ಬಾಣಂತಿ ಸಾವು-ತನಿಖೆ ಕ್ರಮ ತ್ವರಿತವಾಗಲಿ
ಬಳ್ಳಾರಿ ಬಾಣಂತಿಯರ ಸಾವಿನ ಕುರಿತು ಸರ್ಕಾರ ಕೊನೆಗೂ ಗಂಭೀರವಾಗಿ ಪರಿಗಣಿಸಿ, ಔಷಧ ನಿಯಂತ್ರಕರನ್ನು ಅಮಾನತು ಮಾಡಿರುವುದು ಸೂಕ್ತವಾದ ಕ್ರಮವಾಗಿದೆ. ತಡವಾಗಿ ಇಡಲಾದ ಈ ಹೆಜ್ಜೆಯನ್ನು ನಿರ್ಣಾಯಕ ಹಂತಕ್ಕೆ ತೆಗೆದುಕೊಂಡು ಹೋಗುವುದು ಈಗ ಸರ್ಕಾರದ ಜವಾಬ್ದಾರಿ; ಜೊತೆಗೆ ನಾಡಿನ ಜನತೆ ನಿರೀಕ್ಷಿಸುತ್ತಿರುವ ಉತ್ತರದಾಯಿತ್ವದ ಕ್ರಮವಾಗಿದೆ.
ಔಷಧ ನಿಯಂತ್ರಕರ ಮೇಲಿನ ಕ್ರಮದಂತೆಯೇ ಬಾಣಂತಿಯರ ಜೀವ ಕಬಳಿಕೆಗೆ ಕಾರಣವಾದ ಐವಿ ದ್ರಾವಣ ಪೂರೈಸಿದ ಪಶ್ಚಿಮ ಬಂಗಾಳದ ಔಷಧ ಕಂಪನಿಯ ವಿರುದ್ಧ ಕಠಿಣ ಕಾನೂನು ಕ್ರಮವಾಗುವಂತೆ ನೋಡಿಕೊಳ್ಳಬೇಕಾದ ಬದ್ಧತೆ ಸರ್ಕಾರದ ಮೇಲಿದೆ. ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಿ ಕ್ರಿಮಿನಲ್ ಮೊಕದ್ದಮೆ ಹೂಡಿರುವುದು ಸರಿಯಾಗಿದೆ. ಆದರೆ ಈ ಕಂಪನಿ ಇಡೀ ದೇಶದಲ್ಲಿ ಕಪ್ಪು ಪಟ್ಟಿಗೆ ಸೇರುವಂತೆ ರಾಜತಾಂತ್ರಿಕ ಮಾರ್ಗೋಪಾಯಗಳನ್ನು ಅನುಸರಿಸಬೇಕಾದುದು ರಾಜ್ಯದ ಹೊಣೆಯಾಗಿದೆ.
ಏಕೆಂದರೆ ಇದು ಕೇವಲ ಬಳ್ಳಾರಿ ಒಂದರಲ್ಲಿ ನಡೆದ ಅಮಾನವೀಯ ಘಟನೆಯಲ್ಲ. ದೇಶದ ಇನ್ನು ಯಾವ ಯಾವ ನಗರ-ಪಟ್ಟಣದ ಆಸ್ಪತ್ರೆಗಳಿಗೆ ಈ ಕಂಪನಿಯಿಂದ ಐವಿ ದ್ರಾವಣ ಸರಬರಾಜು ಆಗಿದೆಯೋ ಅಲ್ಲೆಲ್ಲ ಅಪಾಯ ಕಾದಿರುತ್ತದೆ. ಆದ್ದರಿಂದ ಕೇಂದ್ರದ ಜೊತೆಗೆ ಸಮನ್ವಯ ಸಾಧಿಸಿ ಇಂತಹ ದುರುಳರನ್ನು ಶಾಶ್ವತವಾಗಿ ಮಾರುಕಟ್ಟೆಯಿಂದ ಹೊರಗಿಡಬೇಕಾಗಿದೆ. ಹಾಗೆಯೇ ಕೇಂದ್ರ ಸರ್ಕಾರ ಕೂಡ ತನ್ನ ಹೊಣೆಯನ್ನು ತಪ್ಪಿಸಿಕೊಳ್ಳುವಂತಿಲ್ಲ. ತಕ್ಷಣ ಮಧ್ಯ ಪ್ರವೇಶಿಸಿ ಕರ್ನಾಟಕದಲ್ಲಿ ಆಗಿರುವ ಈ ಮಾನವೀಯ ದುರಂತವನ್ನು ಕೇಂದ್ರ ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು ಮತ್ತು ಪ್ರಸಕ್ತ ಕಂಪನಿಯ ವಿರುದ್ಧ ಬಿಎನ್‌ಎಸ್ ನಿಯಮಗಳ ಅನುಸಾರ ಕಠೋರ ಕ್ರಮಗಳನ್ನು ತೆಗೆದುಕೊಳ್ಳಬೇಕು.
