ಬಿಜೆಪಿಗೆ ಖುಷಿ, ಕೈ ಕಸಿವಿಸಿ
ವಾಸುದೇವ ಹೆರಕಲ್ಲ
ವಿಜಯಪುರ: ವಕ್ಫ್ ವಿವಾದ ಭುಗಿಲೆದ್ದಿರುವ ಸಂದರ್ಭದಲ್ಲಿ ವಕ್ಫ್ ಕಾಯ್ದೆ ತಿದ್ದುಪಡಿ ಪರಿಶೀಲನೆಗೆ ನಿಯೋಜಿತವಾಗಿರುವ ಜಂಟಿ ಸಂಸದೀಯ ಸಮಿತಿ ಅಧ್ಯಕ್ಷ ಜಗದಂಬಿಕಾ ಪಾಲ್ ತಮ್ಮ ಇಬ್ಬರು ಸದಸ್ಯರೊಂದಿಗೆ ಗುರುವಾರ ಹುಬ್ಬಳ್ಳಿ, ವಿಜಯಪುರಕ್ಕೆ ಭೇಟಿ ನೀಡುತ್ತಿರುವುದು ಬಿಜೆಪಿಯಲ್ಲಿ ಖುಷಿಯ ವಾತಾವರಣ ಸೃಷ್ಟಿಸಿದ್ದರೆ ಕಾಂಗ್ರೆಸ್‌ನ ಕಸಿವಿಸಿಗೆ ಕಾರಣವಾಗಿದೆ.
ಜಗದಂಬಿಕಾ ಪಾಲ್ ನೇತೃತ್ವದ ಜೆಪಿಸಿ ತಂಡ ಗುರುವಾರ ಮುಂಜಾನೆ ಹುಬ್ಬಳ್ಳಿ ನಂತರ ಮಧ್ಯಾಹ್ನದ ವೇಳೆಗೆ ವಿಜಯಪುರಕ್ಕೆ ತಲುಪಲಿದೆ. ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ವೇದಿಕೆಗೆ ತೆರಳಿ ರೈತರೊಂದಿಗೆ ಸಂವಾದ ನಡೆಸಲಿದೆ. ಆ ನಂತರದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿ ಸಂಗ್ರಹಿಸಲಿದೆ.
ವಿಜಯಪುರದಲ್ಲಿ ಭಾರತೀಯ ಕಿಸಾನ್ ಸಂಘದ ಅಡಿಯಲ್ಲಿ ಕನ್ಹೇರಿ ಶ್ರೀಗಳು, ಕೂಡಲ ಸಂಗಮ ಪಂಚಮಸಾಲಿ ಜಗದ್ಗುರು ಸೇರಿದಂತೆ ನೂರಾರು ಮಠಾಧೀಶರು, ಬಿಜೆಪಿಯ ವಿವಿಧ ನಾಯಕರು, ವಿವಿಧ ಸಮಾಜಗಳ ಪ್ರತಿನಿಧಿಗಳು ಹಾಗೂ ಸಾವಿರಾರು ರೈತರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ್ದರು. ಅದೇ ವೇಳೆಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದಲ್ಲಿ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಯಿತು.
ಈ ಹೋರಾಟದಲ್ಲಿ ಪಾಲ್ಗೊಂಡ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅದೇ ದಿನ(ದಿನಾಂಕ ೪) ವಿಜಯಪುರ ಜಿಲ್ಲೆಯಲ್ಲಿ ರೈತರ ಜಮೀನುಗಳನ್ನು ವಕ್ಫ್ ವಶಪಡಿಸಿಕೊಳ್ಳಲು ಪ್ರಯತ್ನಿಸಿದ ಘಟನಾವಳಿಗಳು, ರೈತರ ಜಮೀನಿನ ಪಹಣಿಗಳಲ್ಲಿ ವಕ್ಫ್ ಹೆಸರು ಏಕಾಏಕಿ ನಮೂದಾಗಿರುವುದು, ರೈತರ ಹೋರಾಟ ಸೇರಿದಂತೆ ಎಲ್ಲ ವಿಷಯಗಳನ್ನು ವಿವರಿಸಿ ಸಂಸದೀಯ ಜಂಟಿ ಸಮಿತಿ ಅಧ್ಯಕ್ಷ ಜಗದಂಬಿಕಾ ಪಾಲ್ ಅವರಿಗೆ ಸುದೀರ್ಘ ಪತ್ರ ಬರೆದು ಇ-ಮೇಲ್ ಮಾಡಿದ್ದರು.
