ಬಿಜೆಪಿಯವರನ್ನು ಕೇಳುತ್ತಾ ಕಾಲ ಹರಣ ಮಾಡುವ ಬದಲು ಸೂಕ್ತ ತನಿಖೆ ನಡೆಸಿ
ರಾಜ್ಯದಲ್ಲಿ ನಿಮ್ಮದೇ ಸರ್ಕಾರವಿದೆ. ಈ ವಿಚಾರವಾಗಿ ಬಿಜೆಪಿಯವರನ್ನು ಕೇಳುತ್ತಾ ಕಾಲ ಹರಣ ಮಾಡುವ ಬದಲು ಸೂಕ್ತ ತನಿಖೆ ನಡೆಸಿ, ಶೀಘ್ರದಲ್ಲಿ ಸಂತ್ರಸ್ತ ಮಹಿಳೆಯರಿಗೆ ನ್ಯಾಯ ಕೊಡಿಸಿ.
ಬೆಂಗಳೂರು: ಮಹಿಳೆಯರ ಮೇಲಿನ ದೌರ್ಜನ್ಯವನ್ನು ಖಂಡಿಸುವ ವಿಚಾರವಾಗಿ ಎಂದಿಗೂ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು ಮಹಿಳೆಯರನ್ನು ಅತ್ಯಂತ ಗೌರವದಿಂದ ಕಾಣುವ ಸಂಸ್ಕೃತಿ ನಮ್ಮದು. ಮಹಿಳೆಯರ ಮೇಲಿನ ದೌರ್ಜನ್ಯವನ್ನು ಖಂಡಿಸುವ ವಿಚಾರವಾಗಿ ಎಂದಿಗೂ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಹಾಸನದ ಪೆನ್ ಡ್ರೈವ್ ಪ್ರಕರಣದ ತನಿಖೆಗಾಗಿ ನೇಮಕವಾಗಿರುವ SIT ವರದಿ ಶೀಘ್ರದಲ್ಲಿ ಹೊರಬಂದು ತಪ್ಪಿಸತ್ಥರಿಗೆ ಕಠಿಣ ಶಿಕ್ಷೆಯಾಗಲಿ ಎಂದು ಆಗ್ರಹಿಸುತ್ತೇನೆ.
ಸ್ತ್ರೀಯರ ಮೇಲಿನ ದೌರ್ಜನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್‌ನ ಅವಕಾಶವಾದಿ ರಾಜಕಾರಣಿಗಳು ಇಂತಹ ಪ್ರಕರಣವನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಬಹುದು. ಆದರೆ, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಹಾಗೂ ಸಂತ್ರಸ್ತ ಮಹಿಳೆಯರಿಗೆ ರಕ್ಷಣೆ ಸಿಗಬೇಕು ಎನ್ನುವ ವಿಚಾರದಲ್ಲಿ ಭಾರತೀಯ ಜನತಾ ಪಾರ್ಟಿಯ ನಿಲುವು ಸ್ಪಷ್ಟವಾಗಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದ ಸ್ತ್ರೀ ಸಮುದಾಯದ ರಕ್ಷಣೆಗೆ ಕಿಂಚಿತ್ತೂ ಕಾಳಜಿ ವಹಿಸಿಲ್ಲ. ಬೆಳಗಾವಿಯಲ್ಲಿ ಮಹಿಳೆಯೊಬ್ಬರನ್ನು ಬೆತ್ತಲೆಗೊಳಿಸಿ, ಕಂಬಕ್ಕೆ ಕಟ್ಟಿಹಾಕಿ ದೌರ್ಜನ್ಯವೆಸಗಿದಾಗ ಸೌಜನ್ಯಕ್ಕೂ ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡದ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯವರು ಹುಬ್ಬಳ್ಳಿಯಲ್ಲಿ ಹತ್ಯೆಯಾದ ನೇಹಾ ಹಿರೇಮಠ ಅವರ ಕುಟುಂಬವನ್ನು ನಡೆಸಿಕೊಂಡ ರೀತಿಯನ್ನು ನಾಡಿನ ಜನತೆಯೇ ನೋಡಿದ್ದಾರೆ.
ಹಾಸನದ ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆದು, ಸಂತ್ರಸ್ತ ಮಹಿಳೆಯರಿಗೆ ನ್ಯಾಯ ಸಿಗಬೇಕು ಹಾಗೂ ಪ್ರಜ್ವಲ್ ರೇವಣ್ಣ ಸಹಿತ ಯಾರೇ ತಪ್ಪಿತಸ್ಥರಿದ್ದರೂ ಅವರಿಗೆ ಕಠಿಣ ಶಿಕ್ಷೆಯಾಗಬೇಕು.
ಡಿ. ಕೆ ಶಿವಕುಮಾರ ಅವರೇ, ರಾಜ್ಯದಲ್ಲಿ ನಿಮ್ಮದೇ ಸರ್ಕಾರವಿದೆ. ಈ ವಿಚಾರವಾಗಿ ಬಿಜೆಪಿಯವರನ್ನು ಕೇಳುತ್ತಾ ಕಾಲ ಹರಣ ಮಾಡುವ ಬದಲು ಸೂಕ್ತ ತನಿಖೆ ನಡೆಸಿ, ಶೀಘ್ರದಲ್ಲಿ ಸಂತ್ರಸ್ತ ಮಹಿಳೆಯರಿಗೆ ನ್ಯಾಯ ಕೊಡಿಸಿ. ತಮ್ಮ ರಾಜಕೀಯ ಲಾಭಕ್ಕಾಗಿ ಸಂತ್ರಸ್ತ ಮಹಿಳೆಯರ ಮಾನ ಹರಣ ಮಾಡುವ ರೀತಿಯ ವೀಡಿಯೊಗಳನ್ನು ನಿಮ್ಮದೇ ಕಾಂಗ್ರೆಸ್ ಸದಸ್ಯರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಪಟ್ಟ ಯಾವುದೇ ವೀಡಿಯೊಗಳನ್ನು ಹಂಚಿಕೊಳ್ಳುವುದನ್ನು ಕೂಡಲೇ ತಡೆಹಿಡಿಯಬೇಕು ಮತ್ತು ಆ ಮಹಿಳೆಯರ ರಕ್ಷಣೆಗೆ ಅಗತ್ಯ ಕ್ರಮ ವಹಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸುತ್ತೇನೆ ಎಂದಿದ್ದಾರೆ.