ತುಮಕೂರು ಜಿಲ್ಲೆಯ ಪಾವಗಡ, ರಾಯಚೂರು ಜಿಲ್ಲೆಯ ಸಿಂಧನೂರು, ಬೆಳಗಾವಿ ಜಿಲ್ಲೆಯ ರಾಮದುರ್ಗ ಮಾತ್ರವಲ್ಲದೇ, ರಾಜ್ಯದ ಇನ್ನೂ ಅನೇಕ ಕಡೆಗಳಲ್ಲಿ ಈ ಐವಿ ದ್ರಾವಣವೇ ಬಾಣಂತಿಯರ ಸಾವಿಗೆ ಕಾರಣವಾಗುತ್ತಿರಬಹುದು ಎನ್ನುವ ಮಾತನ್ನು ವೈದ್ಯಕೀಯ ಲೋಕ ಮೊದಲೇ ಹೇಳಿತ್ತೆಂಬುದು ಈಗ ಬೆಳಕಿಗೆ ಬರುತ್ತಿರುವ ಸಂಗತಿ. ಆದ್ದರಿಂದ ಸರ್ಕಾರದ ಸ್ಪಂದನೆಯಲ್ಲಿ ತಡವಾಗಿರುವುದು ಕಾಣುತ್ತಿದೆ.
ಸರ್ಕಾರಕ್ಕೆ ಕಪ್ಪುಚುಕ್ಕೆಯಾದೀತು ಎಂಬ ಏಕೈಕ ಕಾರಣದಿಂದ ವೈದ್ಯ ಲೋಕದ ಈ ಅನುಮಾನಗಳನ್ನು ಬಯಲಿಗೆ ಬಾರದಂತೆ ನೋಡಿಕೊಳ್ಳಲಾಗಿತ್ತು ಎಂಬುದು ನಿಸ್ಸಂಶಯ. ಬಾಣಂತಿಯರ ಸಾವಿಗೆ ಬೇರೆ ಕಾರಣವನ್ನು ನೀಡಿ ಹೊರಬಾರದಂತೆ ನೋಡಿಕೊಂಡಿದ್ದು ಖಾಸಗಿ ಔಷಧ ಕಂಪನಿಗೆ ಪೂರಕವಾಗಿತ್ತೇ ವಿನಾ ನಾಡಿಗಲ್ಲ.
ಅದೇನೇ ಇದ್ದರೂ ಈಗ ದೂಷಿಸುತ್ತ ಕೂಡುವ ಸಮಯವಲ್ಲ. ಹಾಗೆಂದು, ಒಂದು ಕಂಪನಿಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡ ಮಾತ್ರಕ್ಕೆ ಸಮಸ್ಯೆ ಬಗೆಹರಿದಂತೆಯೂ ಅಲ್ಲ. ಆದ್ದರಿಂದ ಎಷ್ಟು ಸಾಧ್ಯವೋ ಅಷ್ಟು ಬೇಗ ತನಿಖಾ ವರದಿ ಸ್ವೀಕರಿಸಿ ಕ್ರಮ ತೆಗೆದುಕೊಳ್ಳಬೇಕಾದ ಸಂದರ್ಭವಿದು. ಅಲ್ಲದೇ ರಾಜ್ಯದ ಯಾವುದಾದರೂ ವ್ಯಕ್ತಿ-ಸಂಸ್ಥೆಯ ಸ್ವಹಿತ' ಈ ಔಷಧ ಕಂಪನಿಯೊಂದಿಗೆ ಮಿಳಿತವಾಗಿದೆಯೇ ಎಂಬ ಅಂಶಗಳನ್ನೂ ತನಿಖೆಗೆ ಒಳಪಡಿಸಬೇಕು. ಕೇಂದ್ರ ಪ್ರಯೋಗಾಲಯದಿಂದ
ಸರಿಯಿದೆ' ಎಂದು ಪ್ರಮಾಣಿತವಾಗಿ ರಾಜ್ಯದಲ್ಲಿ ಕಲಬೆರಕೆ ಎಂಬುದು ಬಯಲಿಗೆ ಬಂದಿರುವುದು ಈ ಐವಿ ದ್ರಾವಣದ ವಿಷಯದಲ್ಲಿ ಇನ್ನೊಂದು ಗಂಭೀರ ಲೋಪ. ದೊಡ್ಡ ಮಟ್ಟದ ಔಷಧ ಮಾಫಿಯಾ ಕೆಲಸ ಮಾಡುತ್ತಿರುವ ಅನುಮಾನ ಇದರಿಂದ ಮೂಡುವಂತಾಗಿದೆ.
