For the best experience, open
https://m.samyuktakarnataka.in
on your mobile browser.

ಬಾನುಲಿ ಗೆಳೆಯ ಬಾನಲ್ಲಿ ಲೀನ

02:00 AM Feb 25, 2024 IST | Samyukta Karnataka
ಬಾನುಲಿ ಗೆಳೆಯ ಬಾನಲ್ಲಿ ಲೀನ

ನಮಸ್ಕಾರ್
ಬೆಹನೋ ಔರ್
ಭಾಯಿಯೋ…

ಎಂದು ಉಲಿಯುತ್ತಿದ್ದ ಕಂಚಿನ ಕಂಠದ ಮಧುರ ಬಾನ ದನಿ ಮರೆಯಾಗಿದೆ.
ಮೈ ಆಪ್ ಕಾ ದೋಸ್ತ್ ಅಮೀನ್ ಸಯಾನಿ ಬೋಲ್ ರಹಾ ಹೂಂ''.. ಎಂದು ದಶಕಗಳ ಕಾಲ ಪ್ರತಿ ಬುಧವಾರದ `ಜನಪ್ರಿಯ ಬಿನಾಕಾ ಗೀತ್ ಮಾಲಾ’ ಮೂಲಕ ರೇಡಿಯೋದಲ್ಲಿ ಹಾಜರಾಗುತ್ತಿದ್ದ ಖ್ಯಾತ ಉದ್ಘೊಷಕ ಅದೇ ಬುಧವಾರದ ದಿನವೇ ಸ್ವರಪ್ರೇಮಿಗಳನ್ನು ಅಗಲಿದ್ದಾರೆ. ಈ ಮೂಲಕ ಬಾನುಲಿಯ ಸ್ವರ್ಣಯುಗವೊಂದು ಅಂತ್ಯವಾಗಿದೆ. ಸುಮಾರು ೫೦ ವರ್ಷಗಳ ಕಾಲ ದೇಶಾದ್ಯಂತ ಜನರು ಹುಚ್ಚೆದ್ದು ಗೀತಮಾಲಾ ಕಾರ್ಯಕ್ರಮವನ್ನು ಕೇಳುವಂತೆ ಹಿಡಿದಿಡುತ್ತಿದ್ದುದು ಸಯಾನಿ ಅವರ ಇಂಪಿನ, ಕಂಪಿನ ಚಿರಪರಿಚಿತ ಧ್ವನಿ ಹಾಗೂ ಅನುಕರಿಸಲಾಗದಂಥ, ವಿಶಿಷ್ಟ, ಅನುಪಮ ಏಕಮೇವಾದ್ವಿತೀಯ ಶೈಲಿಯ ಧ್ವನಿ. ಆ ಧ್ವನಿಯಲ್ಲಿ ಆಪ್ತತೆ ಇತ್ತು.ನಾನು ನಿಮ್ಮ ಪ್ರೀತಿಯ ಅಮೀನ್ ಸಯಾನಿ'' ಎಂದು ಅವರು ಹೇಳುವಾಗ ಎಲ್ಲರೂ ಕನೆಕ್ಟ್ ಆಗುತ್ತಿದ್ದರು. “ನಾನು ಎಲ್ಲ ಶ್ರೋತೃಗಳೊಡನೆ ವೈಯಕ್ತಿಕವಾಗಿ ಮಾತನಾಡುತ್ತಿದ್ದೇನೆ ಎಂಬಂಥ ಆ ಭಾವವೇ ನನ್ನಲ್ಲಿ ಸಾರ್ಥಕ್ಯ ಮೂಡಿಸಿತ್ತು'' ಎಂದು ಸ್ವತಃ ಸಯಾನಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಹೌದು. ಸುಮಾರು ದಶಕಗಳ ಕಾಲ ಶ್ರೋತೃಗಳಿಗೆ ಮೋಡಿ ಮಾಡುವುದು ಸಾಮಾನ್ಯ ಸಾಧನೆ ಏನೂ ಅಲ್ಲ. ಅಂಥದೊಂದು ಕಲೆ ಸಯಾನಿ ಅವರಿಗೆ ಕರಗತವಾಗಿತ್ತು. ಆ ಶಕ್ತಿ ಮತ್ತು ಮೋಡಿ ಅದೊಂದು ದನಿಯಲ್ಲಿತ್ತು.
