ಬಿಜೆಪಿಗರು ೧೦ ವರ್ಷ ವಿಪಕ್ಷದಲ್ಲಿಯೇ ಕುಳಿತಿರುತ್ತಾರೆ
ಕೊಪ್ಪಳ: ಬಿಜೆಪಿಯವರು ಯಾವಾಗಲೂ ಅಡ್ಡ ದಾರಿ ಹಿಡಿದೇ ಸರ್ಕಾರ ಮಾಡಿದ್ದಾರೆ. ಹಾಗಾಗಿ ಬಿಜೆಪಿಯವರು ೧೦ ವರ್ಷ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುತ್ತಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಹೇಳಿದರು.
ತಾಲ್ಲೂಕಿನ ಗಿಣಿಗೇರಾ ಏರ್‌ಸ್ಟ್ರಿಪ್‌ನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆ.ಎಚ್. ಪಟೇಲ್ ಹೇಳಿದಂತೆ ಬಿಜೆಪಿಯವರು ಓತೀನಿಂದ ಬೆನ್ನುಹತ್ತಿದ್ದಾರೆ. ಸರ್ಕಾರ ಬೀಳುತ್ತದೆ ಎಂದು ಹಿಂದೆ ಬಿದ್ದಿದ್ದಾರೆ. ಆದರೆ ನಮ್ಮ ಸರ್ಕಾರ ಗಟ್ಟಿಯಾಗಿದೆ. ಸರ್ಕಾರ ಬೀಳುವ ಪ್ರಶ್ನೆಯೇ ಇಲ್ಲ. ಸರ್ಕಾರ ಬೀಳಿಸುವ ಪ್ರಯತ್ನವನ್ನು ಸತತವಾಗಿ ನಡೆಸಿದ್ದಾರೆ. ಬಿಜೆಪಿಯವರು ಯಾವಾಗಲೂ ಅಡ್ಡದಾರಿ ಹಿಡಿದೇ ಸರ್ಕಾರ ಮಾಡಿದ್ದಾರೆ. ಹಾಗಾಗಿ ಬಿಜೆಪಿಯವರು ೧೦ ವರ್ಷ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುತ್ತಾರೆ ಎಂದರು.
ವಿಧಾನಸಭೆ ಚುನಾವಣೆಯಲ್ಲಿ 40 ಸಾವಿರ ಮತದಿಂದ ಗೆಲ್ಲಿಸಿ ಎಂದಿದ್ದರು, ಅದರಂತೆಯೇ ೪೩ ಸಾವಿರ ಮತ ಬಂದಿತ್ತು. ಅದೇ ರೀತಿ ೧೯ನೇ ಕ್ರಸ್ಟ್ ಗೇಟ್ ಕಿತ್ತಿದ್ದಾಗ ಡ್ಯಾಂ ತುಂಬುತ್ತದೆ. ನಾನೇ ಬಂದು ಬಾಗೀನ ಅರ್ಪಿಸುತ್ತೇವೆ ಎಂದಿದ್ದರು. ಅದರಂತೆಯೇ ಬಾಗೀನ ಅರ್ಪಿಸುತ್ತಿದ್ದಾರೆ ಎಂದರು.
ಗ್ರಾಮೀಣ ರಸ್ತೆಗಳು ಹಿಂದಿನ ಸರ್ಕಾರದಲ್ಲಿಯೇ ಹಾಳಾಗಿದ್ದು, ಕೆ.ಕೆ.ಆರ್.ಟಿ.ಬಿಯ ೨೦೦ ಕೋಟಿ ರೂ.ಗೂ ಹೆಚ್ಚು ಅನುದಾನ ಮೀಸಲಿಟ್ಟಿದ್ದೇವೆ. ಹಿಂದಿನವರು ಮಾಡಿದ ಪಾಪವನ್ನು ನಾವು ಮುಚ್ಚುತ್ತಿದ್ದೇವೆ. ತಾಳ್ಮೆ, ಸಮಾಧಾನ ಮಾಡಿಕೊಳ್ಳಿ. ೩ ವರ್ಷಸಲ್ಲಿ ಎಲ್ಲ ರಸ್ತೆಗಳನ್ನು ಅಭಿವೃದ್ಧಿ ಪಡಿಸುತ್ತೇವೆ ಎಂದರು.
