For the best experience, open
https://m.samyuktakarnataka.in
on your mobile browser.

ಬಾಹ್ಯಾಕಾಶ, ರಕ್ಷಣೆಗೆ ಕೊಡುಗೆ

01:00 AM Feb 03, 2024 IST | Samyukta Karnataka
ಬಾಹ್ಯಾಕಾಶ  ರಕ್ಷಣೆಗೆ ಕೊಡುಗೆ

೨೦೨೪ರ ಮಧ್ಯಂತರ ಬಜೆಟ್ ಕಳೆದ ಹಲವು ವಾರಗಳಿಂದ ಭಾರತದ ಸಮುದ್ರ ವ್ಯಾಪಾರಕ್ಕೆ ಅಡ್ಡಿಯಾಗಿರುವ ಕೆಂಪು ಸಮುದ್ರದ ಬಿಕ್ಕಟ್ಟಿಗೆ ಯಾವುದೇ ಪರಿಹಾರ ಸೂಚಿಸಿಲ್ಲ. ಈ ಬಿಕ್ಕಟ್ಟು, ಅಕ್ಟೋಬರ್ ೧೯, ೨೦೨೩ರಂದು ದಕ್ಷಿಣ ಇಸ್ರೇಲ್ ಮೇಲೆ ಮತ್ತು ಕೆಂಪು ಸಮುದ್ರದಲ್ಲಿನ ಇಸ್ರೇಲ್ ಸಂಬಂಧಿತ ಹಡಗುಗಳ ಮೇಲೆ ಇರಾನ್ ಬೆಂಬಲಿತ ಹೌತಿಗಳು ನಡೆಸಿದ ದಾಳಿಯಿಂದ ಆರಂಭವಾದ ಅಮೆರಿಕಾ - ಇರಾನ್ ನಡುವೆ ಆರಂಭಗೊಂಡ ಪ್ರಾಕ್ಸಿ ಯುದ್ಧದ ಮುಂದುವರಿಕೆಯಾಗಿದೆ.
ಭಾರತ ಯುರೋಪ್, ಉತ್ತರ ಅಮೆರಿಕಾ, ಉತ್ತರ ಆಫ್ರಿಕಾ, ಮತ್ತು ಪಶ್ಚಿಮ ಏಷ್ಯಾಗಳನ್ನು ತಲುಪಲು ಈ ಮಾರ್ಗದ ಮೇಲೆ ಬಹಳಷ್ಟು ಅವಲಂಬನೆ ಹೊಂದಿದೆ. ಕೆಂಪು ಸಮುದ್ರದ ಮೂಲಕ ಭಾರತದ ರಫುö್ತ ಮೌಲ್ಯ ೧೮ ಲಕ್ಷ ಕೋಟಿ ತಲುಪಿದೆ.
ಆದರೆ ಈಗ ಹಡಗುಗಳು ಕೆಂಪು ಸಮುದ್ರದ ಮಾರ್ಗವನ್ನು ತಪ್ಪಿಸಿ, ಸೂಯೆಜ್ ಕಾಲುವೆಯ ಮೂಲಕ ಚಲಿಸುವ ಬದಲು, ಆಫ್ರಿಕಾದ ದಕ್ಷಿಣ ತುದಿಯನ್ನು ಬಳಸಿ ೬,೫೦೦ ಕಿಲೋಮೀಟರ್ ಹೆಚ್ಚುವರಿಯಾಗಿ ಚಲಿಸುವುದರಿಂದ ಈ ವ್ಯಾಪಾರದ ಮೇಲೆ ಪರಿಣಾಮ ಉಂಟಾಗಿದೆ.
ಈ ವಿಳಂಬದ ಕಾರಣದಿಂದಾಗಿ, ಭಾರತದ ರಫ್ತುಗಳು ತಡವಾಗುತ್ತಿವೆ, ವ್ಯಾಪಾರಿಗಳಿಗೆ ಬಹಳಷ್ಟು ನಷ್ಟ ಉಂಟಾಗುತ್ತಿದೆ. ಸಾಗಾಣಿಕೆಗಳು ಈಗ ೨೧ರಿಂದ ೨೮ ದಿನಗಳಷ್ಟು ತಡವಾಗುತ್ತಿದ್ದು, ಕೆಲವೊಂದು ಹಡಗುಗಳು ಡಾಕ್ ಬಿಟ್ಟು ತೆರಳುವುದನ್ನೇ ನಿಲ್ಲಿಸಿವೆ.
ಕೆಂಪು ಸಮುದ್ರದ ಬಿಕ್ಕಟ್ಟು ಆರಂಭಗೊಂಡ ಬಳಿಕ, ಭಾರತದ ೨೫%ದಷ್ಟು ಸಾಗಾಣಿಕೆಗಳು ಸ್ಥಗಿತಗೊಂಡಿದ್ದು, ಅವುಗಳು ಭಾರತದಿಂದ ಹೊರಟೇ ಇಲ್ಲ. ಭಾರತದಿಂದ ತೆರಳುವ ೯೫% ಸಾಗಾಣಿಕಾ ಹಡಗುಗಳು ಹೆಚ್ಚು ದೂರದ ಆಫ್ರಿಕಾದ ಮಾರ್ಗದಿಂದ ತೆರಳುತ್ತಿದ್ದು, ಯಾವುದೇ ಪರಿಹಾರ ಸದ್ಯೋಭವಿಷ್ಯದಲ್ಲಿ ಕಾಣುತ್ತಿಲ್ಲ.
ಭಾರತೀಯ ನೌಕಾಪಡೆ ಈ ಬಿಕ್ಕಟ್ಟನ್ನು ಕಡಿಮೆಗೊಳಿಸಲು ತನ್ನ ಪ್ರಯತ್ನ ನಡೆಸುತ್ತಿದ್ದು, ಕೆಂಪು ಸಮುದ್ರದಲ್ಲಿ ಗಸ್ತು ನಡೆಸುತ್ತಾ, ಮಾರ್ಗವನ್ನು ಸುರಕ್ಷಿತವಾಗಿಸಲು ಪ್ರಯತ್ನಿಸುತ್ತಿದೆ. ಕಳೆದ ಕೆಲ ಸಮಯದಲ್ಲಿ, ಹಿಂದೂ ಮಹಾಸಾಗರ ಒಂದರಲ್ಲೇ ಕನಿಷ್ಠ ಒಂಬತ್ತು ಕಾರ್ಯಾಚರಣೆಗಳನ್ನು ನಡೆಸಿ, ವಾಣಿಜ್ಯಿಕ ಹಡಗುಗಳ ರಕ್ಷಣೆ ನಡೆಸಲಾಗಿದೆ.
ರಫ್ತುದಾರರು ನಷ್ಟ ಅನುಭವಿಸುತ್ತಿದ್ದು, ಕಳೆದ ಹಣಕಾಸು ವರ್ಷದಲ್ಲಿ ಭಾರತದ ಒಟ್ಟು ರಫ್ತು ಮೌಲ್ಯ ೪೫೧ ಬಿಲಿಯನ್ ಡಾಲರ್ ಆಗಿದ್ದು, ಕೆಂಪು ಸಮುದ್ರದ ಬಿಕ್ಕಟ್ಟಿನ ಕಾರಣದಿಂದ, ೩೦ ಬಿಲಿಯನ್ ಡಾಲರ್‌ಗೂ ಹೆಚ್ಚು ಮೌಲ್ಯದ ರಫ್ತಿನ ಮೇಲೆ ಪರಿಣಾಮ ಉಂಟಾಗಿದೆ. ಇಷ್ಟೊಂದು ದೀರ್ಘಕಾಲೀನ ಸಮಸ್ಯೆ ಭಾರತದ ಆರ್ಥಿಕ ಪ್ರಗತಿಯ ಮೇಲೆ ಪರಿಣಾಮ ಬೀರಲಿದೆ.