ತಂತ್ರಜ್ಞಾನದ ನೆರವು, ಬಾನುಲಿ ಪ್ರಸಾರದ ಜ್ಞಾನ ಅಷ್ಟಾಗಿ ಇಲ್ಲದ ಹೊರತಾಗಿಯೂ ರೇಡಿಯೋಗೆ ಹೇಳಿಮಾಡಿಸಿದಂಥ ಪರಿಪೂರ್ಣವಾದ ಧ್ವನಿಗೆ ಸಂವಾದಿಯಾಗಿ ಬೆಳೆದ ಕೆಲವೇ ಕೆಲವು ಜನರಲ್ಲಿ ಸಯಾನಿಗೆ ಅಗ್ರಸ್ಥಾನ. ಆ ಕಾರಣಕ್ಕಾಗಿ ಅವರು ರೇಡಿಯೊ ಜಾಕಿಗಳ ಜಾಕಿ' ಎಂದರೂ ತಪ್ಪೇನಿಲ್ಲ. ಏಕೆಂದರೆ ಇದು ಕಠಿಣ ಪರಿಶ್ರಮ ಹಾಗೂ ಸ್ವಂತ ಪರಿಶ್ರಮದಿಂದ ಗಳಿಸಿದ ಸ್ಥಾನಮಾನ. ೧೯೩೨, ಡಿಸೆಂಬರ್ ೨೧ರಂದು ಮುಂಬೈನಲ್ಲಿ ಜನಿಸಿದ ಸಯಾನಿ ಅವರ ಮನೆಯಲ್ಲಿ ಕಲೆ, ಸಾಹಿತ್ಯದ ವಾತಾವರಣವಿತ್ತು. ತಾಯಿ ಕುಲ್ಸುಮ್ ಅವರುರಾಹಬೀರ್’ ಎಂಬ ಬಹುಭಾಷಾ ಪಾಕ್ಷಿಕವನ್ನು ಪ್ರಕಟಿಸುತ್ತಿದ್ದರು. (ಇದಕ್ಕೆ ಮಹಾತ್ಮ ಗಾಂಧಿಯವರ ಒತ್ತಾಸೆ ಇತ್ತು) ಅದರ ಎಡಿಟಿಂಗ್, ಪ್ರಕಟಣೆ, ಮುದ್ರಣ ಎಲ್ಲದರಲ್ಲೂ ತಾಯಿಗೆ ಅಮೀನ್ ನೆರವಾಗುತ್ತಿದ್ದರು. ಆ ಪತ್ರಿಕೆಯಲ್ಲಿನ, ಜನರಿಗೆ ಮುಟ್ಟುವಂಥ ಸರಳ ಭಾಷೆಯು ಮುಂದೆ ಅವರಿಗೆ ನೆರವಾಯಿತು. ಶಾಲಾ ಶಿಕ್ಷಣ ಪೂರೈಸಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಗ್ವಾಲಿಯರ್‌ಗೆ ತೆರಳಿ, ಮರಳಿ ಮುಂಬೈಗೆ ಬಂದ ಬಳಿಕ ರೇಡಿಯೋದತ್ತ ಗಮನ ಆಸಕ್ತಿ ಬೆಳೆಯಿತು. ಆಕಾಶವಾಣಿಯಲ್ಲಿ ಅನೌನ್ಸರ್ ಕೆಲಸಕ್ಕೆ ಅರ್ಜಿ ಹಾಕಿದ್ದರು. ಆದರೆ ಮಾತಿನಲ್ಲಿ ಗುಜರಾತಿ ಘಾಟು ಇದೆ ಎಂಬ ಕಾರಣಕ್ಕೆ ತಿರಸ್ಕೃತರಾದರು. ಈ ನಡುವೆ, ಬಾಂಬೆ ಆಯಿಲ್ ಮಿಲ್ಸ್ನಲ್ಲಿ ಮಾರಾಟ ವಿಭಾಗದಲ್ಲಿ ಅಧಿಕಾರಿಯಾಗಿ ಕೆಲ ಸಮಯ ಕೆಲಸ ಮಾಡಿದ್ದೂ ಆಯಿತು. ಕೊನೆಗೂ ಅಕಾಶವಾಣಿಯಲ್ಲಿ ನೌಕರಿ ಸಿಕ್ಕಿತು. ಆದರೆ ಕೇಸ್ಕರ್ ಎಂಬುವವರು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ, ಆಕಾಶವಾಣಿ ಯಲ್ಲಿ ಚಿತ್ರಗೀತೆಗಳಿಗೆ ಕತ್ತರಿ ಹಾಕಿದರು. ಈ ಕೊರತೆಯನ್ನು ತುಂಬಲು ಕಂಪನಿಯೊಂದು ಮುಂದಾಯಿತು. ಜನರಿಗೆ ಹಿಂದಿ ಚಿತ್ರಗೀತೆಗಳನ್ನು ಕೇಳಿಸುವ ಆ ಕಾರ್ಯಕ್ರಮ ರೇಡಿಯೊ ಸಿಲೋನ್‌ನಲ್ಲಿ ಪ್ರಾರಂಭವಾಗಿ ಅದರಲ್ಲಿ ಸಯಾನಿಗೆ ಚಾನ್ಸ್ ಸಿಕ್ಕಿತು. ಅದೂ ಹೇಗೆ ? ಆ ಕಾರ್ಯಕ್ರಮವನ್ನು ನಡೆಸಿಕೊಡಲು ಅಂದಿನ ಕಾಲದ ಯಾರೊಬ್ಬ ಪ್ರಮುಖ ಉದ್ಘೋಷಕರೂ ಮುಂದೆ ಬರಲಿಲ್ಲ. ಸೋದರ ಹಮೀದ್ ಸಯಾನಿಯ ಬೆಂಬಲ ಮಾತ್ರ ಇತ್ತು. ಆಗ ಶುರುವಾಗಿದ್ದೇ ಬಿನಾಕಾ ಗೀತಮಾಲಾ. ಸಿಬಾಕಾ ಕಂಪನಿ ತನ್ನ ಟೂತ್‌ಪೇಸ್ಟ್ ಬ್ರ್ಯಾಂಡ್ ಆದ ಬಿನಾಕಾ ಹೆಸರಲ್ಲಿ ಕಾರ್ಯಕ್ರಮ ಪ್ರಾಯೋಜಿಸಿತ್ತು. ಇದಕ್ಕಾಗಿ ಪ್ರತಿ ವಾರಕ್ಕೆ ಅವರಿಗೆ ಸಿಗುತ್ತಿದ್ದುದು ೨೫ ರೂ. ಮಾತ್ರ..!
ಮುಂದಿನದೆಲ್ಲ ಇತಿಹಾಸ. ಗೀತೆಗಳ ಆಯ್ಕೆ, ಕಾರ್ಯಕ್ರಮದ ಸ್ಕ್ರೀಪ್ಟ್ ಸಿದ್ಧಪಡಿಸಿಕೊಳ್ಳುವುದು ಹಾಗೂ ವಾರಕ್ಕೆ ಬರುತ್ತಿದ್ದ ಸುಮಾರು ೨೫ ಶ್ರೋತೃಗಳ ಪತ್ರಗಳನ್ನು ವಿಲೇವಾರಿ ಮಾಡುವುದು-ಇವೆಲ್ಲ ಅವರ ಜವಾಬ್ದಾರಿಯಾಗಿದ್ದವು. ಇದನ್ನೆಲ್ಲ ಶ್ರದ್ಧೆಯಿಂದಲೇ, ಅಚ್ಚುಕಟ್ಟಾಗಿ ನಿಭಾಯಿಸಿದರು. ಈ ಕಾರ್ಯಕ್ರಮದಲ್ಲಿ ಶ್ರೋತೃಗಳ ಮೆಚ್ಚಿನ ಅಥವಾ ತಮಗೆ ಬೇಕಾದ ಚಿತ್ರಗೀತೆಗಳನ್ನು ಸಯಾನಿ ಪ್ರಸಾರ ಮಾಡುತ್ತಿರಲಿಲ್ಲ. ಕೇಳುಗರ ಪತ್ರ ಹಾಗೂ ಕೆಸೆಟ್‌ಗಳು ಮಾರಾಟವಾದ ದಾಖಲೆ ಆಧರಿಸಿ ಕೌಂಟ್‌ಡೌನ್ ಮಾದರಿಯಲ್ಲಿ ಗೀತೆಗಳನ್ನು ಪ್ರಸಾರ ಮಾಡುತ್ತಿದ್ದರು. ಆ ವಾರದ ೧೬ ಹಿಟ್‌ಗೀತೆಗಳು ೩೦ ನಿಮಿಷಗಳ ಅವಧಿಯಲ್ಲಿ ಪ್ರಸಾರವಾಗುತ್ತಿದ್ದವು. (ಆರಂಭದಲ್ಲಿ ೭ ಮಾತ್ರ.). ೧೬ನೇ ನಂಬರ್‌ನಿಂದ ಪ್ರಾರಂಭವಾಗಿ ಒಂದನೇ ಸ್ಥಾನದವರೆಗೆ ಇವು ಜನಪ್ರಿಯತೆಯ ಆಧಾರದಲ್ಲಿ ಇರುತ್ತಿದ್ದವು. ವರ್ಷದ ಕೊನೆಗೆ ಪಾಯಿಂಟ್‌ಗಳ ಆಧಾರದಲ್ಲಿ ೩೨ ಗೀತೆಗಳನ್ನು ಅಯ್ಕೆ ಮಾಡುತ್ತಿದ್ದರು. ಮೊದಲ ಸ್ಥಾನದಲ್ಲಿದ್ದುದನ್ನು ಸರ್ತಾಜ್ ಗೀತ್ ಎಂದು ಕರೆಯಲಾಗುತ್ತಿತ್ತು.
ಗೀತಮಾಲಾ ಕಾರ್ಯಕ್ರಮದಲ್ಲಿ ಒಂದು ಹಾಡು ಇನ್ನೂ ಮುಗಿಯುತ್ತಿರುವಂತೆಯೇ-ಜೀ ಹಾ ಭಾಯಿಯೋ ಔರ್ ಬೆಹನೋ..; ಹಾಂ.. ಹಾಂ.. ಹಾಂ..? ಎಂಬ ಉದ್ಗಾರದೊಡನೆ ಬರುತ್ತಿದ್ದ ವ್ಯಾಖ್ಯಾನಗಳು ಕೇಳುಗರನ್ನು ಹಿಡಿದಿಡುತ್ತಿದ್ದವು. ಹಿಂದಿನ ವಾರ ಇಷ್ಟನೇ ಸ್ಥಾನದಲ್ಲಿದ್ದ ಈ ಹಾಡು, ಈಗ ಒಂದು ಸ್ಥಾನ ಕುಸಿದಿದೆ, ಮೇಲೇರಿದೆ… ಇತ್ಯಾದಿ ವಿವರಗಳನ್ನು ಅವರು ಬಣ್ಣಿಸುತ್ತಿದ್ದ ಪರಿಯೇ ಅನನ್ಯ.