ತಕ್ಷಣವೇ ಸ್ಪಂದಿಸಿದ ಜಗದಂಬಿಕಾ ಪಾಲ್ ತಮ್ಮ ತಂಡದೊಂದಿಗೆ ದಿ. ೭ರಂದು ವಿಜಯಪುರಕ್ಕೆ ಭೇಟಿ ನೀಡುವ ಭರವಸೆ ನೀಡಿದ್ದರು. ಅದರಂತೆ ಮರುದಿನವೇ ಕೇಂದ್ರ ತಂಡದ ಅಧಿಕೃತ ಪ್ರವಾಸದ ವೇಳಾಪಟ್ಟಿ ಬಿಡುಗಡೆಯಾಯಿತು. ಇದು ಸಹಜವಾಗಿ ಪ್ರತಿಭಟನಾ ನಿರತ ಹೋರಾಟಗಾರರಲ್ಲಿ ಪುಳಕ ಉಂಟು ಮಾಡಿದೆ.
ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಸಂಸತ್ತಿನಲ್ಲಿ ವಕ್ಫ್ ಕಾಯ್ದೆ ತಿದ್ದುಪಡಿ ವಿಧೇಯಕ ಮಂಡನೆ ಆಗುವ ಸಾಧ್ಯತೆಗಳಿವೆ. ವಕ್ಫ್ ಕಾಯ್ದೆಯಲ್ಲಿನ ನ್ಯೂನತೆಗಳು, ಕೆಲವು ಕಲಂಗಳ ಅಪಾಯಕಾರಿ, ಜನವಿರೋಧಿ, ರೈತವಿರೋಧಿ ಅಂಶಗಳ ಬಗ್ಗೆ ವಿಜಯಪುರದ ಘಟನೆಗಳು ತಂಡಕ್ಕೆ ಪ್ರತ್ಯಕ್ಷ ಉದಾಹರಣೆಗಳಾಗಿ ಪರಿಗಣಿಸುವ ಅಗತ್ಯತೆಯನ್ನು ಮನಗಾಣಿಸುತ್ತದೆ. ಆ ಕಾರಣಕ್ಕಾಗಿ ಪ್ರತಿಭಟನೆಯಲ್ಲಿ ತೊಡಗಿರುವ ಬಿಜೆಪಿಗೆ ಜಗದಂಬಿಕಾ ಪಾಲ್ ಭೇಟಿ ಹಾಲು ಕುಡಿದಷ್ಟು ಸಂತೋಷವನ್ನು ತಂದಿದೆ.
ಕಾಂಗ್ರೆಸ್‌ಗೆ ಯಾಕೆ ಕಸಿವಿಸಿ?
