For the best experience, open
https://m.samyuktakarnataka.in
on your mobile browser.

ಬಾಗಲಕೋಟೆ ಗೊಂದಲಿ ಪದ ಹಾಡುಗಾರನನ್ನು ಶ್ಲಾಘಿಸಿದ ಮೋದಿ

04:51 PM Feb 25, 2024 IST | Samyukta Karnataka
ಬಾಗಲಕೋಟೆ ಗೊಂದಲಿ ಪದ ಹಾಡುಗಾರನನ್ನು ಶ್ಲಾಘಿಸಿದ ಮೋದಿ

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿಯವರು 110ನೇ ಮನ್​ ಕೀ ಬಾತ್ ಕಾರ್ಯಕ್ರಮದಲ್ಲಿ ಬಾಗಲಕೋಟೆಯ ಗೊಂದಲಿ ಪದ ಹಾಡುಗಾರ ವೆಂಕಪ್ಪ ಅಂಬಾಜಿ ಸುಗತೇಕರ್ ಅವರನ್ನು ಶ್ಲಾಘಿಸಿದ್ದಾರೆ.
ಶಾಲೆಯ ಮೆಟ್ಟಿಲನ್ನೇ ಹತ್ತದೇ, ತಮ್ಮ ಬಾಲ್ಯದಿಂದಲೇ ಗೊಂದಲಿ ಜನಪದ ಹಾಡುಗಳ ಕಲೆಯನ್ನು ಉಸಿರಾಗಿಸಿಕೊಂಡು ನಾಡಿನಾದ್ಯಂತ ಹೆಸರು ವಾಸಿಯಾಗಿರುವ 81 ವರ್ಷದ ಕಲಾವಿದ ವೆಂಕಪ್ಪ ಅಂಬಾಜಿ ಸುಗತೇಕರ್ ಅವರು 150ಕ್ಕೂ ಹೆಚ್ಚು ಕಥೆ ಹೇಳುವ ಸಾವಿರಕ್ಕೂ ಅಧಿಕ ಗೊಂದಲಿ ಹಾಡುಗಳನ್ನು ಹಾಡಿದ್ದಾರೆ.
15ನೇ ವಯಸ್ಸಿನಿಂದಲೇ ವಂಶಪಾರಂಪರ್ಯವಾಗಿ ಬಂದ ಗೊಂದಲಿ ಜನಪದ ಹಾಡುಗಳನ್ನು ಕಲಿತಿದ್ದಾರೆ. ಇವರ ಗೊಂದಲಿ ಪದ ಸೇವೆಗೆ 2022ರಲ್ಲಿ ಜನಪದ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತು. 2012ರಲ್ಲಿ ರಾಜ್ಯ ಸರ್ಕಾರ “ರಾಜ್ಯೋತ್ಸವ ಪ್ರಶಸ್ತಿ” ನೀಡಿ ಗೌರವಿಸಿದೆ.
ಇವರ ಕಲಾಸೇವೆಯನ್ನು ಗುರುತಿಸಿದ ಪ್ರಧಾನಿ ಮೋದಿ, ತಮ್ಮ 110ನೇ ಮನ್ ಕೀ ಬಾತ್‍ನಲ್ಲಿ ಅವರ ಗುಣಗಾನ ಮಾಡಿದ್ದಾರೆ. “ಭಾರತದ ಸಂಸ್ಕೃತಿ, ಗಾಯನಗಳಿಗೆ ಲಕ್ಷಾಂತರ ಜನ ಕೊಡುಗೆ ನೀಡಿದ್ದಾರೆ. ಕರ್ನಾಟಕದ ಬಾಗಲಕೋಟೆಯ ನವನಗರದ ನಿವಾಸಿಯಾಗಿರುವ ವೆಂಕಪ್ಪ ಅಂಬಾಜಿ ಸುಗತೇಕರ್ ಅವರು ಸಾವಿರಕ್ಕೂ ಅಧಿಕ ಜನಪದ(ಗೊಂದಲಿ) ಹಾಡುಗಳನ್ನು ಹಾಡಿ ಜನಪ್ರಿಯರಾಗಿದ್ದಾರೆ. ಹಾಗೆಯೇ, ಇವರು ಒಂದು ರೂಪಾಯಿಯನ್ನೂ ಪಡೆಯದೆ ಸಾವಿರಾರು ಜನರಿಗೆ ಜನಪದ ಹಾಡುಗಳನ್ನು ಹಾಡುವುದನ್ನು ಕಲಿಸಿದ್ದಾರೆ. ಇವರ ಸೇವೆ ಶ್ಲಾಘನೀಯವಾಗಿದೆ” ಎಂದಿದ್ದಾರೆ. ಈ ಮೂಲಕ ಜನಪದ ಕಲಾವಿದ ವೆಂಕಪ್ಪ ಅವರ ಸಾಧನೆಗೆ ಮತ್ತೊಂದು ಗರಿ ಬಂದಂತಾಗಿದೆ.