ಭಾರತದ ಮಧ್ಯಂತರ ರಕ್ಷಣಾ ಬಜೆಟ್
ಜನವರಿ ೨೦೨೪ರ ಹಣಕಾಸು ಸಚಿವಾಲಯದ ಆರ್ಥಿಕ ಅಂದಾಜಿನ ಪ್ರಕಾರ, ಕೋವಿಡ್-೧೯ ಸಾಂಕ್ರಾಮಿಕ, ಆರ್ಥಿಕ ಅಸಮತೋಲನಗಳ ಸವಾಲಿನ ಹೊರತಾಗಿಯೂ ಭಾರತ ಗಮನಾರ್ಹ ಪ್ರಗತಿ ಸಾಧಿಸಿದೆ. ಭಾರತ ಪ್ರಸ್ತುತ ಜಗತ್ತಿನ ಐದನೇ ಅತಿದೊಡ್ಡ ಆರ್ಥಿಕತೆಯಾಗಿದ್ದು, ೨೦೨೪ರ ಹಣಕಾಸು ವರ್ಷದಲ್ಲಿ ೩.೭ ಟ್ರಿಲಿಯನ್ ಡಾಲರ್ ಜಿಡಿಪಿ ದಾಖಲಿಸಿದೆ. ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ೨೦೪೭ರ ವೇಳೆಗೆ `ವಿಕಸಿತ ಭಾರತ' ಅಥವಾ ಅಭಿವೃದ್ಧಿ ಹೊಂದಿದ ಭಾರತದ ಗುರಿ ಸಾಧಿಸಲು ಸೂಕ್ತ ತಳಹದಿ ನಿರ್ಮಿಸಿದ್ದು, ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಗುರುವಾರ ೪೭.೬೬ ಲಕ್ಷ ಕೋಟಿ ರೂಪಾಯಿಗಳ ಬಜೆಟ್ ಅನ್ನು ಮಂಡಿಸಿದ್ದಾರೆ. ಇದು ಆರ್ಥಿಕತೆಯ ಎಲ್ಲ ವಲಯಗಳನ್ನು ಉತ್ತೇಜಿಸುವ ಗುರಿ ಹೊಂದಿದೆ.
೨೦೨೪-೨೫ರ ಭಾರತದ ಮಧ್ಯಂತರ ಬಜೆಟ್ ರಕ್ಷಣಾ ವಲಯಕ್ಕೆ ೬.೨೧ ಲಕ್ಷ ಕೋಟಿ ಒದಗಿಸಿದ್ದು, ಇದು ಕಳೆದ ವರ್ಷಕ್ಕೆ ಹೋಲಿಸಿದರೆ ೪.೭೨% ಹೆಚ್ಚಾಗಿದ್ದು, ೨೦೨೩-೨೪ರ ಪರಿಷ್ಕೃತ ಬಜೆಟ್‌ನಿಂದ ೦.೩೭% ಕಡಿಮೆಯಾಗಿದೆ. ಈ ವರ್ಷ ರಕ್ಷಣಾ ವಲಯಕ್ಕೆ ೨೦೨೪-೨೫ರ ಜಿಡಿಪಿಯ ೧.೮೯% ಮೊತ್ತ ಒದಗಿಸಲಾಗಿದೆ. ೨೦೨೨-೨೩ರ ಹಣಕಾಸು ವರ್ಷದಲ್ಲಿ ಭಾರತದ ರಕ್ಷಣಾ ವೆಚ್ಚ ೫.೨೫ ಲಕ್ಷ ಕೋಟಿಯಾಗಿದ್ದು, ೨೦೨೦-೨೧ ಮತ್ತು ೨೦೨೧-೨೨ರ ೪.೭೧ ಲಕ್ಷ ಕೋಟಿ ಮತ್ತು ೪.೭೮ ಲಕ್ಷ ಕೋಟಿಗಳಿಗಿಂತ ಹೆಚ್ಚಾಗಿದೆ.