ಮಧ್ಯೆ ಮಧ್ಯೆ, ಆ ಹಾಡು ಹುಟ್ಟಿದ ಪರಿ, ಅದಕ್ಕೆ ಸಂಬಂಧಿಸಿದ ಕೆಲ ವಿವರ ಇತ್ಯಾದಿಗಳ ಬಗ್ಗೆ ಸಯಾನಿ ಹೇಳುತ್ತಿದ್ದರು. ಗಾಯಕರು, ಸಂಗೀತ ನಿರ್ದೇಶಕರು, ಗೀತ ರಚನೆಕಾರರು ಮೊದಲಾದವರ ಸಂದರ್ಶನ ಮಾಡುತ್ತಿದ್ದರು. ಒಟ್ಟಿನಲ್ಲಿ ಇದೊಂದು ಲವಲವಿಕೆಯುಳ್ಳ, ರಸವತ್ತಾದ ಕಾರ್ಯಕ್ರಮವೆನಿಸಿತ್ತು. ಅದು ಎಷ್ಟು ಜನಪ್ರಿಯತೆ ಪಡೆದಿತ್ತೆಂದರೆ ಪ್ರತಿ ಬುಧವಾರ ರಾತ್ರಿ ೮ರಿಂದ ೯ರವರೆಗೆ ಎಲ್ಲರೂ ರೇಡಿಯೋಗೆ ಕಿವಿಗೊಟ್ಟು ಕೂರುತ್ತಿದ್ದರು. ಶಾರ್ಟ್ವೇವ್‌ನಲ್ಲಿ ಬರುತ್ತಿದ್ದ ರೇಡಿಯೊ ಸಿಲೋನ್ ಕೆಲವೊಮ್ಮೆ ಜಾಮ್ ಆಗುತ್ತಿತ್ತು. ತಮ್ಮ ನೆಚ್ಚಿನ ಹಾಡುಗಳನ್ನು ಕೇಳುತ್ತ, ಸಯಾನಿಯವರ ವಿವರಣೆಯ ಒಗ್ಗರಣೆಯುಳ್ಳ ಸಂಗೀತದ ರಸಗವಳವನ್ನು ಎಲ್ಲರೂ ಸವಿಯುತ್ತಿದ್ದರು. ದೇಶಾದ್ಯಂತ ಬಿನಾಕಾ ಗೀತಮಾಲಾ ಕೇಳುಗರ ಕ್ಲಬ್‌ಗಳು ತಲೆ ಎತ್ತಿದವು. ಒಂದು ಕಾಲಕ್ಕೆ ಪ್ರತಿವಾರ ೬೫ ಸಾವಿರ ಪತ್ರಗಳು ಬರುತ್ತಿದ್ದವು.
ಬಿನಾಕಾ ಬಳಿಕ ಸಿಬಾಕಾ, ಹಿಟ್ ಪರೇಡ್- ಹೀಗೆ ಹೆಸರು ಬದಲಾದರೂ ಧ್ವನಿ ಬದಲಾಗಲಿಲ್ಲ. ೧೯೫೨ ರಿಂದ ೪೧ ವರ್ಷ ಸತತವಾಗಿ ಪ್ರಸಾರವಾಯಿತು. ಅನಂತರ ಯಾವ ಕಡೆ ಮೊದಲು ತಿರಸ್ಕೃತರಾಗಿದ್ದರೋ ಅದೇ ಆಕಾಶವಾಣಿಯ ವಿವಿಧ ಭಾರತಿಯಲ್ಲೂ ಮತ್ತೆ ಪ್ರಸಾರವಾಯಿತು.
ಸಾರೆಗಾಮ ಕಂಪನಿ ಬಿನಾಕಾ ಗೀತಮಾಲಾದ ೪೦ ಸಂಪುಟಗಳನ್ನು ಹೊರತಂದಿದ್ದು ಅವುಗಳ ರೂಪದಲ್ಲಿ ಈ ಕಾರ್ಯಕ್ರಮ ಸದಾ ಜೀವಂತವಾಗಿ ಇರುತ್ತವೆ.
ಆಗೆಲ್ಲ ಈಗಿನಂತೆ ಜಾಹೀರಾತುಗಳ ಮಧ್ಯೆ ಹಾಡುಗಳ ಪ್ರಸಾರ ಇರುತ್ತಿರಲಿಲ್ಲ. ಅಥವಾ ಆರ್‌ಜೆಗಳ ಅಬ್ಬರವಿರಲಿಲ್ಲ. ಸ್ಪಷ್ಟ, ಸರಳ ಹಾಗೂ ಆತ್ಮೀಯ ಧ್ವನಿಯಲ್ಲಿ ಬಹಳ ಆಪ್ತವಾಗಿ ಸಯಾನಿ ಆ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು. ಮನೆಯ ಸದಸ್ಯರೊಬ್ಬರು ತಮ್ಮೊಡನೆ ಆಪ್ತವಾಗಿ ಮಾತನಾಡುತ್ತಿದ್ದಾರೆ ಎಂಬ ಭಾವನೆ ಕೇಳುಗರಲ್ಲಿ ಉಂಟಾಗುತ್ತಿತ್ತು. ಟಿವಿಗಳ ಅಬ್ಬರದಲ್ಲಿ ಕ್ರಮೇಣ ರೇಡಿಯೊ ತೆರೆಮರೆಗೆ ಸರಿಯುತ್ತಿದ್ದಂತೆ ಸಯಾನಿಯವರೂ ನಿಧಾನವಾಗಿ ನೇಪಥ್ಯಕ್ಕೆ ಸರಿದರು. ದೇಹವೂ ದಣಿಯಿತು. ಆದರೂ ಅವರು ತೀರ ಇತ್ತೀಚಿನವರೆಗೂ ಚಾಲ್ತಿಯಲ್ಲಿದ್ದರು. ಟಿವಿಗೂ ಕೂಡ ಅಡ್ಜೆಸ್ಟ್ ಆಗಿ ಒಂದಷ್ಟು ಕಾರ್ಯಕ್ರಮಗಳನ್ನು ಮಾಡಿದರು.
