾ ಹಿಂದುಗಳ ವಿರುದ್ಧದ ದಾಳಿಯನ್ನು ಸಹಿಸಲು ಸಾಧ್ಯವಿಲ್ಲ ಎಂದರು.
ಬಾಂಗ್ಲಾದೇಶದಲ್ಲಿರುವ ಹಿಂದುಗಳಿಗೆ ಮಾನವ ಹಕ್ಕುಗಳ ರಕ್ಷಣೆ ಇಲ್ಲವೇ? ವಿಶ್ವದ ಮಾನವ ಹಕ್ಕುಗಳ ಆಯೋಗ, ಸಂಘಟನೆಗಳು ಈ ಬಗ್ಗೆ ಯಾಕೆ ಸುಮ್ಮನಿವೆ ಎಂದು ಅವರು ಪ್ರಶ್ನಿಸಿದರು.
ಹಿಂದುವೊಬ್ಬ ವಿಶ್ವದ ಎಲ್ಲೇ ಇದ್ದರೂ ಆತ ನಮ್ಮ ಬಂಧುವಾಗಬೇಕು. ಬಾಂಗ್ಲಾದಲ್ಲಿ ಹಿಂದುಗಳ ಮೇಲೆ ಮತಾಂಧ ಶಕ್ತಿಗಳು ನಡೆಸುತ್ತಿರುವ ದೌರ್ಜನ್ಯ ತಕ್ಷಣ ನಿಲ್ಲಬೇಕು, ಬಾಂಗ್ಲಾ ಹಿಂದುಗಳಿಗೆ ನೆಮ್ಮದಿಯ ಬದುಕು ಕಲ್ಪಿಸಬೇಕು, ಇದಕ್ಕೆ ವಿಶ್ವ ಸಮುದಾಯ ಕೈಜೋಡಿಸಬೇಕು ಎಂದು ಒತ್ತಾಯಿಸಿದರು.

Tags :