ಬಿಜೆಪಿಯವರಿಗೆ ಕೊಲೆಸ್ಟ್ರಾಲ್ ಹೆಚ್ಚಾಗಿದೆ
ಧಾರವಾಡ: ಬಿಜೆಪಿಯವರ ಕೊಲೆಸ್ಟ್ರಾಲ್ ಹೆಚ್ಚಾಗಿದೆ. ವಾಕ್ ಮಾಡಿದರೆ ಒಳ್ಳೆಯದಾಗುತ್ತದೆ. ವಾಲ್ಮೀಕಿ, ಮುಡಾ ಹಗರಣ ಹಿಡಿದುಕೊಂಡು ಅವರು ಇದನ್ನೇ ಮಾಡುತ್ತಿದ್ದಾರೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ವ್ಯಂಗ್ಯವಾಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮುಡಾ ವಿಷಯದಲ್ಲಿ ಇವರು ರಾಜ್ಯಪಾಲರಿಂದ ಪ್ರಾಸಿಕ್ಯೂಷನ್ ಕೊಡಿಸಿದ್ದಾರೆ. ಅಧಿಕಾರಿಗಳ ಮೇಲೆ ಪ್ರಾಸಿಕ್ಯೂಷನ್ ಬೇಡ್ವಾ? ಸೈಟ್ ಕೊಟ್ಟ ಅಧಿಕಾರಿಗಳ ಮೇಲೆ ಪ್ರಾಸಿಕ್ಯೂಷನ್ ಬೇಡವೇ? ಆಗ ಮುಡಾ ಅಧ್ಯಕ್ಷರಾಗಿದ್ದವರು ಯಾರು? ಬೊಮ್ಮಾಯಿ ಆಗ ಇದ್ದರು ಅವರ ಮೇಲೆ ಪ್ರಾಸಿಕ್ಯೂಷನ್ ಯಾಕಿಲ್ಲ? ಈ ವಿಷಯದಲ್ಲಿ ರಾಜ್ಯಪಾಲರು ತಮ್ಮ ಬುದ್ಧಿ ಏಕೆ ಉಪಯೋಗಿಸಲಿಲ್ಲ? ಇವರ ಅಧಿಕಾರದ ಅವಧಿಯಲ್ಲೇ ಸೈಟ್ ಕೊಟ್ಟಿದ್ದಾರೆ. ಈಗ ಇವರೇ ಪಾದಯಾತ್ರೆ ಮಾಡುತ್ತಿದ್ದಾರೆ. 14 ಸೈಟ್ ಏಕೆ, 125 ಸೈಟ್ ಬಗ್ಗೆಯೂ ತನಿಖೆಯಾಗಲಿ ಎಂದರು.
ಸಚಿವ ಸತೀಶ ಜಾರಕಿಹೊಳಿ ಮತ್ತು ಲಾಡ್ ಭೇಟಿ ವಿಚಾರವಾಗಿ ಪ್ರತಿಕ್ರಿಯೆ ನೀಡುತ್ತ, ಜಾರಕಿಹೊಳಿ ಅವರು ಹಾಗೂ ನಾನು ಭೇಟಿಯಾಗಿ ಕೇವಲ ಕಾಫಿ ಕುಡಿದಿದ್ದೇವೆ. ಹೈಕೋರ್ಟ್ ಕಾರ್ಯಕ್ರಮಕ್ಕೆ ಜಾರಕಿಹೊಳಿ ಅವರು ಬಂದಿದ್ದರು. ಅಲ್ಲಿಂದ ವಿಮಾನ ನಿಲ್ದಾಣಕ್ಕೆ ಅವರು ಹೊರಟಿದ್ದರು. ಈ ವೇಳೆ ಧಾರವಾಡದಲ್ಲಿ ಭೇಟಿಯಾಗಿ ಕಾಫಿ ಕುಡಿದಿದ್ದೇವೆ. ರಾಜಕೀಯ ಏನಾದರೂ ಇದ್ದರೆ ಬಹಿರಂಗವಾಗಿಯೇ ನಾನು ಮಾತನಾಡುತ್ತೇನೆ ಎಂದರು.
ನಮ್ಮ ಅವರ ಭೇಟಿಯಲ್ಲಿ ಯಾವುದೇ ತರಹದ ಚರ್ಚೆ ಆಗಿಲ್ಲ. ಸಹಜವಾಗಿ ನಾವು ಮಾತನಾಡಿದ್ದೇವೆ. ಖಾನಾಪುರದ ಬಿಜೆಪಿ ಶಾಸಕರು ಸತೀಶ ಜಾರಕಿಹೊಳಿ ಸಿಎಂ ಆಗಲಿ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಕಾಕತಾಳೀಯ ಎಂಬಂತೆ ನಾವು ಭೇಟಿಯಾಗಿದ್ದೇವೆ. ಕಾಗೆ ಕುಳಿತುಕೊಳ್ಳುವುದಕ್ಕೂ ಟೊಂಗೆ ಮುರಿಯುವುದಕ್ಕೂ ಇದು ಸಾಟಿಯಾದಂತಾಗಿದೆ ಎಂದರು.