For the best experience, open
https://m.samyuktakarnataka.in
on your mobile browser.

ಬಾಂಗ್ಲಾ ಹಿಂದುಗಳ ಮೇಲಿನ ದಾಳಿ ನಿಲ್ಲಿಸಲು ವಿಶ್ವಸಂಸ್ಥೆ ಮಧ್ಯಪ್ರವೇಶ ಮಾಡಲಿ

05:26 PM Nov 28, 2024 IST | Samyukta Karnataka
ಬಾಂಗ್ಲಾ ಹಿಂದುಗಳ ಮೇಲಿನ ದಾಳಿ ನಿಲ್ಲಿಸಲು ವಿಶ್ವಸಂಸ್ಥೆ ಮಧ್ಯಪ್ರವೇಶ ಮಾಡಲಿ

ಬೆಂಗಳೂರು: ಬಾಂಗ್ಲಾ ದೇಶದ ಸರ್ಕಾರ ಅಲ್ಲಿನ ಹಿಂದುಗಳ ಮೇಲಿನ ದೌರ್ಜನ್ಯವನ್ನು ನಿಲ್ಲಿಸಿ, ಇಸ್ಕಾನ್ ಸ್ವಾಮೀಜಿಯನ್ನು ತಕ್ಷಣ ಬಿಡುಗಡೆ ಮಾಡಬೇಕು. ಹಿಂದುಗಳ ಮೇಲಿನ ದಾಳಿ ನಿಲ್ಲಿಸಲು ವಿಶ್ವಸಂಸ್ಥೆ ಮಧ್ಯಪ್ರವೇಶ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಬಾಂಗ್ಲಾ ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆ ಖಂಡನೀಯವಾಗಿದ್ದು, ಅಲ್ಲಿನ ಅಲ್ಪಸಂಖ್ಯಾತ ಹಿಂದುಗಳ ಜೀವನ, ಆಸ್ತಿಪಾಸ್ತಿ ಅಪಾಯದಲ್ಲಿದೆ. ಜನರಿಂದ ಆಯ್ಕೆಯಾಗದ ಬಾಂಗ್ಲಾ ಸರ್ಕಾರ ಅಲ್ಲಿನ ಇಡೀ ಸಮುದಾಯವನ್ನು ಒಗ್ಗೂಡಿಸುತ್ತಿದ್ದು, ಅವರು ರಿಪಬ್ಲಿಕ್ ಆಫ್ ಬಾಂಗ್ಲಾ ದೇಶವನ್ನು ಮುಸ್ಲಿಂ ರಾಷ್ಟ್ರವನ್ನಾಗಿ ಮಾಡುವ ಪ್ರಯತ್ನ ನಡೆಸುತ್ತಿದ್ದಾರೆ.
ಇಸ್ಕಾನ್ ಸ್ವಾಮೀಜಿಯನ್ನು ಬಂಧಿಸಿರುವುದು ಅತ್ಯಂತ ಅವಾಸ್ತವಿಕ ಮತ್ತು ಕಾನೂನು ಬಾಹಿರವಾಗಿದೆ. ಯಾವುದೇ ರೀತಿಯ ಪ್ರಚೋದನೆ ಮಾಡದಿದ್ದರೂ ಸ್ವಾಮೀಜಿ ಅವರನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಿರುವುದು ಬಾಂಗ್ಲಾ ಸರ್ಕಾರದ ಸರ್ವಾಧಿಕಾರಿ ಧೋರಣೆಯನ್ನು ತೋರಿಸುತ್ತದೆ.
