For the best experience, open
https://m.samyuktakarnataka.in
on your mobile browser.

ಬಿಜೆಪಿಗೆ ಕೆಂಡದ ಮಳೆ ಶಾಖ

11:00 AM Dec 28, 2023 IST | Samyukta Karnataka
ಬಿಜೆಪಿಗೆ ಕೆಂಡದ ಮಳೆ ಶಾಖ

ಲೋಕಸಭಾ ಚುನಾವಣೆಯ ನೆರಳು ಕವಿಯುತ್ತಿರುವ ಸಂದರ್ಭದಲ್ಲಿ ಕೆಲವೇ ಮುಖಂಡರು ತಮ್ಮ ವೈಯಕ್ತಿಕ ನೆಲೆಗಟ್ಟಿನ ಅಭಿಪ್ರಾಯಗಳನ್ನು ಬೀದಿಯಲ್ಲಿ ನಿಂತು ಮಾತನಾಡುತ್ತಿರುವುದು ಒಂದು ಜವಾಬ್ದಾರಿಯುತ ರಾಜಕೀಯ ಪಕ್ಷದ ಶಿಸ್ತಿಗೆ ಹೊಂದದ ಮಾತು.

ಭಾರತದ ರಾಜಕಾರಣದಲ್ಲಿ ಭಾರತೀಯ ಜನತಾ ಪಕ್ಷ ಒಂದು ವಿಭಿನ್ನ ಪಕ್ಷ ಎಂಬ ಅಂಶದಿಂದಾಗಿಯೇ ಅದರ ಬಗ್ಗೆ ದೇಶದ ಜನರ ಗಮನ ಹಾಗೂ ವಿಶ್ವಾಸ ಹರಿದಿದೆ. ಕಾರಣ ಇಲ್ಲವೇ ಪ್ರೇರಣೆ ಏನೇ ಇರಲಿ ಕಳೆದ ವಿಧಾನಸಭಾ ಚುನಾವಣೆಯ ನಂತರ ಕರ್ನಾಟಕದ ಬಿಜೆಪಿಯಲ್ಲಿ ನಡೆಯುತ್ತಿರುವ ಆಂತರಿಕ ಬೆಳವಣಿಗೆಗಳಾಗಲೀ ಇಲ್ಲವೇ ಕೆಲ ಮುಖಂಡರ ಅನಿಯಂತ್ರಿತ ಟೀಕಾ ಪ್ರಹಾರವಾಗಲಿ ವಿಭಿನ್ನ ಎಂಬ ಹಣೆಪಟ್ಟಿ ಹೊತ್ತ ಪಕ್ಷಕ್ಕೆ ಸರಿಹೊಂದುವುದಿಲ್ಲ. ಲೋಕಸಭಾ ಚುನಾವಣೆಯ ನೆರಳು ಕವಿಯುತ್ತಿರುವ ಸಂದರ್ಭದಲ್ಲಿ ಕೆಲವೇ ಮುಖಂಡರು ತಮ್ಮ ವೈಯಕ್ತಿಕ ನೆಲೆಗಟ್ಟಿನ ಅಭಿಪ್ರಾಯಗಳನ್ನು ಬೀದಿಯಲ್ಲಿ ನಿಂತು ಮಾತನಾಡುತ್ತಿರುವುದು ಒಂದು ಜವಾಬ್ದಾರಿಯುತ ರಾಜಕೀಯ ಪಕ್ಷದ ಶಿಸ್ತಿಗೆ ಹೊಂದದ ಮಾತು. ಬಿಜೆಪಿಗೆ ಬಿ.ವೈ.ವಿಜಯೇಂದ್ರ ಹೊಸದಾಗಿ ಅಧ್ಯಕ್ಷರಾಗಿ ನೇಮಕಗೊಂಡು ಪದಾಧಿಕಾರಿಗಳ ನಿಷ್ಕರ್ಷೆಯಾದ ಮೇಲೆ ಇಂತಹ ಹೊಮ್ಮು-ಬಿಮ್ಮಿನ' ವಾತಾವರಣ ಮುಂದುವರಿದಿರುವುದು ನಿಜಕ್ಕೂ ಅರ್ಥವಾಗದ ಸಂಗತಿ. ಅಧಿಕಾರ ಕೈತಪ್ಪಿದ ನಂತರ ಕಾರ್ಯಕರ್ತರು ಹಾಗೂ ಮುಖಂಡರ ಮಟ್ಟದಲ್ಲಿ ಹತಾಶೆಯ ವಾತಾವರಣ ತಲೆದೋರಿ ಗಗನ ಮತ್ತು ಭೂಮಿಯ ನಡುವಿನ ವ್ಯತ್ಯಾಸಗಳು ಅರಿವಿಗೆ ಬಾರದೇ ಹೋಗುವ ಸಂದರ್ಭಗಳು ಹೆಚ್ಚು. ೧೯೮೮-೮೯ರ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯ ಮುನ್ನಾ ದಿನಗಳಲ್ಲಿ ಎಸ್.