For the best experience, open
https://m.samyuktakarnataka.in
on your mobile browser.

ಬಾಹುಬಲಿ ಸಂದೇಶದಿಂದ ರಾಷ್ಟ್ರದಲ್ಲಿ ಧರ್ಮಪ್ರಭಾವನೆಯ ಸಂಸ್ಕಾರ ಬೆಳೆಯಲಿ

09:04 PM Feb 22, 2024 IST | Samyukta Karnataka
ಬಾಹುಬಲಿ ಸಂದೇಶದಿಂದ ರಾಷ್ಟ್ರದಲ್ಲಿ ಧರ್ಮಪ್ರಭಾವನೆಯ ಸಂಸ್ಕಾರ ಬೆಳೆಯಲಿ

ಉಜಿರೆ: ಬಾಹುಬಲಿಯ ಯಶ, ಕೀರ್ತಿ, ಹೆಸರು ನಾವು ವಿಶ್ವದಲ್ಲೇ ನೋಡುತ್ತೇವೆ. ಜೈನ ಧರ್ಮದಲ್ಲಿ ತೀರ್ಥಂಕರರ ಶ್ರೇಷ್ಠ ಸ್ಥಾನ ಬೇರೆ ಯಾರಿಗೂ ಇಲ್ಲ. ಬಸದಿಗಳಲ್ಲಿ ಮಾತ್ರ ತೀರ್ಥಂಕರರ ಬಿಂಬ ಸ್ಥಾಪನೆಯಾಗಿದೆ. ಇತಿಹಾಸದ ಪ್ರಥಮ ಮಹಾಪುರುಷ ಬಾಹುಬಲಿ. ಆದಿನಾಥ ಪುರಾಣದಲ್ಲಿ ಭರತ ಚಕ್ರವರ್ತಿ ಮತ್ತು ಬಾಹುಬಲಿಯ ಚರಿತ್ರೆಯ ವ್ಯಾಖ್ಯಾನವಿದೆ. ಬಾಹುಬಲಿಯ ಸಂದೇಶದಿಂದ ಇಡೀ ದೇಶ, ರಾಷ್ಟ್ರದಲ್ಲಿ ಧರ್ಮ ಪ್ರಭಾವನೆಯ ಸಂಸ್ಕಾರ ಬೆಳೆಯಲಿ ಎಂದು ಪರಮಪೂಜ್ಯ 108 ಅಮೋಘಕೀರ್ತಿ ಮಹಾರಾಜ್ ನುಡಿದರು.
ಅವರು ಫೆ. 22ರಂದು ವೇಣೂರು ಭಗವಾನ್ ಬಾಹುಬಲಿ ಮಸ್ತಕಾಭಿಷೇಕದ ಪ್ರಾರಂಭದ ದಿನ ಭರತೇಶ ಸಮುದಾಯ ಭವನದಲ್ಲಿ ನಡೆದ ಧಾರ್ಮಿಕ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಪರಮಪೂಜ್ಯ 108 ಶ್ರೀ ಅಮರಕೀರ್ತಿ ಮಹಾರಾಜರು ಮಹಾಮಸ್ತಕಾಭಿಷೇಕ ಮನರಂಜನೆಗಾಗಿ ಅಲ್ಲ,ಮನಸ್ಸಿನ ಪರಿಶುದ್ಧತೆ, ಸಂಸಾರದ ಶಾಂತಿ, ಮನಸ್ಸಿನ ಭಾವನೆ ಉಜ್ವಲ ಹಾಗೂ ಜಗತ್ ಕಲ್ಯಾಣಕ್ಕಾಗಿ. ವ್ಯಕ್ತಿ ಜೀವನದಲ್ಲಿ ಸುಖ, ಶಾಂತಿ, ಅಹಿಂಸಾ ಧರ್ಮ ಪಾಲನೆ, ಏಕಾಗ್ರತೆ, ಮೈತ್ರಿಯಿಂದ ಜೀವನದಲ್ಲಿ ಪ್ರಗತಿ ಮಾರ್ಗ, ಕರುಣೆ ಮತ್ತು ಅಶಾಂತಿ ದೂರ ಮಾಡುವ ತ್ಯಾಗ ಸಂದೇಶ ಅನುಸರಿಸಿ ಧರ್ಮ ಮಾರ್ಗದಲ್ಲಿ ನಡೆಯಬೇಕು ಎಂದರು.