ಬಾಂಗ್ಲಾ ದೇಶ ಒಂದು ವಿಷಯವನ್ನು ನೆನಪಿಸಿಕೊಳ್ಳಬೇಕು. ಭಾರತೀಯ ಸೈನ್ಯದ ನೆರವಿನಿಂದ ಬಾಂಗ್ಲಾ ಪ್ರತ್ಯೇಕ ದೇಶವಾಗಿದೆ. ಭಾರತೀಯರ ಬೆಂಬಲದಿಂದಲೇ ಬಾಂಗ್ಲಾ ದೇಶದ ಅಸ್ತಿತ್ವ ಇದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ ಎಂದು ಎಚ್ಚರಿಸಿದ್ದಾರೆ.
ಎರಡನೇಯದಾಗಿ ಪ್ರತಿದಿನ ಭಾರತಕ್ಕೆ ಬಾಂಗ್ಲಾ ದೇಶಿಗರು ವಲಸೆ ಬರುತ್ತಿದ್ದು, ಭಾರತದ ಬೇರೆ ಬೇರೆ ರಾಜ್ಯಗಳಲ್ಲಿ ವಾಸಿಸುತ್ತಿದ್ದಾರೆ. ನಮ್ಮ ದೇಶ ಮತ್ತು ನಮ್ಮ ಸಮಾಜ ಬಹಳ ಸಹನೆಯಿಂದ ಇದೆ. ಆದರೆ, ಬಾಂಗ್ಲಾ ದೇಶದಲ್ಲಿ ಹಿಂದುಗಳ ಮೇಲಿನ ಹಿಂಸೆಯನ್ನು ಸಹಿಸಲು ಸಾಧ್ಯವಿಲ್ಲ.
ಭಾರತ ಸರ್ಕಾರ ಬಾಂಗ್ಲಾ ಗಡಿಯನ್ನು ತಕ್ಷಣ ಬಂದ್ ಮಾಡಿ, ಭಾರತಕ್ಕೆ ಬಾಂಗ್ಲಾ ಪ್ರಜೆಗಳು ನುಸುಳುವುದನ್ನು ತಡೆಯಬೇಕು. ಅಲ್ಲದೇ ಭಾರತದಲ್ಲಿ ವಾಸವಾಗಿರುವ ಬಾಂಗ್ಲಾ ಪ್ರಜೆಗಳನ್ನು ಯಾವುದೇ ಮುಲಾಜಿಲ್ಲದೇ ಅವರ ದೇಶಕ್ಕೆ ವಾಪಸ್ ಕಳುಹಿಸುವಂತೆ ಭಾರತ ಸರ್ಕಾರಕ್ಕೆ ಆಗ್ರಹಿಸುತ್ತೇನೆ.
ಇನ್ನು ಈ ವಿಷಯದಲ್ಲಿ ವಿಶ್ವಸಂಸ್ಥೆ ಮಧ್ಯ ಪ್ರವೇಶಿಸಿ ಬಾಂಗ್ಲಾ ದೇಶದಲ್ಲಿನ ಹಿಂದುಗಳ ಮೇಲಿನ ದೌರ್ಜನ್ಯವನ್ನು ತಡೆಯಬೇಕು. ಇಲ್ಲದಿದ್ದರೆ ಎರಡು ದೇಶಗಳ ನಡುವಿನ ಉತ್ತಮ ಸಂಬಂಧ ಹಾಳಾಗುತ್ತದೆ. ಇದಲ್ಲದೇ ಬಾಂಗ್ಲಾದೇಶ ನೆನಪಿಡಬೇಕು. ಪ್ರತಿ ದಿನ ತರಕಾರಿ, ಆಹಾರ ಧಾನ್ಯಗಳ ಖರೀದಿಗೆ ಭಾರತವನ್ನೇ ಅವಲಂಭಿಸಿದೆ. ಆದ್ದರಿಂದ ತಕ್ಷಣ ಹಿಂದುಗಳ ಮೇಲಿನ ದಾಳಿಯನ್ನು ನಿಲ್ಲಿಸಿ, ಇಸ್ಕಾನ್ ಸ್ವಾಮೀಜಿಯನ್ನು ಬಿಡುಗಡೆಗೊಳಿಸಿ, ಶಾಂತಿ ನೆಲೆಸುವಂತೆ ಮಾಡಬೇಕು. ಈ ಮೂಲಕ ಬಾಂಗ್ಲಾದಲ್ಲಿನ ಹಿಂದುಗಳ ರಕ್ಷಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.