ಒಟ್ಟಾರೆ ೫೪ ಸಾವಿರಕ್ಕೂ ಹೆಚ್ಚು ರೇಡಿಯೊ ಕಾರ್ಯಕ್ರಮಗಳನ್ನು, ಹಲವಾರು ಜಾಹೀರಾತು ಜಿಂಗಲ್‌ಗಳನ್ನು ಸಯಾನಿ ಮಾಡಿದ್ದಾರೆ. ಬೋರ್ನ್ವಿಟಾ ಕ್ವಿಜ್ ಕಾಂಟೆಸ್ಟ್, ಶಾಲಿಮಾರ್ ಸೂಪರ್‌ಲ್ಯಾಕ್ ಜೋಡಿ, ಸಿತಾರೋಂ ಕಿ ಪಸಂದ್, ಚಮಕ್ತೆ ತಾರೇ… ಮೊದಲಾದ ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ. ಎಸ್.ಕುಮಾರ್ ಕಾ ಫಿಲ್ಮಿ ಮುಕದ್ದಮಾ ಎಂಬುದು ಅವರ ಮತ್ತೊಂದು ಹಿಟ್ ಕಾರ್ಯಕ್ರಮ. ೨೦೦೦ ಸ್ಟೇಜ್ ಶೋಗಳನ್ನು ನೀಡಿದ್ದಾರೆ. ಲತಾ ಮಂಗೇಶ್ಕರ್ ಮೊದಲಾದವರ ಸಂಗೀತ ಕಾರ್ಯಕ್ರಮಗಳಲ್ಲಿ ನಿರೂಪಕರಾಗಿ ಕೆಲಸ ಮಾಡಿದ್ದಾರೆ. ಭೂತ್ ಬಂಗ್ಲಾ, ತೀನ್ ದೇವಿಯಾ, ಬಾಕ್ಸರ್, ಕತ್ಲ್ ಮೊದಲಾದ ಚಿತ್ರಗಳಲ್ಲಿ ನಟಿಸಿದ್ದು ಅವೆಲ್ಲ ಬಹುತೇಕ ಅನೌನ್ಸರ್ ಪಾತ್ರಗಳು. ಹಿಂದಿ ರತ್ನ ಪುರಸ್ಕಾರ, ಪದ್ಮಶ್ರೀ, ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್- ಇವು ಅವರನ್ನು ಅರಸಿ ಬಂದ ಕೆಲವು ಪ್ರಮುಖ ಪ್ರಶಸ್ತಿಗಳು.
ಇಂಪಾದ ಗೀತೆಗಳಿಗೆ ನವಿರಾದ ನಿರೂಪಣೆಯ ಮೂಲಕ ಗೀತೆಗಳ ಮಾಲೆಯನ್ನು ಪೋಣಿಸಿ ಅದರ ಪರಿಮಳವನ್ನು ಪಸರಿಸಿದ, ಸುಮಾರು ಐದು ದಶಕಗಳ ಕಾಲ ಶ್ರೋತೃಗಳ ಕಣ್ಮಣಿ ಹಾಗೂ ಧ್ವನಿಯಾಗಿದ್ದ ಅಮೀನ್ ಸಯಾನಿ ತಮ್ಮ ಮಧುರ ಧ್ವನಿಯ ಮೂಲಕವೇ ಅಮರರಾಗಿದ್ದಾರೆ.

ವಸಂತ ನಾಡಿಗೇರ
ಸಂಪಾದಕ, ಸಂಯುಕ್ತ ಕರ್ನಾಟಕ