For the best experience, open
https://m.samyuktakarnataka.in
on your mobile browser.

ಬಾಣಂತಿಯರ ಸಾವಿನ ತನಿಖಾ ವರದಿ ಸರಕಾರದ ಕೈಗೆ

01:06 PM Nov 19, 2024 IST | Samyukta Karnataka
ಬಾಣಂತಿಯರ ಸಾವಿನ ತನಿಖಾ ವರದಿ ಸರಕಾರದ ಕೈಗೆ

ಬಾಣಂತಿಯರು ಸಾವನ್ನಪ್ಪಿದ ಘಟನೆ ನಡೆದರು ಬಳ್ಳಾರಿ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಅತ್ತ ಕಡೆ ತಲೆಯೂ ಹಾಕದೇ ಇರುವುದು ಟೀಕೆಗೆ ಗುರಿಯಾಗಿದೆ.

ಮಲ್ಲಿಕಾರ್ಜುನ ಚಿಲ್ಕರಾಗಿ, ಬಳ್ಳಾರಿ

ಬಳ್ಳಾರಿ: ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆಗೆ ದಾಖಲಾಗಿದ್ದ ಮೂವರು ಬಾಣಂತಿಯರು ಶಸ್ತ್ರಚಿಕಿತ್ಸೆ ವೇಳೆ ಸೋಂಕು ತಗುಲಿ ಮೃತಪಟ್ಟ ಘಟನೆಯ ತನಿಖಾ ವರದಿ ಸರಕಾರದ ಕೈ ಸೇರಿದೆ. ಆದರೆ ವರದಿಯಲ್ಲಿನ ಅಂಶ ಇದುವರೆಗೂ ಬಹಿರಂಗವಾಗದೇ ಇರುವುದು ಅನುಮಾನಕ್ಕೆ ಕಾರಣವಾಗಿದೆ!.
ಬಳ್ಳಾರಿ ನಗರದಲ್ಲಿನ ಘೋಷ್ ಆಸ್ಪತ್ರೆಯಲ್ಲಿ ಹೆರಿಗೆಗೆ ದಾಖಲಾಗಿದ್ದ ಏಳು ಜನ ಗರ್ಭಿಣಿಯರನ್ನು ಒಂದೇ ದಿನ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿತ್ತು. ಈ ಅವಧಿಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಏಳು ಜನ ಬಾಣಂತಿಯರಿಗೆ ಹೆರಿಗೆ ಬಳಿಕ ಸೋಂಕು ತಗುಲಿತ್ತು. ನ.೧೨ರಂದು ನಂದಿನಿ ಮತ್ತು ಲಲಿತಮ್ಮ ಎನ್ನುವ ಬಾಣಂತಿಯರು ಹೆರಿಗೆಯಾದ ಕೆಲವೇ ಗಂಟೆಗಳಲ್ಲಿ ಮೃತಪಟ್ಟಿದ್ದರು. ಉಳಿದ ಐದು ಜನ ಬಾಣಂತಿಯರು ಗಂಭೀರ ಪರಿಸ್ಥಿತಿಯಲ್ಲಿದ್ದರಿಂದ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಯಿಂದ ಬಳ್ಳಾರಿ ವಿಜಯನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬಿಮ್ಸ್)ಗೆ ಸ್ಥಳಾಂತರಿಸಲಾಗಿತ್ತು. ಐವರಲ್ಲಿ ಎಮ್ಮಿಗನೂರಿನ ರೋಜಮ್ಮ ಎನ್ನುವವರೂ ನ.೧೪ರಂದು ಚಿಕಿತ್ಸೆ ಫಲಕಾರಿಯಾಗದೇ ಬಿಮ್ಸ್‌ನಲ್ಲಿ ಮೃತಪಟ್ಟರು. ಜಿಲ್ಲಾಸ್ಪತ್ರೆಯ ಅವಘಡಕ್ಕೆ ಮೂರು ಜನ ಪ್ರಾಣ ಕಳೆದುಕೊಂಡರೆ, ಇನ್ನುಳಿದ ೪ ಜನರು ಗಂಭೀರವಾಗಿದ್ದರು. ಪರಿಸ್ಥಿತಿ ಅರಿತ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಸಚಿವರು, ಘಟನೆ ಸಂಬಂಧ ಸಮಗ್ರ ತನಿಖೆ ತಂಡ ನೇಮಿಸಿ ತನಿಖಾ ವರದಿ ನೀಡುವಂತೆ ಆದೇಶ ನೀಡಿದ್ದರು.

ಸಿಎಸ್ ಕೈ ಸೇರಿದ ವರದಿ: ಕುಲಸಚಿವರ ಆದೇಶದ ಮೇರೆಗೆ ತನಿಖೆಗೆ ಇಳಿದಿದ್ದ ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ. ಸವಿತಾ ಸಿ., ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಸಹ ಪ್ರಾಧ್ಯಾಪಕ ಡಾ. ಭಾಸ್ಕರ್ ಬಿ. ಹಾಗೂ ಸಹಾಯಕ ಪ್ರಾಧ್ಯಾಪಕ ಡಾ. ಹರ್ಷ ಟಿ.ಆರ್. ಬಳ್ಳಾರಿಯ ಜಿಲ್ಲಾಸ್ಪತ್ರೆ ಹಾಗೂ ಬಿಮ್ಸ್ಗೆ ಬೇಟಿ ನೀಡಿ ಬಾಣಂತಿಯರ ಸಾವಿನ ಪ್ರಕರಣದ ಕುರಿತು ವಿಚಾರಣೆ ನಡೆಸಿದ್ದರು. ಸಾವಿಗೆ ಕಾರಣವೇನು? ವೈದ್ಯರ ನಿರ್ಲಕ್ಷ್ಯಯದಿಂದ ಘಟನೆ ನಡೆದಿದೆಯಾ? ನರ್ಸಿಂಗ್ ವಿಭಾಗದ ಸಮಸ್ಯೆಯೇ? ಆಪರೇಷನ್ ಥೇಯಟರ್‌ನಲ್ಲಿನ ಲೋಪದೋಷಗಳೇ? ಸೇರಿ ಹಲವು ಕೋನದಲ್ಲಿ ತನಿಖೆ ನಡೆಸಿ ಸಮಗ್ರ ವರದಿಯನ್ನು ಸರಕಾರದ ಮುಖ್ಯಕಾರ್ಯದರ್ಶಿಗಳಿಗೆ ನ.೧೬ರಂದು ವರದಿ ಸಲ್ಲಿಕೆ ಮಾಡಿದ್ದಾರೆ.

ಇದುವರೆಗೂ ಕ್ರಮವಿಲ್ಲ: ಮೂವರು ಬಾಣಂತಿಯರ ಸರಣಿ ಸಾವಿನ ವರದಿ ಸರಕಾರದ ಕೈ ಸೇರಿ ಮೂರು ದಿನಗಳಾದರೂ ಇದುವರೆಗೂ ಯಾರ ಮೇಲೆ ಕ್ರಮ ಜರುಗಿಲ್ಲ. ಅಲ್ಲದೇ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್‌ಖಾನ್ ಕೂಡ ಇತ್ತ ತಿರುಗಿಯೂ ನೋಡಿಲ್ಲ. ಅಮಾಯಕರ ಸಾವಿನ ಸತ್ಯಾಂಶವನ್ನು ಬಹಿರಂಗ ಪಡಿಸದೇ ಸರಕಾರ ಯಾಕೆ ಮುಚ್ಚಿಡುತ್ತಿದೆ? ನಿರ್ಲಕ್ಷ್ಯತ ವೈದ್ಯರ ರಕ್ಷಿಸುವ ಹುನ್ನಾರ ನಡೆದಿದೆಯಾ? ಹಲವು ವರ್ಷಗಳಿಂದ ಇಲ್ಲಿಯೇ ಬೀಡು ಬಿಟ್ಟ ವೈದ್ಯಾಧಿಕಾರಿಗಳನ್ನು ರಕ್ಷಿಸಲು ಪ್ರಭಾವಿಗಳು ಸರಕಾರದ ಮೇಲೆ ಒತ್ತಡ ಹಾಕುತ್ತಿದ್ದಾರಾ? ಎನ್ನುವ ಹಲವು ಅನುಮಾನಗಳು ಈಗ ಬಲವಾಗಿವೆ.

ಸರಕಾರದ ನಿರ್ದೇಶದ ಮೇರೆಗೆ ಬಳ್ಳಾರಿಯಲ್ಲಿ ಉಂಟಾಗಿದ್ದ ಬಾಣಂತಿಯರ ಸಾವಿನ ಪ್ರಕರಣದ ಕುರಿತು ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿ ವಿವರವಾದ ವರದಿಯನ್ನು ಸರಕಾರಕ್ಕೆ ಸಲ್ಲಿಸಿದ್ದೇವೆ.

: ಡಾ.ಸವಿತಾ, ಅಧೀಕ್ಷಕರು, ವಾಣಿವಿಲಾಸ ಆಸ್ಪತ್ರೆ ಬೆಂಗಳೂರು.

ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಉಂಟಾದ ಬಾಣಂತಿಯರ ಮರಣದ ಬಗ್ಗೆ ತನಿಖೆಗೆ ತಂಡವನ್ನು ಸರಕಾರ ರಚಿಸಿತ್ತು. ಆ ವರದಿ ಸಲ್ಲಿಕೆ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಸರಕಾರದಿಂದಲೂ ನಮಗೆ ಯಾವ ನಿರ್ದೇಶನವೂ ಬಂದಿಲ್ಲ. ಸದ್ಯ ಉಳಿದ ಬಾಣಂತಿಯರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇಬ್ಬರ ಆರೋಗ್ಯ ಸುಧಾರಿಸಿದ್ದು, ಡಿಸ್ಜಾರ್ಚ್ ಮಾಡಲಾಗಿದೆ. ಉಳಿದವರ ಚಿಕಿತ್ಸೆ ಮುಂದುವರಿದಿದೆ ಎಂದು ವೈದ್ಯರು ಹೇಳಿದ್ದಾರೆ.

: ಪ್ರಶಾಂತ್ ಕುಮಾರ ಮಿಶ್ರಾ, ಜಿಲ್ಲಾಧಿಕಾರಿ ಬಳ್ಳಾರಿ.

Tags :