ಬಿಜೆಪಿಯವರು ಡಿಎನ್ಎ ಟೆಸ್ಟ್ ಮಾಡಿಕೊಳ್ಳಲಿ
ಸಮಾಜಕ್ಕೆ ದಾರಿದೀಪ ಆಗಬೇಕಾದ ಸ್ವಾಮಿಗಳು ಬೆಂಕಿ ಹಚ್ಚಿಕೊಂಡು ಹೋಗ್ತಾಯಿದ್ರೆ ಸುಮ್ಮನಿರಬೇಕಾ? ಇಂಥದ್ದಕ್ಕೂ ಸಮರ್ಥನೆ ಮಾಡಿಕೊಳ್ಳಲು ಬಿಜೆಪಿಯವರಿಗೆ ನಾಚಿಕೆ ಬರ್ತಿಲ್ಲವಾ?
ಕಲಬುರಗಿ : ಬಿಜೆಪಿಯವರಿಗೆ ಅವರ ಇತಿಹಾಸವೇ ಗೊತ್ತಿಲ್ಲ ಇನ್ನು ರಜಾಕಾರರ ಇತಿಹಾಸ ಹೇಳ್ತಾರಾ? ಬಿಜೆಪಿಯಲ್ಲಿ ಹುಚ್ಚರ ಜಾತ್ರೆಯೇ ನಡೆಯುತ್ತಿದೆ. ಅವರೇ ಒಬ್ಬರಿಗೊಬ್ಬರು ನಿತ್ಯವೂ ಬೈದಾಡಿಕೊಳ್ಳುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.
ಕಲಬುರಗಿಯಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಖರ್ಗೆ ಕುಟುಂಬದ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ನೀಡಿದ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದರು. ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಇವರು ರಜಾಕಾರರ ಇತಿಹಾಸ ಹೇಳ್ತಾರೆ. ನಾನು ಇದೇ ಕಾರಣಕ್ಕೆ ಹೇಳಿದ್ದೆ ಬಿಜೆಪಿಯವರಿಗೆ ಫ್ರೀ ಡಿಎನ್ಎ ಟೆಸ್ಟ್ ಮಾಡಸ್ತಿನಿ ಬನ್ನಿ ಅಂತ, ಯಾರು ಎಲ್ಲಿಂದ ಬಂದವರು ಅನ್ನೋದು ಡಿಎನ್ಎ ಟೆಸ್ಟ್ ಮೂಲಕ ಬಹಿರಂಗವಾಗಲಿ ಎಂದರು.
ಸಂಸದ ತೇಜಸ್ವಿ ಸೂರ್ಯ ಶಾಸಕ ರವಿ ಅಣ್ಣನ ಮಗ. ಆದ್ರೆ ಹೇಳಿಕೊಳ್ಳಲು ನಾಚಿಕೆ ಏಕೆ ಇವರಿಗೆ. ಬೇರೊಬ್ಬರ ವಂಶವಾಹಿನಿ ಬಗ್ಗೆ ಮಾತಾಡುವ ಇವರು ಮೊದಲು ತಮ್ಮ ಡಿಎನ್ಎ ಟೆಸ್ಟ್ ಮಾಡಿಸಿಕೊಳ್ಳಲಿ ಎಂದು ಕಿಡಿಕಾರಿದರು.
