ಬಾಂಗ್ಲಾ ಹಿಂದುಗಳ ದೌರ್ಜನ್ಯ ಖಂಡಿಸಿ ಬೀದಿಗಿಳಿದ ಹಿಂದು ಕಾರ್ಯಕರ್ತರು
ಮಂಗಳೂರು: ಬಾಂಗ್ಲಾ ದೇಶದಲ್ಲಿ ನಡೆಯುತ್ತಿರುವ ಹಿಂದುಗಳ ಮೇಲಿನ ದೌರ್ಜನ್ಯ ಖಂಡಿಸಿ, ಅವರ ರಕ್ಷಣೆಗೆ ಆಗ್ರಹಿಸಿ ದ. ಕ. ಜಿಲ್ಲೆ ಹಿಂದು ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ
ಮಂಗಳೂರಿನಲ್ಲಿ ಬುಧವಾರ ಬೃಹತ್ ಪ್ರತಿಭಟನಾ ಮೆರವಣಿಗೆ ಮತ್ತು ಪ್ರತಿಭಟನಾ ಸಭೆ ನಡೆಯಿತು. ವಿಶ್ವಹಿಂದು ಪರಿಷತ್ ಪ್ರಾಂತ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಮಾತನಾಡಿ, ಬಾಂಗ್ಲಾ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಿಂದುಗಳನ್ನು ಗುರಿಯಾಗಿಸಿ ದೌರ್ಜನ್ಯ ನಿರಂತರವಾಗಿ ನಡೆಯುತ್ತಿದೆ. ಇದರ ಹಿಂದೆ ೨೦೪೭ರಲ್ಲಿ ಜಗತ್ತನ್ನೇ ಇಸ್ಲಾಮೀಕರಣ ಮಾಡುವ ಮತೀಯವಾದದ ಷಡ್ಯಂತ್ರ ಅಡಗಿದೆ. ಜಗತ್ತಿನಲ್ಲೇ ಹಿಂದುತ್ವ ನಾಶ ಮಾಡಬೇಕು ಎನ್ನುವುದು ಬಾಂಗ್ಲಾ ಸಂಚಿನ ಭಾಗವಾಗಿದೆ. ಪಾಕಿಸ್ತಾನ, ಅಫ್ಘಾನಿಸ್ತಾನ, ಬರ್ಮಾ, ಮ್ಯಾನ್ಮಾರ್, ಮಾಲ್ಡೀವ್ಸ್ ಹಿಂದು ವಿರೋಧಿ ಹಾದಿ ತುಳಿದಿದೆ. ಚೀನಾ ಹಾಗೂ ಶ್ರೀಲಂಕಾಗಳು ಎಡಪಕ್ಷಗಳ ಹಿಡಿತದಲ್ಲಿವೆ. ಹಿಂದು ಅಲ್ಪಸಂಖ್ಯಾತರಾಗಿ ಇರುವಲ್ಲೆಲ್ಲ ದೌರ್ಜನ್ಯಗಳು ನಡೆಯುತ್ತಿವೆ ಎಂದರು.
