ಬಾಬಾವಂಗಾ ಯಾರು ಗೊತ್ತ?
ನೋಡಿ ಮುಂದಿನವಾರ ಭರ್ಜರಿ ಮಳೆಯಾಗಿ ಹಳ್ಳ ತುಂಬಲಿವೆ… ಮಳಿಗುಂಟ ಅದ್ಯಾವುದೋ ಹುಳುಗಳು ಭೂಮಿಗೆ ಬೀಳುತ್ತವೆ. ಅವುಗಳು ಶೇ. ೮೦ರಷ್ಟು ಜನರ ಕಾಲಿಗೆ ಕಚ್ಚುತ್ತವೆ ಅದಕ್ಕೆ ಟ್ರೀಟ್ಮೆಂಟೇ ಇಲ್ಲ ಎಂದು ತಿಗಡೇಸಿ ಎಲ್ಲರೆದರೂ ಹೇಳುತ್ತ, ಈ ಮಾತನ್ನು ನಾನು ಹೇಳುತ್ತಿಲ್ಲ ಬಾಬಾ ವಂಗಾ ಹೇಳಿದ್ದಾನೆ. ಬಾಬಾರು ಯಾರು ಗೊತ್ತ? ಅವರು ಇಲ್ಲೇ ವರ್ನಖ್ಯಾಡೆದವರು. ಅವರು ಹೇಳಿದ್ದು ಈವರೆಗೆ ಒಂದೂ ಸುಳ್ಳಾಗಿಲ್ಲ ಮುಂದೆಯೂ ಆಗುವುದಿಲ್ಲ ತಿಳಿಯಿರಿ ಎಂದು ಹೇಳಿದಾಗ ಜನರು ಭಯಭೀತರಾಗಿದ್ದರು. ಅದಾದ ಮರುದಿನವೇ ಅಯ್ಯೋ ನಿಮಗೆ ಗೊತ್ತಾ? ಇನ್ನು ಮುಂದೆ ಬಿಸಿಲೇ ಬೀಳುವುದಿಲ್ಲವಂತೆ… ಎಲ್ಲೆಡೆ ಅಲ್ಲೋಲ ಕಲ್ಲೋಲವಾಗುತ್ತದೆ ಎಂದು ಹೇಳಿದಾಗ… ಕರಿಭೀಮವ್ವ ಗೊಳೋ ಎಂದು ಅಳುತ್ತ…ನಾನು ಮಾಳಿಗೆ ಮೇಲೆ ಹಸಿಮೆಣಸಿನಕಾಯಿ ಒಣಹಾಕಬೇಕು ಅಂತ ಮಾಡಿದ್ದೆ ಎಂದು ಗೋಳಾಡಿದಳು. ಮೇಕಪ್ ಮರೆಮ್ಮಳಂತೂ ಬಿಸಿಲೇ ಇಲ್ಲದಿದ್ದರೆ ಹೇಗೆ ತಿಗಡೇಸಿ ಹೀಗಂತ ಯಾರಲಾ ಹೇಳಿದ್ದು ಎಂದು ಕೇಳಿದಳು. ಅದೇ ಬಾಬಾವಂಗಾ ಎಂದು ಹೇಳಿದ. ಊರು ಪಕ್ಕದ ಊರಿನವರು ತಿಗಡೇಸಿಯನ್ನು ಭೇಟಿಯಾಗಿ ವಂಗಾಬಾಬಾ ಮತ್ತೇನಾದರೂ ಹೇಳಿದನಾ ಎಂದು ಕೇಳಿ ತಿಳಿದುಕೊಳ್ಳುತ್ತಿದ್ದರು. ತಳವಾರ್ಕಂಟಿ… ಕನ್ನಾಳ್ಮಲ್ಲ ಮುಂತಾದವರು, ತಿಗಡೇಸಿ ನಿನಗೆ ಅವರು ನಿನಗೆ ಹೇಗೆ ಹೇಳುತ್ತಾರೆ? ವಾಟ್ಸಾಪ್ ಮಾಡುತ್ತಾರಾ? ಕಾಲ್ ಮಾಡುತ್ತಾರಾ? ಇಷ್ಟಾಗಿ ಅವರು ಯಾರು ಎಂದು ಪತ್ತೆದಾರಿ ಸಿನೆಮಾದಲ್ಲಿ ಇನ್ಸಪೆಕ್ಟರ್ ಕೇಳಿದಂತೆ ಕೇಳುತ್ತಿದ್ದರು. ಅದಕ್ಕೆ ತಿಗಡೇಸಿ ಸುಮ್ಮನೇ ನಕ್ಕು… ನಾನು ಸಮಯ ಬಂದಾಗ ಎಲ್ಲವನ್ನೂ ಹೇಳುತ್ತೇನೆ ವೇಟ್ ಮಾಡಿ… ವೇಟ್ ಮಾಡಿ ಎಂದು ಹೇಳುತ್ತಿದ್ದ. ಹೀಗೆ ಬಾಬಾವಂಗಾ ಹಾಗೆ ಹೇಳಿದ್ದಾನೆ… ಹೀಗೆ ಹೇಳಿದ್ದಾನೆ ಎಂದು ಹೇಳಿದ್ದಾನೆ. ಹೇಳುತ್ತಿದ್ದ. ಓಸಿ ನಂಬರ್ ಕಟ್ಟಿ, ಕಟ್ಟಿ ಅರ್ಧಆಸ್ತಿ ಮಾರಿಕೊಂಡಿದ್ದ ಮಡಿವಾಳೀರಯ್ಯ ಮುರಸಂಜಿ ಹೊತ್ತಿನಲ್ಲಿ ಯಾರಿಗೂ ಗೊತ್ತಾಗದ ಹಾಗೆ ಭೇಟಿಯಾಗಿ ಬಾಬಾವಂಗಾ ಯಾವುದಾದರೂ ನಂಬರ್ ಹೇಳಿದ್ದಾನಾ? ಎಂದು ಕೇಳಿದ ತಥ್ ಎಂದು ಬಯ್ಯಲು ಹೋಗಿ ತಿಗಡೇಸಿ ಹತ್ ಎಂದು ಬೈಯ್ದ… ಮಡಿವಾಳೀರಯ್ಯನು ಓಹೋ ಹತ್ತು ಎಂದು ಹೇಳಿದ್ದಾನೆ ಎಂದು ಹತ್ತನೇ ನಂಬರ್‌ಗೆ ಇನ್ನರ್ಧ ಆಸ್ತಿ ಮಾರಿ ಬಂದ ಹಣದಿಂದ ಹತ್ತನೇ ನಂಬರ್ ಕಟ್ಟಿದ. ಮರುದಿನ ಯಾವುದೋ ನಂಬರ್ ಬಂದಿತ್ತು. ಪೂರ್ತಿ ಹಾಳಾದ ಮಡಿವಾಳೀರಿ ತಿಗಡೇಸಿಯನ್ನು ಹುಡುಕಾಡಿ ಸಿಕ್ಕ ಸಿಕ್ಕಲ್ಲಿ ಬಡಿಯತೊಡಗಿದ. ಈಗ ತಿಗಡೇಸಿ ಬಾಬಾವಂಗನ ಜತೆ ಇದ್ದಾನೆ ಎಂಬ ಸುದ್ದಿ ಹಬ್ಬಿದೆ.