ರಾಷ್ಟ್ರೀಯ ಮಟ್ಟದಲ್ಲಿ ಆಸ್ಪತ್ರೆಗಳ ಗುಣಮಟ್ಟ ಅಳೆಯಲು ಪ್ರತ್ಯೇಕ ಸಂಸ್ಥೆ ಇದೆ. ಇದರ ಮಾನದಂಡಗಳನ್ನು ಖಾಸಗಿ ಆಸ್ಪತ್ರೆಗಳು ಪಾಲಿಸುತ್ತವೆ. ಸರ್ಕಾರಿ ಆಸ್ಪತ್ರೆಗಳು ಇವುಗಳತ್ತ ಗಮನಹರಿಸುವುದಿಲ್ಲ. ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಡೆತ್ ಆಡಿಟ್‌ಗೆ ಆದೇಶಿಸಬೇಕು.
ಕೇಂದ್ರ ಸರ್ಕಾರ ಹೊಣೆಯಿಂದ ವಿಮುಖವಾಗದೇ ಪರಿಣತ ವೈದ್ಯರ ತಂಡವನ್ನು ಕಳುಹಿಸಿ ಕೂಡಲೇ ಪರಿಶೀಲನೆ ನಡೆಸಬೇಕು. ಬಡಜನರ ಪ್ರಾಣದೊಂದಿಗೆ ಚೆಲ್ಲಾಟವಾಡಬಾರದು.
ಆಳುವವರ ಮೇಲೆ ನಂಬಿಕೆ ಇಟ್ಟು ಬಡವರು ಸರ್ಕಾರಿ ಆಸ್ಪತ್ರೆಗಳಿಗೆ ಹೋಗುತ್ತಾರೆ. ಇಂತಹ ಬಡ ಪ್ರಜೆಗಳಿಗೆ ಕಲಬೆರಕೆ ಔಷಧ ಕೊಡುವುದು ಎಂದರೆ ತಾಯಿಯೇ ಮಕ್ಕಳಿಗೆ ವಿಷ ಹಾಕಿದಂತೆ. ಅದಕ್ಕಿಂತ ಪಾಪದ ಕೆಲಸ ಮತ್ತೊಂದಿಲ್ಲ ಎಂಬುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು.
ಅಷ್ಟೇ ಅಲ್ಲದೇ, ಈಗ ಮೃತ ಬಾಣಂತಿಯರ ಹಸುಗೂಸುಗಳಿಗೆ ತಲಾ ೨ ಲಕ್ಷ ಪರಿಹಾರ ಹಾಗೂ ಔಷಧ ಕಂಪನಿಯಿಂದ ಕೂಡ ಪರಿಹಾರ ಕೊಡಿಸಿದಷ್ಟಕ್ಕೇ ಸಮಸ್ಯೆ ಮುಗಿದಿಲ್ಲ. ಎದೆ ಹಾಲು ಕುಡಿಯುವುದರಿಂದಲೂ ವಂಚಿತರಾಗಿ ಬೆಳೆಯುವ ಈ ಕಂದಮ್ಮಗಳ ಮುಂದಿನ ಸ್ಥಿತಿ ಏನು? ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ, ಈ ಮಕ್ಕಳ ಪಾಲನೆಗಾಗಿಯೇ ಪ್ರತ್ಯೇಕ ಯೋಜನೆಯೊಂದನ್ನು ಘೋಷಿಸಬೇಕು.