ಮೂಡಬಿದ್ರಿಯ ಡಾ. ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯ ಮಹಾಸ್ವಾಮೀಜಿ ಆಶೀರ್ವಚನ ನೀಡಿ ಮಹಾಮಸ್ತಕಾಭಿಷೇಕದ ಧಾರ್ಮಿಕ ವಿಧಿ ವಿಧಾನಗಳನ್ನು ಶ್ರದ್ಧಾಭಕ್ತಿಯಿಂದ ನಡೆಸಲಾಗಿದೆ. ಪೂರ್ವಜನ್ಮದ ಸುಕೃತ ಫಲದಿಂದ ಮಹಾಮಸ್ತಕಾಭಿಷೇಕದ ಅಧ್ಯಾತ್ಮದ ಪೂಜೆಯಲ್ಲಿ ಎಲ್ಲರೂ ಪಾಲ್ಗೊಂಡು ಸುಖ-ಶಾಂತಿಯನ್ನು ಸವಿಯುತ್ತ ಸಂತೋಷಪಡೋಣ. ಕೇಂದ್ರ, ರಾಜ್ಯ ಸರಕಾರಗಳು ಸರ್ವ ಧರ್ಮವನ್ನು ಪ್ರೀತಿಸಿ ಪವಿತ್ರ ಕ್ಷೇತ್ರಗಳನ್ನು ರಕ್ಷಿಸಲಿ ಎಂದು ನುಡಿದರು.
ಸಮಾರಂಭ ವನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಆಡಂಬರವಿಲ್ಲದೆ ಸರಳವಾಗಿ ಮಹೋತ್ಸವವನ್ನು ಆಚರಿಸಲಾಗುತ್ತಿದೆ. ವಿಶ್ವದಲ್ಲಿ ಯುದ್ಧ, ದ್ವಂದ್ವಗಳು ನಡೆಯುತ್ತಿರುವ ಸಂದರ್ಭದಲ್ಲಿ ಶಾಂತಿಯ ತತ್ವ ಸಾರುವ ಜೈನ ಧರ್ಮ, ಬಾಹುಬಲಿಯ ಶಾಂತಿ, ಸಹನೆ, ಸಹಬಾಳ್ವೆಯ ಸಂದೇಶ ಅರ್ಥಪೂರ್ಣವಾದುದು. ಮಹೋತ್ಸವ ಸಮಿತಿಯಲ್ಲಿ ಹಿರಿಯರನ್ನು ಗೌರವಿಸಿ, ಯುವಕರ ನೇತೃತ್ವದಲ್ಲಿ ಕಾರ್ಯ ಯಶಸ್ವಿಯಾಗಲಿ. ವರ್ಣಮಯ ಭಗವಂತನ ಹಾಗೆ ನಮ್ಮ ಸುಖ, ದುಃಖ ತಾಳ್ಮೆ, ಜವಾಬ್ದಾರಿ ಅರಿತುಕೊಂಡು ಜೀವನ ಸಾರ್ಥಕ ಪಡಿಸಿಕೊಂಡು ಧನ್ಯರಾಗೋಣ ಎಂದರು.
ಶಾಸಕ ಹರೀಶ್ ಪೂಂಜಾ ವಸ್ತು ಪ್ರದರ್ಶನ ಮಳಿಗೆಗಳನ್ನು ಉದ್ಘಾಟಿಸಿ ಶುಭಾಶಂಸನೆಗೈದರು. ವೇದಿಕೆಯಲ್ಲಿ ಮಹಾಮಸ್ತಕಾಭಿಷೇಕ ಸಮಿತಿ ಸಂಚಾಲಕ ಡಿ.ಹರ್ಷೇನ್ದ್ರಕುಮಾರ್, ಬಂಟ್ವಾಳ ಮಾಜಿ ಶಾಸಕ, ಮಾಜಿ ಸಚಿವ ರಮಾನಾಥ ರೈ, ಅಭಯಚಂದ್ರ ಜೈನ್, ಗ್ರಾಪಂ ಅಧ್ಯಕ್ಷ ನೇಮಯ್ಯ ಕುಲಾಲ್ಸ, ಸಮಿತಿ ಕಾರ್ಯದರ್ಶಿ ಪ್ರವೀಣ್ ಕುಮಾರ್ ಇಂದ್ರ, ಕೋಶಾಧಿಕಾರಿ ಜಯರಾಜ ಕಂಬಳಿ ಅರ್ಯಿಕ ಮಾತೆಯರು ಉಪಸ್ಥಿತರಿದ್ದರು. ಕಾರ್ಯಾಧ್ಯಕ್ಷ ಡಾ. ಪದ್ಮಪ್ರಸಾದ್ ಅಜಿಲರು ಸ್ವಾಗತಿಸಿ, ಪ್ರಸ್ತಾವಿಸಿದರು. ವಿಶ್ರಾಂತ ಮುಖ್ಯ ಶಿಕ್ಷಕ ಮುನಿರಾಜ ರೆಂಜಾಳ ನಿರೂಪಿಸಿದ ಕಾರ್ಯಕ್ರಮದಲ್ಲಿ ಶಿವಪ್ರಸಾದ್ ಅಜಿಲ ವಂದಿಸಿದರು. ದಿನದ ಮಹಾಮಸ್ತಕಾಭಿಷೇಕದ ಸೇವಾಕರ್ತೃ ಡಾ!ಪದ್ಮಪ್ರಸಾದ್ ಅಜಿಲರನ್ನು ಗೌರವಿಸಲಾಯಿತು.