ಮುನಿರತ್ನ ಹೇಳಿಕೆಗಳು ಸಾಮಾಜಿಕ ಜಾಲತಾಣಯೇ ವೈರಲ್ ಆಗಿವೆ. ಶಾಸಕರಾದವರು ಈ ರೀತಿ ಮಾತನಾಡಬಾರದು ಎಂದು ನೋಟಿಸ್ ಕೊಟ್ಟಿದ್ದು, ಯಾವ ರೀತಿ ಮಾತನಾಡಬೇಕೋ, ಆ ರೀತಿ ಮಾತನಾಡಬೇಕು. ತಾಯಿ, ಹೆಂಡತಿ ಬಗ್ಗೆ ಮಾತನಾಡಿದ್ದಾರೆ. ಯಾರೇ ಆದರೂ ಮಾತಿನ ಮೇಲೆ ಹಿಡಿತ ಇರಬೇಕು ಎಂದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ನವಲಿ ಜಲಾಶಯದ ಡಿಪಿಆರ್ ಆಗಿತ್ತು. ಬಳಿಕ ಒಂದೂ ಚರ್ಚೆಯು ಆಗಲಿಲ್ಲ. ನಮ್ಮ ಸರ್ಕಾರ ಬಂದ ಮೇಲೆ ನವಲಿ ಜಲಾಶಯಕ್ಕೆ ಸಂಬಂಧಿಸಿದಂತೆ ಚರ್ಚೆಗಳಾಗುತ್ತಿವೆ. ನೀರಾವರಿ ಸಚಿವರು ಆಂಧ್ರಪ್ರದೇಶ ಮತ್ತು ತೆಲಂಗಾಣ ಸಿಎಂಗಳ ಜತೆ ಮಾತನಾಡುತ್ತಿದ್ದಾರೆ. ಇದೊಂದು ದೊಡ್ಡ ಯೋಜನೆಯಾಗಿದ್ದು, ೧೦೦ ಟಿಎಂಸಿಗೂ ಹೆಚ್ಚು ನೀರು ನಿಲ್ಲಿಸುವುದೆಂದರೆ ಬಹಳಷ್ಟು ಕೆಲಸಗಳಿರುತ್ತವೆ. ಹಾಗಾಗಿ ಸಮಯ ತೆಗೆದುಕೊಳ್ಳುತ್ತದೆ ಎಂದರು.
ಕಲ್ಯಾಣ ಕರ್ನಾಟಕ ಉತ್ಸವದಂದು ಕಲಬುರ್ಗಿಯಲ್ಲಿ ಸಚಿವ ಸಂಪುಟ ಸಭೆ ನಡೆದಿದ್ದು, ಇದರಲ್ಲಿ ಜಿಲ್ಲೆಗೆ ೫೬ ಕೋಟಿ ರೂ. ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣಕ್ಕೆ, ನೂತನವಾದ ಮೂರು ತಾಲ್ಲೂಕಿಗೆ ಪ್ರಜಾಸೌಧ, ೬೫ ಕೋಟಿ ರೂ. ಮೂರು ತಾಲ್ಲೂಕುಗಳಲ್ಲಿ ೧೦೦ ಹಾಸಿಗೆ ಆಸ್ಪತ್ರೆ, ೧೦೦ ಇರುವುದನ್ನು ೪೫೦ ಹಾಸಿಗೆಗೆ ಹೆಚ್ಚಿಸಿ, ಆಸ್ಪತ್ರೆಗೆ ಅನುಮೋದನೆ ಆಗಿದೆ. ತೋಟಗಾರಿಕಾ ಟೆಕ್ನಾಲಜಿ ಪಾರ್ಕ್ ನಿರ್ಮಿಸಲು ಡಿಪಿಆರ್ ಸರಿಯಾಗಿ ಸಲ್ಲಿಕೆ ಆಗಿಲ್ಲ. ಹಾಗಾಗಿ ಈ ಸಂಪುಟ ಸಭೆಯಲ್ಲಿ ಅನುಮೋದನೆ ಆಗದೇ, ವಾಪಾಸ್ ಬಂದಿದೆ ಎಂದರು.
ತಿರುಪತಿ ಲಡ್ಡುಗೆ ನಂದಿನಿ ತುಪ್ಪ ಬಳಕೆಗೆ ಆದೇಶ ಮಾಡಿದ್ದು, ಏಕೆಂದರೆ ಮೊದಲು ಕೂಡಾ ನಂದಿನಿ ತುಪ್ಪವನ್ನು ಬಳಕೆ ಮಾಡುತ್ತಿತ್ತು. ಕಾರಣಾಂತರಗಳಿಂದ ಬೇರೆ ತುಪ್ಪ ಬಳಕೆ ಮಾಡುತ್ತಿದ್ದರು. ನಂದಿನಿ ತುಪ್ಪ ಉತ್ತಮವಾಗಿದ್ದು, ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಹೇಳಿಕೆ ನೀಡಿದ್ದಾರೆ. ತಿರುಪತಿ ಲಡ್ಡು ಪ್ರಸಿದ್ಧಿ ಪಡೆದಿದೆ. ಇದಕ್ಕೆ ಬಳಸಿದ ತುಪ್ಪದಲ್ಲಿ ಏನೇನೋ ಬಳಕೆ ಮಾಡಿರುವುದು ಸರಿಯಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆ ಆಗುತ್ತದೆ ಎಂದರು.
ರಾಜ್ಯಪಾಲರ ಕಚೇರಿ ಬಿಜೆಪಿ ಕಚೇರಿಯಾಗಿದೆ. ರಾಜ್ಯಪಾಲರಿಗೆ ಅಭಿವೃದ್ಧಿ ಬೇಕಿಲ್ಲ. ಅವರು ಕೇವಲ ಬಿಜೆಪಿಯವರು ಹೇಳಿದಂತೆ ಕೇಳುತ್ತಿದ್ದಾರೆ. ಈ ಮೂಲಕ ಬಿಜೆಪಿಯವರು ಹಾದಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ರಾಜ್ಯಪಾಲರು ತಮ್ಮ ಕೆಲಸ ಬಿಟ್ಟು. ಕೇವಲ ಸಿಎಂಗೆ ನೋಟಿಸ್ ನೀಡುತ್ತಿದ್ದಾರೆ ಎಂದರು.