ರಕ್ಷಣಾ ಸಚಿವಾಲಯ ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬನೆ ಮತ್ತು ರಕ್ಷಣಾ ಉತ್ಪನ್ನಗಳ ರಫ್ತು ಸಾಮರ್ಥ್ಯ ವೃದ್ಧಿಸುವ ಅವಳಿ ಗುರಿಗಳನ್ನು ಹೊಂದಿದ್ದು, ಇದಕ್ಕಾಗಿ ೬೨೧,೫೪೦.೮೫ ಕೋಟಿ ರೂಪಾಯಿಗಳನ್ನು, ಅಂದರೆ ಬಜೆಟ್‌ನ ೧೩.೦೪% ಪಾಲು ಒದಗಿಸಲಾಗಿದೆ. ಈ ಹೂಡಿಕೆಗಳ ಮೂಲಕ ರಕ್ಷಣಾ ವಲಯದ ಸ್ವಾವಲಂಬನೆ ವೃದ್ಧಿಯಾಗಲಿದೆ. ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ರಕ್ಷಣಾ ವಲಯದಲ್ಲಿ ಡೀಪ್ ತಂತ್ರಜ್ಞಾನವನ್ನು ಉತ್ತೇಜಿಸಲು ನೂತನ ಕ್ರಮಗಳನ್ನು ಕೈಗೊಂಡಿದೆ. ಡೀಪ್ ಟೆಕ್ನಾಲಜಿ ವಿನೂತನ ವೈಜ್ಞಾನಿಕ ಮತ್ತು ತಾಂತ್ರಿಕ ಅಭಿವೃದ್ಧಿಗಳನ್ನು ಹೊಂದಿದ್ದು, ವಿವಿಧ ವಲಯಗಳಲ್ಲಿ ಬದಲಾವಣೆ ತರುವ ಸಾಮರ್ಥ್ಯ ಹೊಂದಿದೆ. ಈ ವಿಭಾಗ ಕೃತಕ ಬುದ್ಧಿಮತ್ತೆ, ಜೈವಿಕ ತಂತ್ರಜ್ಞಾನ, ಬ್ಲಾಕ್‌ಚೇನ್ ಮತ್ತು ಕ್ವಾಂಟಮ್ ಕಂಪ್ಯೂಟಿಂಗ್ ವಿಭಾಗಗಳಲ್ಲಿ ನವೀನ ಸಂಶೋಧನೆ ಮತ್ತು ಅಭಿವೃದ್ಧಿಗಳನ್ನು ಒಳಗೊಂಡಿದೆ. ಆದರೆ ಈ ಯೋಜನೆಯ ಕುರಿತ ಸಂಪೂರ್ಣ ಮಾಹಿತಿಗಳು ಲಭ್ಯವಾಗಿಲ್ಲ.
ಈ ಬಾರಿಯ ರಕ್ಷಣಾ ಬಜೆಟ್‌ನಲ್ಲಿ ೨.೮೨ ಲಕ್ಷ ಕೋಟಿ ರೂಪಾಯಿಗಳ ಖರ್ಚು, ೧.೭೨ ಲಕ್ಷ ಕೋಟಿ ರೂಪಾಯಿಗಳ ಬಂಡವಾಳ ಹೂಡಿಕೆ, ಮತ್ತು ೧.೪೧ ಲಕ್ಷ ಕೋಟಿ ರೂಪಾಯಿಗಳ ಪಿಂಚಣಿ ಮೊತ್ತ ಸೇರಿದೆ. ಮಿಲಿಟರಿ ಸಾಮರ್ಥ್ಯಗಳನ್ನು ಹೆಚ್ಚಿಸಲು ಇರುವ ಬಂಡವಾಳ ಕಳೆದ ವರ್ಷಕ್ಕಿಂತ ೫.೭೮% ಹೆಚ್ಚಾಗಿದೆ. ಭಾರತ ನೂತನ ಯುದ್ಧ ವಿಮಾನಗಳು, ಹೆಲಿಕಾಪ್ಟರ್‌ಗಳು, ಯುದ್ಧ ನೌಕೆಗಳು, ಟ್ಯಾಂಕ್‌ಗಳು, ಆರ್ಟಿಲರಿ ವ್ಯವಸ್ಥೆಗಳು, ರಾಕೆಟ್‌ಗಳು, ಕ್ಷಿಪಣಿಗಳು, ಮಾನವರಹಿತ ವ್ಯವಸ್ಥೆಗಳು, ಹಾಗೂ ವಿವಿಧ ಯುದ್ಧ ತಂತ್ರಜ್ಞಾನಗಳ ಮೂಲಕ ತನ್ನ ಸೇನೆಯನ್ನು ಮೇಲ್ದರ್ಜೆಗೆ ಏರಿಸುತ್ತಿದೆ.
ಬಜೆಟ್ ಪ್ರಸ್ತುತ ಸುಖೋಯಿ-೩೦ ಪಡೆಯನ್ನು ಆಧುನೀಕರಿಸುವ, ಹೆಚ್ಚುವರಿ ವಿಮಾನಗಳನ್ನು ಖರೀದಿಸುವ, ಮಿಗ್-೨೯ ವಿಮಾನಗಳಿಗೆ ಆಧುನಿಕ ಇಂಜಿನ್‌ಗಳನ್ನು ಖರೀದಿಸುವ, ಸಿ-೨೯೫ ಸಾಗಾಣಿಕಾ ವಿಮಾನಗಳು, ಕ್ಷಿಪಣಿ ವ್ಯವಸ್ಥೆಗಳು, ಡೆಕ್ ಆಧಾರಿತ ಯುದ್ಧ ವಿಮಾನಗಳು ಮತ್ತು ಸಬ್‌ಮರೀನ್‌ಗಳನ್ನು ಖರೀದಿಸುವ ಉದ್ದೇಶಗಳಿಗೆ ನೆರವಾಗಲಿದೆ.
ಬಜೆಟ್ ದಾಖಲೆಗಳ ಪ್ರಕಾರ, ಕಳೆದ ವರ್ಷ ಸೇನಾಪಡೆಗಳಿಗೆ ಒದಗಿಸಲಾದ ೧.೬೨ ಲಕ್ಷ ಕೋಟಿ ರೂಪಾಯಿಗಳ ಪೈಕಿ ೫,೩೭೨ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲು ಸಾಧ್ಯವಾಗಿರಲಿಲ್ಲ. ೨೦೨೨-೨೩ನೇ ಸಾಲಿನಲ್ಲಿ, ಚೀನಾದ ಜೊತೆಗೆ ನಡೆದ ಗಡಿ ಉದ್ವಿಗ್ನತೆಗಳ ಕಾರಣದಿಂದ ಭಾರತೀಯ ಸೇನಾಪಡೆಗಳು ಹಿಂದಿನ ಬಾರಿಯ ಬಜೆಟ್‌ನಲ್ಲಿ ನೀಡಿದ ಮೊತ್ತಕ್ಕಿಂತ ಹೆಚ್ಚುವರಿಯಾಗಿ ೨೧,೦೦೦ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿವೆ. ಇದು ತುರ್ತು ಖರೀದಿಗಳನ್ನು ನಡೆಸಲು ಮತ್ತು ಮುಂಚೂಣಿ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಡೆಸಲು ಮಾಡಿದ ವೆಚ್ಚವಾಗಿತ್ತು.
೨೦೨೩-೨೪ನೇ ಸಾಲಿನ ಹಣಕಾಸು ವರ್ಷಕ್ಕೆ ಪರಿಷ್ಕೃತ ಅಂದಾಜಿನ ಪ್ರಕಾರ, ಸೈನಿಕರಿಗೆ ಒದಗಿಸುವ ವೆಚ್ಚ ಕಳೆದ ಬಾರಿ ಒದಗಿಸಿದ ಮೊತ್ತಕ್ಕಿಂತ ೨೮,೫೪೮ ಕೋಟಿ ಹೆಚ್ಚಾಗಿತ್ತು. ಈ ಹೆಚ್ಚಳಕ್ಕೆ ಸಂಬಳ ಮತ್ತು ಭತ್ಯೆಗಳು, ಸಾಗಾಣಿಕೆ, ನಿವೃತ್ತ ಸೈನಿಕರಿಗೆ ಒದಗಿಸುವ ಆರೋಗ್ಯ ಯೋಜನೆಗಳು, ರಾಷ್ಟ್ರೀಯ ರೈಫಲ್‌ಗೆ ಸಂಬಂಧಿಸಿದ ವೆಚ್ಚಗಳು ಕಾರಣವಾಗಿವೆ.
ಈ ವರ್ಷ ಒದಗಿಸಿರುವ ಮೊತ್ತವನ್ನು ಸ್ಥಳೀಯವಾಗಿ ನಿರ್ಮಿಸಲಾಗುವ ಆಧುನಿಕ ಆಯುಧ ವ್ಯವಸ್ಥೆಗಳನ್ನು ಖರೀದಿಸಲು ಬಳಸಲಾಗುತ್ತದೆ. ಇದು ಭಾರತದ ಒಟ್ಟಾರೆ ಜಿಡಿಪಿಯ ಮೇಲೆ ಧನಾತ್ಮಕ ಪರಿಣಾಮ ಬೀರಿ, ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಿ, ಬಂಡವಾಳ ಹೂಡಿಕೆಯನ್ನು ಉತ್ತೇಜಿಸಿ, ದೇಶೀಯ ಆರ್ಥಿಕತೆಯನ್ನು ಉದ್ದೇಶಿಸಲಿದೆ.
ಭಾರತದ ಗಡಿ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸುವ ಸಲುವಾಗಿ ಕಾರ್ಯ ನಿರ್ವಹಿಸುವ ಬಾರ್ಡರ್ ರೋಡ್ಸ್ ಆರ್ಗನೈಸೇಶನ್‌ಗೆ (ಬಿಆರ್‌ಒ) ೬,೫೦೦ ಕೋಟಿ ರೂಪಾಯಿಗಳನ್ನು ಒದಗಿಸಲಾಗಿದೆ. ಈ ಮೊತ್ತ ೨೦೨೩-೨೪ನೇ ಹಣಕಾಸು ವರ್ಷದ ಮೊತ್ತಕ್ಕಿಂತ ೩೦% ಹೆಚ್ಚಾಗಿದ್ದು, ೨೦೨೧-೨೨ನೇ ಹಣಕಾಸು ವರ್ಷಕ್ಕಿಂತ ೧೬೦% ಹೆಚ್ಚಾಗಿದೆ. ಈ ಹೆಚ್ಚಳಕ್ಕೆ ಗಡಿ ಪ್ರದೇಶದಲ್ಲಿ ಭಾರತ ಮತ್ತು ಚೀನಾಗಳ ನಡುವಿನ ಉದ್ವಿಗ್ನತೆ ಕಾರಣವಾಗಿದೆ ಎನ್ನಲಾಗಿದೆ. ಇದು ಗಡಿ ಪ್ರದೇಶದಲ್ಲಿ ಮೂಲಭೂತ ಸೌಕರ್ಯಗಳ ಸುಧಾರಣೆಗೆ ಸರ್ಕಾರದ ಬದ್ಧತೆಯನ್ನು ಪ್ರದರ್ಶಿಸಿದೆ.