ಆರ್. ಬೊಮ್ಮಾಯಿ ಸರ್ಕಾರ ಪದಚ್ಯುತಗೊಂಡ ನಂತರ ಜನತಾದಳದಲ್ಲಿ ಇಂತಹುದೇ ವಾತಾವರಣ ಸೃಷ್ಟಿಯಾಗಿದ್ದನ್ನು ಸ್ಮರಿಸಬಹುದು. ದೊಡ್ಡಬಳ್ಳಾಪುರದ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಕೇಂದ್ರದಲ್ಲಿ ಏರ್ಪಾಡಾಗಿದ್ದ ಕಾರ್ಯಕರ್ತರ ಸಭೆಗೆ ಬಂದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ವಿರುದ್ಧ ಘೇರಾವ್ ಮಾಡಿರುವ ಯತ್ನಗಳು ಜರುಗಿ ಕೆಲ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದ್ದು ಉಂಟು. ಆದರೆ ಪ್ರಭಾವಿ ಮುಖಂಡ ಎಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಜನತಾದಳದ ಒಂದು ಭಾಗ ಸಮಾಜವಾದಿ ಜನತಾಪಕ್ಷದ ಹೆಸರಿನಲ್ಲಿ ತಮ್ಮನ್ನು ಗುರುತಿಸಿಕೊಂಡ ನಂತರ ಜನತಾದಳದಲ್ಲಿ ಮತ್ತೆ ಬೇಜವಾಬ್ದಾರಿಯುತ ಪರಿಸ್ಥಿತಿ ಸೃಷ್ಟಿಯಾಗಿತ್ತು. ಆದರೆ ಈಗಿನ ಬಿಜೆಪಿಗೆ ಅಂತಹ ಯಾವುದೇ ಸಮಸ್ಯೆ ಕಾಣುತ್ತಿಲ್ಲ. ಬಸವರಾಜ ಬೊಮ್ಮಾಯಿ ಸರ್ಕಾರ ಅಧಿಕಾರದಲ್ಲಿದ್ದಾಗಲೂ, ಪಕ್ಷದ ಮುಖಂಡರ ವಿರುದ್ಧ ಬಿಚ್ಚುಮಾತಿನ ಮೂಲಕ ಭಿನ್ನಮತಿಯ ಎಂಬ ಹಣೆಪಟ್ಟಿ ಹೊತ್ತಿದ್ದ ಬಸನಗೌಡ ಯತ್ನಾಳ್ ಚುನಾವಣೆಯ ನಂತರ ಅಧಿಕಾರ ಕೈತಪ್ಪಿದ ಮೇಲೂ ತಮ್ಮ ಆಕ್ರಮಣ ಧೋರಣೆಯನ್ನು ಮತ್ತಷ್ಟು ಪ್ರಖರವಾಗಿ ಮುಂದುವರಿಸಿಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಕೋವಿಡ್ ನಿಯಂತ್ರಣಕ್ಕೆ ೪೦ಸಾವಿರ ಕೋಟಿ ಹಣ ಅಕ್ರಮವಾಗಿದೆ' ಎಂದು ಬಹಿರಂಗವಾಗಿ ಹೇಳಿರುವುದು ಈಗ ಪಕ್ಷದ ಮುಖಂಡರಿಗೆ ನುಂಗಲಾರದ ತುತ್ತು. ಈಗಿರುವಂತೆ ರಾಜ್ಯಮಟ್ಟದ ನಾಯಕರು ಯತ್ನಾಳ್ ಪರ ಅಥವಾ ವಿರುದ್ಧ ಯಾವುದೇ ಅಭಿಪ್ರಾಯಗಳನ್ನು ವ್ಯಕ್ತಪಡಿಸದೇ ಮೌನಕ್ಕೆ ಶರಣಾಗುತ್ತಿರುವುದು ಒಂದು ರೀತಿಯಲ್ಲಿ ಗುಂಪುಗಾರಿಕೆಯ ದಿಕ್ಸೂಚಿ. ಹೈಕಮಾಂಡ್‌ಗೆ ಸಮಸ್ತ ವಿಚಾರವೆಲ್ಲಾ ಗೊತ್ತಿದ್ದರೂ ಪರಿಸ್ಥಿತಿಯ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದೇ ಇರುವಾಗ ಕಾರ್ಯಕರ್ತರಾಗಲಿ ಅಥವಾ ಮುಖಂಡರಾಗಲೀ ಯಾವ ದಾರಿಯನ್ನು ಹಿಡಿಯಬೇಕು ಎಂದು ತಿಳಿಯದೇ ಗೊಂದಲಕ್ಕೆ ಸಿಕ್ಕಿ ಬಿದ್ದಿದ್ದಾರೆ. ಯತ್ನಾಳ್ ಅವರು ಗುರಿಯಿಟ್ಟವರಂತೆ ಪಕ್ಷದ ಸಹೋದ್ಯೋಗಿಗಳಾದ ಮುರುಗೇಶ ನಿರಾಣಿ, ಪ್ರತಿಪಕ್ಷದ ನಾಯಕ ಅಶೋಕ್, ಮೊದಲಾದವರ ಮೇಲೆ ಆರೋಪಗಳ ಸುರಿಮಳೆಗೈಯುತ್ತಿರುವುದು ಹೊಸದೇನಲ್ಲ. ಹಲವಾರು ಮಂದಿ ಜವಾಬ್ದಾರಿಯುತ ಮುಖಂಡರು, ಯತ್ನಾಳ್ ಅವರ ಬಿಚ್ಚು ಮಾತುಗಳನ್ನು `ಸಿಪಾಯಿ ದಂಗೆ' ಎಂಬ ಹೋಲಿಕೆಯನ್ನು ಒಪ್ಪಲು ನಿರಾಕರಿಸುತ್ತಾರೆ. ಏಕೆಂದರೆ ಸಿಪಾಯಿ ದಂಗೆಗೆ ಖಚಿತ ಕಾರಣವಿತ್ತು. ಆದರೆ ಯತ್ನಾಳ್ ಅವರ ವರ್ತನೆಗಳಿಗೆ ಕಾರಣಗಳೇ ನಿಗೂಢ. ಬಿಜೆಪಿಯಲ್ಲಿ ಈಗಲೂ ಗುರುತ್ವಾಕರ್ಷಣ ಶಕ್ತಿಯನ್ನು ಪಡೆದಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಖಚಿತ ಪ್ರತಿಕ್ರಿಯೆ ನೀಡದೇ ಸುಮ್ಮನಾಗುತ್ತಿರುವುದು ಗಂಭೀರ ಪರಿಸ್ಥಿತಿಯ ಇನ್ನೊಂದು ಮುಖ.
ಬಿಜೆಪಿ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳು ಸಾರ್ವಜನಿಕ ಆಸ್ತಿ. ಖಾಸಗಿ ಆಸ್ತಿಗಳಾಗಿದ್ದರೆ ಯಾರೊಬ್ಬರೂ ಪ್ರಶ್ನೆ ಮಾಡುವಂತಿರಲಿಲ್ಲ. ಜವಾಬ್ದಾರಿ ಹಾಗೂ ಕರ್ತವ್ಯಗಳನ್ನು ಪಕ್ಕಕ್ಕೆ ಇಟ್ಟು ವೈಯಕ್ತಿಕ ತಲುಬಿನ ರಾಜಕಾರಣ ಮಾಡುವುದು ಜವಾಬ್ದಾರಿಯುತ ರಾಜಕೀಯ ಪಕ್ಷದ ಲಕ್ಷಣವಲ್ಲ. ಜವಾಬ್ದಾರಿ ಹಾಗೂ ವಿಶ್ವಾಸಾರ್ಹ ಪಕ್ಷ ಎಂಬುದನ್ನು ಸಾರ್ವಜನಿಕರಿಗೆ ಮನವರಿಕೆ ಮಾಡುವ ಸಲುವಾಗಿಯಾದರೂ ಆಂತರಿಕ ತಿಕ್ಕಾಟ ಹಾಗೂ ಬೀದಿ ಜಗಳವನ್ನು ನಿಲ್ಲಿಸಿ ವಾತಾವರಣ ತಿಳಿಯಾಗುವಂತೆ ಮಾಡುವ ಮಹತ್ತರ ಹೊಣೆಗಾರಿಕೆಯನ್ನು ಬಿಜೆಪಿ ಹೈಕಮಾಂಡ್ ನಿರ್ವಹಿಸುವುದು ಈಗಿನ ಅಗತ್ಯ. ಇಲ್ಲವಾದರೆ ಲೋಕಸಭಾ ಚುನಾವಣೆಯಲ್ಲಿ ಜನ ಪಾಠ ಕಲಿಸುವುದು ಅನಿವರ‍್ಯವಾಗಬಹುದು.