ರಾಜ್ಯ ಕಾಂಗ್ರೆಸ್ ಸರ್ಕಾರ ವಕ್ಫ್ ವಿಚಾರದಲ್ಲಿ ಹಲವು ರೀತಿಯ ಗೊಂದಲದಲ್ಲಿ ಮುಳುಗಿದೆ. ಅದರಲ್ಲೂ ವಿಜಯಪುರ ಜಿಲ್ಲೆಯೊಂದರಲ್ಲಿಯೇ ನೂರಾರು ರೈತರ ಜಮೀನುಗಳ ಖಾತೆಗಳಲ್ಲಿ ಏಕಾಏಕಿ ವಕ್ಫ್ ಎಂದು ನಮೂದಾಗಿದೆ. ಇಂಡಿ ತಾಲೂಕಿನ ೪೪ ರೈತರ ಪಹಣಿಗಳಲ್ಲಿ ನಮೂದಾದ ವಕ್ಫ್‌ನ್ನು ರೈತರ ಪ್ರತಿಭಟನೆಯಿಂದಾಗಿ ವಾಪಸ್ ಪಡೆಯಲಾಗಿದೆ. ಸರ್ಕಾರಕ್ಕೆ ಈ ಪ್ರಕರಣ ಸಾಕಷ್ಟು ಮುಜುಗರಕ್ಕೂ ಕಾರಣವಾಗಿದೆ.
ಆದರೆ ಇಂಡಿ ತಾಲೂಕಿನ ರೈತರನ್ನು ಹೊರತುಪಡಿಸಿ (ಆ ತಪ್ಪನ್ನು ತಹಶೀಲ್ದಾರ್ ತಲೆಗೆ ಕಟ್ಟಲಾಗಿದೆ) ಇನ್ನುಳಿದ ರೈತರ ಪಹಣಿಗಳಲ್ಲಿ ವಕ್ಫ್ ಇನ್ನೂ ಉಳಿದುಕೊಂಡಿದೆ. ಇದಲ್ಲದೇ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿಯೂ ರೈತರ ಪಹಣಿಗಳಲ್ಲಿ ವಕ್ಫ್ ಬಂದು ಕುಳಿತಿರುವ ಪ್ರಕರಣಗಳು ಬೆಳಕಿಗೆ ಬಂದು ಇಡೀ ರಾಜ್ಯದಲ್ಲಿ ಕೋಲಾಹಲ ಉಂಟಾಗಿದೆ.
ಮುಖ್ಯಮಂತ್ರಿಗಳು ಸ್ವತಃ ಅಧಿಕಾರಿಗಳಿಗೆ ಆದೇಶ ನೀಡಿ ಇನ್ನು ಮುಂದೆ ಯಾವುದೇ ರೈತರ ಪಹಣಿಗಳಲ್ಲಿ ವಕ್ಫ್ ಹೆಸರು ಸೇರಕೂಡದು. ಈಗ ಕೊಟ್ಟಿರುವ ನೋಟಿಸ್‌ಗಳನ್ನು ವಾಪಸ್ ಪಡೆಯಲು ಸೂಚಿಸಿದ್ದಾರೆ. ಈಗ ಇರುವ ಪ್ರಶ್ನೆ ಎಂದರೆ ನೋಟಿಸ್ ಕೊಟ್ಟಿದ್ದು ಏಕೆ? ವಾಪಸ್ ಪಡೆಯುವುದಾಗಿ ಹೇಳಿದ್ದು ಯಾಕೆ?
ವಿಜಯಪುರ ಜಿಲ್ಲಾಧಿಕಾರಿಗಳಿಗೆ ಜೆಪಿಸಿ ಇದೇ ಪ್ರಶ್ನೆ ಕೇಳಿದರೆ ಹೇಗೆ? ಅಧಿಕಾರಿಗಳು ಸರ್ಕಾರದ ಆದೇಶದಂತೆ ನೋಟಿಸ್ ಕೊಟ್ಟೆವು, ಹಿಂತೆಗೆ ಎಂದಾಗ ಹಿಂದೆ ಪಡೆಯುವೆವು. ಸರ್ಕಾರದ ಆದೇಶದಂತೆ ರೈತರ ಪಹಣಿಯಲ್ಲಿ ವಕ್ಫ್ ಸೇರಿಸಿದ್ದೇವೆ ಎಂದು ಉತ್ತರಿಸಲೇಬೇಕಾಗುತ್ತದೆ. ಇದು ಸರ್ಕಾರಕ್ಕೆ ಇನ್ನಷ್ಟು ಮುಜುಗರ ತರುವ ವಿಷಯ.