ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಬಾಂಗ್ಲಾ ಹಿಂದೂ ರಕ್ಷಣೆ ಭಾರತದ ನೈತಿಕ ಹೊಣೆ

02:30 AM Dec 04, 2024 IST | Samyukta Karnataka

ಬಾಂಗ್ಲಾದಲ್ಲಿ ಈಗ ಹಿಂದೂಗಳ ಮಾರಣ ಹೋಮ ನಡೆಯುತ್ತಿದೆ. ಭಾರತ ತನ್ನ ರಾಜತಾಂತ್ರಿಕ ಸಂಬಂಧ ಮತ್ತು ಜಾಣ್ಮೆಯನ್ನು ಬಳಸಿಕೊಂಡು ಹಿಂದೂಗಳನ್ನು ಕೂಡಲೇ ರಕ್ಷಿಸುವುದು ಅಗತ್ಯ. ಬಾಂಗ್ಲಾದಲ್ಲಿರುವ ಹಿಂದೂಗಳನ್ನು ರಕ್ಷಿಸುವುದು ಭಾರತದ ಕರ್ತವ್ಯವೂ ಹೌದು. ಬೇರೆ ಯಾವ ದೇಶವೂ ಅಲ್ಲಿಯ ಹಿಂದೂಗಳನ್ನು ರಕ್ಷಿಸುವುದಿಲ್ಲ. ಅದ್ದರಿಂದ ಈಗಲೇ ಕ್ರಮ ಕೈಗೊಳ್ಳುವುದು ಅಗತ್ಯ.
ಇಸ್ಕಾನ್ ಸಂಸ್ಥೆಯ ಚಿನ್ಮಯ ಕೃಷ್ಣದಾಸ್ ಬ್ರಹ್ಮಚಾರಿ ಅವರನ್ನು ಅಲ್ಲಿಯ ಸರ್ಕಾರ ಬಂಧಿಸಿದ ಮೇಲೆ ಪರಿಸ್ಥಿತಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಅದೇರೀತಿ ಅಗರ್ತಲಾದಲ್ಲಿ ಬಾಂಗ್ಲಾ ಸಹಾಯಕ ಹೈಕಮಿಷನ್ ಕಚೇರಿಯ ಮೇಲೆ ಹಲ್ಲೆ ನಡೆದಿದೆ. ಈ ಘಟನೆಗಳು ಎರಡೂ ದೇಶಗಳ ನಡುವೆ ದ್ವೇಷ ಭಾವನೆ ಬೆಳೆಯಲು ಕಾರಣವಾಗುತ್ತಿದೆ. ಹಿಂದೆ ಎರಡೂ ದೇಶಗಳ ನಡುವೆ ಉತ್ತಮ ಸಂಬಂಧವಿತ್ತು. ೧೯೭೧ ರಲ್ಲಿ ಬಾಂಗ್ಲಾ ಹೊಸ ದೇಶ ರಚನೆಗೊಂಡಾಗ ಭಾರತ ಸಂಪೂರ್ಣ ಬೆಂಬಲ ನೀಡಿತು. ಆಗಸ್ಟ್ ೫ರಂದು ಶೇಖ್ ಹಸೀನಾ ಬಾಂಗ್ಲಾ ಬಿಟ್ಟು ಓಡಿ ಬರುವವರೆಗೆ ಎರಡೂ ದೇಶಗಳ ನಡುವೆ ಸಂಕಷ್ಟ ತಲೆದೋರಿರಲಿಲ್ಲ. ಒಟ್ಟು ೧೩ ಬಿಲಿಯನ್ ಡಾಲರ್ ವ್ಯಾಪಾರ ವ್ಯವಹಾರ ಇದುವರೆಗೆ ನಡೆದುಕೊಂಡು ಬಂದಿತ್ತು. ಎರಡೂ ದೇಶಗಳ ನಡುವೆ ೪೦೦೬.೭ ಕಿಮೀ ಗಡಿ ಇದೆ. ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾ ನಡುವೆ ಉತ್ತಮ ಸಂಬಂಧವಿತ್ತು. ಈಗ ಅದಕ್ಕೆ ಧಕ್ಕೆ ಒದಗಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯೇ ಈಗ ಭಾರತದ ಹಸ್ತಕ್ಷೇಪ ಅನಿವಾರ್ಯ ಎಂದು ಹೇಳುತ್ತಿದ್ದಾರೆ. ಬಾಂಗ್ಲಾದಲ್ಲಿ ಈಗ ರೊಹಿಂಗ್ಯಾ ನಿರಾಶ್ರಿತರ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಈಗ ನಡೆಯುತ್ತಿರುವ ಎಲ್ಲ ಹಿಂಸಾಕೃತ್ಯಗಳ ಹಿಂದೆ ಅವರ ಕೈವಾಡವಿದೆ ಎಂದು ಶಂಕಿಸಲಾಗಿದೆ. ಶೇಖ್ ಹಸೀನಾ ಸರ್ಕಾರ ಬಿದ್ದು ಹೋದಮೇಲೆ ಮಧ್ಯಂತರ ಸರ್ಕಾರ ರಚನೆಯಾದರೂ ಹಿಂಸಾಕೃತ್ಯಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಅಲ್ಲಿಯ ಸರ್ಕಾರ ತನ್ನ ಅಸಹಾಯಕತೆ ಮುಚ್ಚಿಕೊಳ್ಳಲು ಭಾರತ ಸರ್ಕಾರದ ಮೇಲೆ ಆರೋಪ ಮಾಡುತ್ತಿವೆ. ಇಸ್ಕಾನ್ ಸಂಸ್ಥೆ ಇದುವರೆಗೆ ಧಾರ್ಮಿಕ ಚಟುವಟಿಕೆಗಳಿಗೆ ಮಾತ್ರ ಸೀಮಿತಗೊಂಡಿದೆ. ಅದನ್ನು ಈಗ ಬಾಂಗ್ಲಾದಲ್ಲಿ ನಿಷೇಧಿಸಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಬಾಂಗ್ಲಾದಲ್ಲಿ ಜವಳಿ ಉದ್ಯಮ ಬೃಹದಾಕಾರವಾಗಿ ಬೆಳೆದಿದೆ. ಅದು ಹೆಚ್ಚು ಜನರಿಗೆ ಉದ್ಯೋಗ ನೀಡುತ್ತದೆ. ಅಲ್ಲದೆ ಮೀನುಗಾರಿಕೆ ದಿನನಿತ್ಯದ ಆದಾಯಕ್ಕೆ ಮೂಲ. ಇವೆರಡೂ ನಿಂತು ಹೋದರೆ ಬಾಂಗ್ಲಾ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕುವುದು ಖಚಿತ. ಈಗ ಆ ಪರಿಸ್ಥಿತಿ ತಲೆದೋರುತ್ತಿದೆ. ಇದಕ್ಕೆ ವಿಶ್ವ ಬ್ಯಾಂಕ್ ಸೇರಿದಂತೆ ಹೊರ ದೇಶಗಳ ನೆರವು ಅಗತ್ಯ. ಆರ್ಥಿಕ ನೆರವು ಬೇಕು ಎಂದರೆ ಮೊದಲು ಹಿಂಸಾಕೃತ್ಯ ನಿಲ್ಲಬೇಕು. ಇದಕ್ಕೆ ವಿಶ್ವಸಂಸ್ಥೆ ಶಾಂತಿ ಪರಿಪಾಲನಾ ಪಡೆಯನ್ನು ಕಳುಹಿಸಬೇಕೆಂಬ ಬೇಡಿಕೆಯೂ ಇದೆ. ಮಧ್ಯಂತರ ಸರ್ಕಾರ ಆದಷ್ಟು ತ್ವರಿತಗತಿಯಲ್ಲಿ ಸಾರ್ವತ್ರಿಕ ಚುನಾವಣೆ ನಡೆಸಿ ಚುನಾಯಿತ ಸರ್ಕಾರವನ್ನು ತರುವವರೆಗೆ ಶಾಂತಿ ನೆಲೆಸುವುದು ಕಷ್ಟ. ಭಾರತ ಸರ್ಕಾರ ಒಂದು ವೇಳೆ ಬಾಂಗ್ಲಾ ನಿರಾಶ್ರಿತರಿಗೆ ಬಾಗಿಲು ತೆರೆದರೆ ಇಡೀ ಸಮಸ್ಯೆಯನ್ನು ಮೈಮೇಲೆ ಎಳೆದುಕೊಂಡಂತೆ ಆಗುತ್ತದೆ. ಮಮತಾ ತಮ್ಮ ಒಂದು ರೊಟ್ಟಿಯನ್ನು ಬಾಂಗ್ಲಾದವರೊಂದಿಗೆ ಹಂಚಿಕೊಳ್ಳುವುದಾಗಿ ಹೇಳಿದ್ದಾರೆ. ಏನಾದರೂ ಉದಾರತೆ ತೋರಿದರೆ ಒಂದು ರೊಟ್ಟಿಯಲ್ಲ. ಏನೂ ಉಳಿಯುವುದಿಲ್ಲ. ಅಲ್ಲಿಯ ಜನ ಅಲ್ಲೇ ಇರುವ ಹಾಗೆ ಪರಿಹಾರ ಕಂಡು ಹಿಡಿಯುವುದು ಮುಖ್ಯ. ಕೇಂದ್ರ ಸರ್ಕಾರ ಈ ವಿಷಯದಲ್ಲಿ ಈಗಾಗಲೇ ಕಾರ್ಯಪ್ರವೃತ್ತವಾಗಿದೆ ಎಂದು ಗೊತ್ತಾಗಿದೆ. ಸ್ನೇಹ ಸಂಬಂಧ ಹೊಂದಿರುವ ಮುಸ್ಲಿಂ ದೇಶಗಳ ಮೂಲಕ ಭಾರತ ಅಲ್ಲಿ ಶಾಂತಿ ನೆಲೆಸುವಂತೆ ಪ್ರಯತ್ನ ಮಾಡಬೇಕಿದೆ. ಈ ವಿಷಯದಲ್ಲಿ ಪ್ರತಿಪಕ್ಷಗಳೂ ಸರ್ಕಾರದೊಂದಿಗೆ ಸಹಕರಿಸುವುದು ಅಗತ್ಯ. ಕೇಂದ್ರದ ಕ್ರಮಗಳ ಬಗ್ಗೆ ಅಪಸ್ವರ ಕೇಳಿ ಬರಬಾರದು. ಬಾಂಗ್ಲಾ ಸರ್ಕಾರ ಕೂಡ ಈ ವಿಷಯದಲ್ಲಿ ತಾಳ್ಮೆವಹಿಸುವುದು ಅಗತ್ಯ. ಅದರಲ್ಲೂ ವದಂತಿಗಳಿಗೆ ರೆಕ್ಕೆಪುಕ್ಕ ಬೆಳೆಯದಂತೆ ನೋಡಿಕೊಳ್ಳಬೇಕು. ಭಾರತದೊಂದಿಗೆ ಅಲ್ಲಿಯ ಸರ್ಕಾರ ಸುಮಧುರ ಬಾಂದವ್ಯ ಉಳಿಸಿಕೊಳ್ಳುವುದು ಬಾಂಗ್ಲಾಗೆ ಅನಿವಾರ್ಯ. ಚೀನಾ ಕೂಡ ಬಾಂಗ್ಲಾ ಬೆಳವಣಿಗೆ ಮೇಲೆ ಕಣ್ಣಿಟ್ಟಿರುವುದಂತೂ ನಿಜ.
ಇಂದಿನ ಅಗತ್ಯ ಹಿಂದೂಗಳ ರಕ್ಷಣೆ. ಅದಕ್ಕೆ ಬೇಕಾದ ಕ್ರಮವನ್ನು ಭಾರತ ಕೂಡಲೇ ಕೈಗೊಳ್ಳುವುದು ಅಗತ್ಯ. ಈ ವಿಷಯದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಸರ್ಕಾರಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸುವುದು ಮುಖ್ಯ. ೧೦೭೧ ರಲ್ಲಿ ಬಾಂಗ್ಲಾ ವಿಮೋಚನೆ ಕಾಲದಲ್ಲಿ ಇಂದಿರಾ ತೀರ್ಮಾನಗಳಿಗೆ ಎಲ್ಲ ರಾಜಕೀಯ ಪಕ್ಷಗಳ ಬೆಂಬಲ ವ್ಯಕ್ತವಾಗಿತ್ತು ಎಂಬುದನ್ನು ಮರೆಯಬಾರದು. ಈಗಲೂ ಅಂಥ ಸಂದರ್ಭ ಒದಗಿಬಂದಿದೆ. ಬಾಂಗ್ಲಾದಲ್ಲಿರುವ ಹಿಂದೂಗಳ ಸಂಬಂಧಿಕರು ಪಶ್ಚಿಮ ಬಂಗಾಳದಲ್ಲಿದ್ದಾರೆ. ಅವರು ತಮ್ಮ ಸಹೋದರರ ಮಾರಣಹೋಮವನ್ನು ಖಂಡಿತ ಸಹಿಸುವುದಿಲ್ಲ. ಹಲವು ದೇಶಗಳ ಸಂಘರ್ಷ ತಪ್ಪಿಸಲು ಮುಂದಾಗುವ ನಾವು ನಮ್ಮ ನೆರೆ ದೇಶದಲ್ಲಿ ನಡೆಯುವ ಹಿಂಸಾಚಾರ ಹತ್ತಿಕ್ಕಲು ಪ್ರಯತ್ನ ಮಾಡದೇ ಇರುವುದು ಅಕ್ಷಮ್ಯ ಅಪರಾಧವಾಗುತ್ತದೆ.

Next Article