ಭಾರತದ ಮಧ್ಯಂತರ ಬಾಹ್ಯಾಕಾಶ ಬಜೆಟ್
ಈ ವರ್ಷ, ಭಾರತದ ಬಾಹ್ಯಾಕಾಶ ವಲಯ ಅತ್ಯಂತ ದೊಡ್ಡ ಮಟ್ಟದ ಯೋಜನೆಗಳನ್ನೇನೂ ಹಾಕಿಕೊಂಡಿಲ್ಲ. ಭಾರತದ ಬಾಹ್ಯಾಕಾಶ ಬಜೆಟ್‌ನಲ್ಲಿ ಕೇವಲ ೪% ಹೆಚ್ಚಳವಾಗಿರುವುದು ಇದನ್ನು ವಿವರಿಸುತ್ತದೆ. ಆದರೆ, ಬಾಹ್ಯಾಕಾಶ ವಲಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಖಾಸಗಿ ಹೂಡಿಕೆಗಳನ್ನು ಉತ್ತೇಜಿಸಲು ಒಂದು ಲಕ್ಷ ಕೋಟಿ ರೂಪಾಯಿಗಳ ನೂತನ ನಿಧಿ ಒದಗಿಸಲಾಗಿದ್ದು, ಇದರಿಂದ ೨೦೦ಕ್ಕೂ ಹೆಚ್ಚು ಬಾಹ್ಯಾಕಾಶ ಹಾರಾಟ ಸ್ಟಾರ್ಟಪ್‌ಗಳಿಗೆ ಉತ್ತೇಜನ ದೊರಕಲಿದೆ.
೨೦೨೪ರಲ್ಲಿ ಇನ್ನೂ ಯಾವುದೇ ಮಹತ್ವದ ಬಾಹ್ಯಾಕಾಶ ಯೋಜನೆಗಳನ್ನು ಉದ್ದೇಶಿಸಲಾಗಿರದ ಕಾರಣ, ಬಾಹ್ಯಾಕಾಶ ಇಲಾಖೆಗೆ ೨೦೨೪-೨೫ರ ಕೇಂದ್ರ ಮಧ್ಯಂತರ ಬಜೆಟ್‌ನಲ್ಲಿ ೪%ದಷ್ಟು ಸಣ್ಣ ಪ್ರಮಾಣದ ಹೆಚ್ಚುವರಿ ಮೊತ್ತವನ್ನು ಒದಗಿಸಲಾಗಿದೆ. ಕಳೆದ ಬಾರಿ ೧೨,೫೪೫ ಕೋಟಿ ರೂಪಾಯಿಗಳಿದ್ದ ಬಾಹ್ಯಾಕಾಶ ಬಜೆಟ್, ಈ ಬಾರಿ ೧೩,೦೪೩ ಕೋಟಿ ರೂಪಾಯಿಗಳಾಗಿದೆ. ಈ ವರ್ಷದಲ್ಲಿ ಭಾರತದ ಬಾಹ್ಯಾಕಾಶ ಕಾರ್ಯಕ್ರಮಗಳಲ್ಲಿ ಇತರ ಯೋಜನೆಗಳ ಜೊತೆಗೆ, ಚಂದ್ರ ಅನ್ವೇಷಣಾ ಸಿದ್ಧತೆ (ಚಂದ್ರಯಾನ) ಮತ್ತು ಮಾನವ ಸಹಿತ ಬಾಹ್ಯಾಕಾಶ ಯಾತ್ರೆ (ಗಗನಯಾನ) ಯೋಜನೆಗಳ ಸಿದ್ಧತೆಗೆ ಹೆಚ್ಚಿನ ಗಮನ ನೀಡಲಿದ್ದು, ಉಡಾವಣಾ ಪೂರ್ವ ಪರೀಕ್ಷೆಗಳನ್ನು ನಡೆಸಲಾಗುತ್ತದೆ.
೨೦೨೩ರಲ್ಲಿ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಬಹುನಿರೀಕ್ಷಿತ ಚಂದ್ರಯಾನ-೩ ಯೋಜನೆಯನ್ನು ಯಶಸ್ವಿಯಾಗಿ ನಿರ್ವಹಿಸಿ, ಚಂದ್ರನ ಮೇಲ್ಮೈಯಲ್ಲಿ ಲ್ಯಾಂಡರ್ ಅನ್ನು ಯಶಸ್ವಿಯಾಗಿ ಸಾಫ್ಟ್ ಲ್ಯಾಂಡಿಂಗ್ ನಡೆಸಿತು. ಅದರೊಡನೆ, ಇಸ್ರೋ ಸೂರ್ಯನ ವೀಕ್ಷಣೆ ನಡೆಸುವ ಆದಿತ್ಯ ಎಲ್೧ ಯೋಜನೆಯನ್ನು ಕೈಗೆತ್ತಿಕೊಂಡಿತು. ಇದಾದ ಬಳಿಕ, ನ್ಯೂಟ್ರಾನ್ ನಕ್ಷತ್ರಗಳು ಮತ್ತು ಕಪ್ಪುಕುಳಿಗಳನ್ನು ಅಧ್ಯಯನ ನಡೆಸುವ ಎಕ್ಸ್ಪೋಸ್ಯಾಟ್ (ಎಕ್ಸ್ರೇ ಪೋಲಾರಿಮೆಟ್ರಿ ಸ್ಯಾಟಲೈಟ್) ಯೋಜನೆಯನ್ನು ಉಡಾವಣೆಗೊಳಿಸಿತು. ಇದಲ್ಲದೆ, ಭಾರತ ೨೦೨೫ರ ವೇಳೆಗೆ ಚಂದ್ರನ ಮೇಲೆ ಮಾನವರನ್ನು ಕಳುಹಿಸುವ ಗುರಿ ಹೊಂದಿರುವ ಅಮೆರಿಕಾದ ಆರ್ಟೆಮಿಸ್ ಅಕಾರ್ಡ್ಗೆ ಸಹಿ ಹಾಕಿತು.
೨೦೨೪ರಲ್ಲಿ ನಿಯೋಜನೆಗೊಂಡಿರುವ ಪ್ರಮುಖ ಉಡಾವಣೆಗಳಲ್ಲಿ ಗಗನಯಾನ ಯೋಜನೆಗೆ ಸಂಬಂಧಿಸಿದಂತೆ ಮಾನವ ರಹಿತ ಹಾರಾಟ ಪರೀಕ್ಷೆ, ಸ್ಮಾಲ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಎಸ್‌ಎಸ್‌ಎಲ್‌ವಿ) ಮೂರನೇ ಪರೀಕ್ಷಾರ್ಥ ಉಡಾವಣೆ, ಹಾಗೂ ಜಂಟಿ ಯೋಜನೆಯಾದ ನಾಸಾ - ಇಸ್ರೋ ಸಿಂಥೆಟಿಕ್ ಅಪರ್ಚರ್ ರೇಡಾರ್ (ಎಸ್‌ಎಆರ್) ಯೋಜನೆಗಳು ಸೇರಿವೆ. ಅದರೊಡನೆ, ಇಸ್ರೋ ವಿಜ್ಞಾನಿಗಳು ಮತ್ತು ಇಂಜಿನಿಯರ್‌ಗಳು ಪ್ರೊಪೆಲ್ಲೆಂಟ್‌ಗಳು, ಉಪಗ್ರಹ ಪ್ರೊಪಲ್ಷನ್ ತಂತ್ರಜ್ಞಾನಗಳು, ನೂತನ ಉಡಾವಣಾ ವಾಹನಗಳನ್ನು ಅಭಿವೃದ್ಧಿ ಪಡಿಸುವ ಪ್ರಯತ್ನ ನಡೆಸುತ್ತಿದ್ದು, ಈ ತಂತ್ರಜ್ಞಾನಗಳನ್ನು ಬಾಹ್ಯಾಕಾಶ ಉದ್ಯಮಕ್ಕೆ ವರ್ಗಾವಣೆ ನಡೆಸಲು ಉದ್ದೇಶಿಸಿದೆ.