ಕಾಶ್ಮೀರ, ಕೇರಳ, ಈಶಾನ್ಯ ಭಾರತ ಬಳಿಕ ಈಗ ದ.ಕ.ಜಿಲ್ಲೆಯಲ್ಲೂ ಮುಸ್ಲಿಮರ ಸಂಖ್ಯೆ ಶೇ.೩೫ರಷ್ಟು ಜಾಸ್ತಿಯಾಗಿದೆ. ಹೀಗಾದಲ್ಲಿ ಮುಂದಿನ ದಿನಗಳಲ್ಲಿ ಬಾಂಗ್ಲಾ ಪರಿಸ್ಥಿತಿ ದ.ಕ.ಜಿಲ್ಲೆಗೂ ಬರಬಹುದು ಎಂದು ಕಳವಳ ವ್ಯಕ್ತಪಡಿಸಿದ ಅವರು, ಮತಾಂಧರ ಮೇಲೆ ದಾಳಿ, ಪ್ಯಾಸೆಲ್ತೇನ್, ಸಿರಿಯಾ ದಾಳಿ ನಡೆದಾಗ ಬೊಬ್ಬಿರಿಯುವ ಬುದ್ಧಿಜೀವಿಗಳು, ಎಡಪಂಥೀಯರು ಬಾಂಗ್ಲಾದಲ್ಲಿ ಹಿಂದುಗಳ ಮೇಲೆ ದೌರ್ಜನ್ಯ ನಡೆಯುತ್ತಿದ್ದರೂ ವಿರೋಧಿಸುತ್ತಿಲ್ಲ. ಅಲ್ಲಿ ನಿರಂತರವಾಗಿ ಮಾನವಹಕ್ಕುಗಳ ಉಲ್ಲಂಘನೆಯಾಗುತ್ತಿದ್ದರೂ ಯಾರೂ ಮಾತನಾಡುತ್ತಿಲ್ಲ. ಬಾಂಗ್ಲಾದಲ್ಲಿ ಬಂಧಿತ ಇಸ್ಕಾನ್ ಚಿನ್ಮಯಕೃಷ್ಣ ದಾಸ್‌ರನ್ನು ಕೂಡಲೇ ಬಿಡುಗಡೆ ಮಾಡಬೇಕು. ಅಲ್ಲಿ ಹಿಂದು ಮೇಲಿನ ದೌರ್ಜನ್ಯ ಕೊನೆಯಾಗಬೇಕು. ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶ್ವಸಂಸ್ಥೆ ಒತ್ತಡ ಹಾಕಬೇಕು, ಅಲ್ಲಿನ ಮತಾಂಧರನ್ನು ಶಿಕ್ಷೆಗೆ ಒಳಪಡಿಸಿ ಹಿಂದುಗಳಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.
ವಿಭಾಗ ಸಾಮರಸ್ಯ ಗತಿವಿಧಿ ಪ್ರಮುಖ್ ರವೀಂದ್ರ ಪೇರಾಲು ಮಾತನಾಡಿ, ಬಾಂಗ್ಲಾದಲ್ಲಿ ಶೇ.೩೨ರಷ್ಟಿದ್ದ ಹಿಂದುಗಳ ಸಂಖ್ಯೆ ಶೇ.೮ಕ್ಕೆ ಇಳಿಕೆಯಾಗಿದೆ. ಅಲ್ಲಿನ ಸ್ವಾತಂತ್ರ್ಯ ಯೋಧರಿಗೆ ಉದ್ಯೋಗದಲ್ಲಿ ಮೀಸಲಾತಿ ಕಡಿತ ವಿಚಾರದಲ್ಲಿ ಆರಂಭವಾದ ಸಂಘರ್ಷ ಮಾಜಿ ಪ್ರಧಾನಿ ಶೇಖ್ ಹಸೀನಾ ಪದಚ್ಯುತಿ ವರೆಗೆ ತಲುಪಿ, ಬಳಿಕ ವಿನಾ ಕರಾಣ ಹಿಂದುಗಳ ಮೇಲೆ ದೌರ್ಜನ್ಯಕ್ಕೆ ತಿರುಗಿದೆ. ಅಲ್ಲಿನ ಹಾಲಿ ಆಡಳಿತ ಕೂಡ ಅದಕ್ಕೆ ಕುಮ್ಮಕ್ಕು ನೀಡುತ್ತಿದ್ದು, ಹಿಂದುಗಳ ಸ್ಥಿತಿ ಚಿಂತಾಜನಕವಾಗಿದೆ ಎಂದರು.
ಹಿಂದು ಜಾಗರಣಾ ವೇದಿಕೆ ಪ್ರಾಂತ ಕಾರ್ಯಕಾರಿಣಿ ಸದಸ್ಯ ಶ್ರೀಕಾಂತ್ ಶೆಟ್ಟಿ ಕಾರ್ಕಳ ಮಾತನಾಡಿದರು.
