ಬಾರದ ಬಸ್: ವಿದ್ಯಾರ್ಥಿಗಳ ಪರದಾಟ
ಶ್ರೀರಂಗಪಟ್ಟಣ: ತಾಲೂಕಿನ ಕೆಆರ್‌ಎಸ್-ಮೈಸೂರು ಮಾರ್ಗವಾಗಿ ಅಗತ್ಯ ಬಸ್ ಸೌಲಭ್ಯವಿಲ್ಲದ ಕಾರಣ ಪ್ರತಿನಿತ್ಯ ಶಾಲಾ-ಕಾಲೇಜಿಗೆ ತೆರಳುವ ನೂರಾರು ವಿದ್ಯಾರ್ಥಿಗಳು ನರಕಯಾತನೆ ಅನುಭವಿಸುವಂತಾಗಿದೆ.
ಆಗೊಮ್ಮೆ ಈಗೊಮ್ಮೆ ಬರುವ ಬಸ್‌ಗಳು ಅಲ್ಲಿಂದಲೇ ಪ್ರಯಾಣಿಕರಿಂದ ಕಿಕ್ಕಿರುದು ಬರುತ್ತಿದ್ದು, ವಿಧಿಯಿಲ್ಲದೆ ಕೆಲ ವಿದ್ಯಾರ್ಥಿಗಳು ಬಾಗಿಲಿನಲ್ಲಿ ಜೋತು ಹಾಕಿಕೊಂಡು ತೆರಳುವಂತಾಗಿದೆ. ಜೊತೆಗೆ ಕೆಲ ವಿದ್ಯಾರ್ಥಿಗಳು ಮತ್ತೊಂದು ಬಸ್ ಬರುವಿಕೆಗಾಗಿ ಕಾದು ನಿಂತು ಪ್ರತಿನಿತ್ಯ ತರಗತಿಗೆ ತಡವಾಗಿ ತೆರಳುವಂತಾಗಿದ್ದು, ನಿತ್ಯ ನರಕಯಾತನೆಗೆ ಬ್ರೇಕ್ ಹಾಕುವಂತೆ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳಲ್ಲಿ ವಿದ್ಯಾರ್ಥಿಗಳು ಮೊರೆಯಿಡುತ್ತಿದ್ದಾರೆ.
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಗ್ಯಾರಂಟಿ ಯೋಜನೆ ಬಂದ ನಂತರದಿಂದ ವಿದ್ಯಾರ್ಥಿಗಳ ಪಾಡು ಹೇಳ ತೀರದಂತಾಗಿದ್ದು, ಅಗತ್ಯ ಬಸ್ ಸೌಲಭ್ಯ ಕಲ್ಪಿಸುವಂತೆ ತಾಲೂಕಿನ ಬೆಳಗೋಳ ಗ್ರಾಮದ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸರಿಯಾದ ಸಮಯಕ್ಕೆ ಶಾಲೆಗೆ ತೆರಳುವ ಧಾವಂತದಲ್ಲಿ ಬಾಗಿಲಿನಲ್ಲಿ ಜೋತು ಹಾಕಿಕೊಂಡು ತೆರಳುತ್ತಿರುವ ವಿದ್ಯಾರ್ಥಿಗಳ ಪೋಷಕರಲ್ಲಿ ಆತಂಕ ಶುರುವಾಗಿದ್ದು, ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳದಿದ್ದರೆ ಸಾರಿಗೆ ಇಲಾಖೆ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.