ಬಾಂಬ್ ಬೆದರಿಕೆ ಕರೆ: ವಿಮಾನ ನಿಲ್ದಾಣದಲ್ಲಿ ತುರ್ತು ಸ್ಥಿತಿ ಘೋಷಣೆ
ಏರ್ ಇಂಡಿಯಾ ವಿಮಾನವನ್ನು ನಗರದ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ.
ಕೇರಳ: ಬಾಂಬ್ ಬೆದರಿಕೆಯ ಹಿನ್ನೆಲೆ ಮುಂಬೈನಿಂದ ತಿರುವನಂತಪುರಕ್ಕೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವನ್ನು ನಗರದ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ.
ಮುಂಬೈನಿಂದ ಬಂದ ಏರ್ ಇಂಡಿಯಾ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಇಂದು ಗುರುವಾರ ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಪೂರ್ಣ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ತಿರುವನಂತಪುರ ವಿಮಾನ ನಿಲ್ದಾಣದಲ್ಲಿ ಬೆಳಗ್ಗೆ 8.10ಕ್ಕೆ ಇಳಿಯಬೇಕಿದ್ದ ವಿಮಾನ ಬಾಂಬ್ ಬೆದರಿಕೆಯಿಂದಾಗಿ 7.50ರ ಸುಮಾರಿಗೆ ತುರ್ತು ಭೂಸ್ಪರ್ಶ ಮಾಡಿದೆ. ಪ್ರಯಾಣಿಕರನ್ನು ವಿಮಾನದಿಂದ ಸ್ಥಳಾಂತರಿಸಲಾಯಿತು. ನಂತರ ವಿವರವಾದ ತಪಾಸಣೆ ನಡೆಸಲಾಯಿತು. ಬಾಂಬ್ ಬೆದರಿಕೆಯ ಬಗ್ಗೆ ವಿಮಾನದ ಪೈಲಟ್ ಏರ್ ಟ್ರಾಫಿಕ್ ಕಂಟ್ರೋಲ್‌ಗೆ ಮಾಹಿತಿ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಾಂಬ್ ಬೆದರಿಕೆ ಬಂದ ನಂತರ ಸಂಪೂರ್ಣ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ. ವಿಮಾನವನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಅದೊಂದು ನಕಲಿ ಸಂದೇಶ ಎಂಬ ಸೂಚನೆ ಸಿಕ್ಕಿದ್ದು, ಭದ್ರತಾ ಕ್ರಮಗಳನ್ನು ಬಿಗಿಗೊಳಿಸಲಾಗಿದೆ.