ಹಿಂದು ಹಿತರಕ್ಷಣಾ ಸಮಿತಿ ಅಧ್ಯಕ್ಷ ಎಚ್. ಕೆ. ಪುರುಷೋತ್ತಮ ಜೋಗಿ, ಹಿಂದೂ ಜಾಗರಣ ವೇದಿಕೆ ಪ್ರಾಂತ ನಿಧಿ ಪ್ರಮುಖ್ ರವಿರಾಜ್ ಕಡಬ ಇದ್ದರು. ಅಲ್ಲದೆ ಜಿಲ್ಲೆಯ ಸಂತರಾದ ಶ್ರೀ ರಾಜಶೇಖರಾನಂದ ಸ್ವಾಮೀಜಿ ವಜ್ರದೇಹಿ ಮಠ ಗುರುಪುರ, ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಶ್ರೀಧಾಮ ಮಾಣಿಲ, ಶ್ರೀ ವಿಧ್ಯೇಂದ್ರ ತೀರ್ಥ ಶ್ರೀಪಾದ ಸ್ವಾಮೀಜಿ ಚಿತ್ರಾಪುರ, ಶ್ರೀ ಸನಂದ ಸ್ವಾಮೀಜಿ ಇಸ್ಕಾನ್ ಕಲಾಕುಂಜ, ಶ್ರೀ ಪ್ರೇಮ್ ಭಕ್ತಿ ಪ್ರಭು ಇಸ್ಕಾನ್ ಕುಡುಪು, ಶ್ರೀ ಸಚ್ಚಿದಾನಂದ ಅದ್ವೈತ ಸ್ವಾಮೀಜಿ ಕುಳಾಯಿ, ಶ್ರೀ ನಾಮನಿಷ್ಠ ಸ್ವಾಮೀಜಿ ಇಸ್ಕಾನ್ ಮೊದಲಾದವರಿದ್ದರು. ವಿಹಿಂಪ ಮುಖಂಡ ಶಿವಾನಂದ ಮೆಂಡನ್ ನಿರೂಪಿಸಿದರು. ಬಳಿಕ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಕಳುಹಿಸಲಾಯಿತು.ಇದಕ್ಕೂ ಮೊದಲು ನಗರದ ಅಂಬೇಡ್ಕರ್ ವೃತ್ತದಿಂದ ಮಿನಿ ವಿಧಾನಸೌಧ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು.
ಮಾಧ್ಯಮದವರ ಮೇಲೆ ಹಲ್ಲೆಗೆ ಯತ್ನ : ಬಾಂಗ್ಲಾದೇಶದ ಹಿಂದುಗಳ ರಕ್ಷಣೆಗೆ ಆಗ್ರಹಿಸಿ ನಡೆದ ಪ್ರತಿಭಟನೆ ವೇಳೆ ಅದರ ಚಿತ್ರೀಕರಣಕ್ಕೆ ತೆರಳಿದ ಮಾಧ್ಯಮ ಮಂದಿಯನ್ನು ತಳ್ಳಿ ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ. ನಗರದ ಕ್ಲಾಕ್ ಟವರ್ ಬಳಿ ಬ್ಯಾರಿಕೇಡ್‌ಗಳನ್ನು ಬದಿಗೊತ್ತಿದ ಪ್ರತಿಭಟನಾಕಾರರು ರಸ್ತೆ ತಡೆಗೆ ಮುಂದಾಗಿದ್ದರು. ಆಗ ಪೊಲೀಸರು ಮಧ್ಯಪ್ರವೇಶಿಸಿ ರಸ್ತೆ ತಡೆಗೆ ಯತ್ನಿಸಿದವರನ್ನು ತಡೆದಿದ್ದರು. ಇದು ಪೊಲೀಸ್ ಮತ್ತು ಹಿಂದು ಕಾರ್ಯಕರ್ತರ ನಡುವೆ ಚಕಮಕಿಗೆ ಕಾರಣವಾಯಿತು. ಈ ವಿದ್ಯಮಾನದ ಚಿತ್ರೀಕರಣ ನಡೆಸುತ್ತಿದ್ದ ಇಬ್ಬರು ಖಾಸಗಿ ಚಾನೆಲ್‌ನ ಕ್ಯಾಮರಾಮನ್‌ಗಳನ್ನು ತಳ್ಳಿದ ಪ್ರತಿಭಟನಾಕಾರರು ಹಲ್ಲೆಗೆ ಯತ್ನಿಸಿದ ಘಟನೆಯೂ ನಡೆಯಿತು. ಹಲ್ಲೆಗೆ ಯತ್ನ ನಡೆದ ಹಿನ್ನೆಲೆಯಲ್ಲಿ ಮಾಧ್ಯಮ ಮಂದಿ ವರದಿಗಾರಿಕೆಯನ್ನು ಬಹಿಷ್ಕರಿಸಿ ಹೊರನಡೆದರು.