ಬಿಜೆಪಿಯಲ್ಲಿಯೇ ಹೊಂದಾಣಿಕೆ ಇಲ್ಲ, ಯತ್ನಾಳ ವಿರುದ್ಧ ವಿಜಯೇಂದ್ರ, ವಿಜಯೇಂದ್ರ ವಿರುದ್ದ ಯತ್ನಾಳ, ರವಿಕುಮಾರ, ಸದಾನಂದಗೌಡ, ಅಶೋಕ, ಮುನಿರತ್ನ ಒಬ್ಬರಿಗೊಬ್ಬರು ಬೈದಾಡಿಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಇನ್ನು ಒಕ್ಕಲಿಗ ಸಮುದಾಯದ ಸ್ವಾಮೀಜಿ ಕುಮಾರ ಚಂದ್ರಶೇಖರ ಸ್ವಾಮಿ ವಿರುದ್ಧ ದೂರು ದಾಖಲಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರಿಗೆ ಸಂವಿಧಾನ, ಕಾನೂನಿನಲ್ಲಿ ನಂಬಿಕೆ ಇಲ್ಲ. ಅವರ ಹೇಳಿಕೆ ಕಾನೂನು ಪ್ರಕಾರ ಇದೆಯಾ ಇಲ್ಲವಾ? ಅನ್ನೋದನ್ನು ತಿಳಿದುಕೊಳ್ಳಲಿ. ಈ ಹಿಂದೆ ಯಾರು ಕಾನೂನು ಉಲ್ಲಂಘನೆ ಮಾಡಿದ್ರು ಆ ಸ್ವಾಮಿಗಳು ಪೋಕ್ಸೋ ಕೇಸ್ ನಲ್ಲಿ ಜೈಲು ಅನುಭವಿಸಿಲ್ವಾ.? ಮಿಸ್ಟರ್ ಅಶೋಕ ಪ್ರಕಾರ ಸ್ವಾಮೀಜಿಗಳು ಕಾನೂನು ಬಾಹಿರವಾಗಿ ಹೇಳಿಕೆ ಕೊಟ್ಟರೂ ಏನು ಮಾಡಬಾರದಾ? ನೀವು ಏನೇ ತಪ್ಪು ಮಾಡಿದ್ರೂ ಜೈಶ್ರೀರಾಮ್ ಅಂದ ತಕ್ಷಣ ನಿಮ್ಮ ತಪ್ಪು ಸರಿಯಾಗಿ ಹೋಗುತ್ತಾ? ಹಂಗಾದ್ರೆ ಇವರ ಹೇಳಿಕೆ ಸರಿನಾ.? ಪೇಜಾವರ ಶ್ರೀ ಹೇಳಿಕೆ ಬಗ್ಗೆ ಬಿಜೆಪಿ ಮೌನವಾಗಿದೆ ಅಂದ್ರೆ ಮನುಸ್ಮೃತಿ ಸಮರ್ಥನೆ ಅಂತಾನೆ ಅರ್ಥ. ಕುಮಾರಸ್ವಾಮಿ ಅಧಿಕಾರ ಹಸ್ತಾಂತರ ಮಾಡಿಲ್ಲ ಅಂತ ಹೇಳಿ ಯಡಿಯೂರಪ್ಪ ಕಣ್ಣೀರು ಸುರಿಸಿ ಓಟ್ ಕೇಳಿದ್ದು ಬಸವಣ್ಣನವರ ಹೆಸರಲ್ಲಿಯೇ ಅಲ್ವಾ? ಸಮಾಜಕ್ಕೆ ದಾರಿದೀಪ ಆಗಬೇಕಾದ ಸ್ವಾಮಿಗಳು ಬೆಂಕಿ ಹಚ್ಚಿಕೊಂಡು ಹೋಗ್ತಾಯಿದ್ರೆ ಸುಮ್ಮನಿರಬೇಕಾ? ಇಂಥದ್ದಕ್ಕೂ ಸಮರ್ಥನೆ ಮಾಡಿಕೊಳ್ಳಲು ಬಿಜೆಪಿಯವರಿಗೆ ನಾಚಿಕೆ ಬರ್ತಿಲ್ಲವಾ?. ಅಶೋಕ ಅವರೇ ಇಂತವರ ಪರ ನೀವು ಒಬ್ಬರು ಬೀದಿಗಿಳಿದ್ರೆ, ಲಕ್ಷಾಂತರ ಜನ ಸಂವಿಧಾನ ರಕ್ಷಣೆಗೆ ಬೀದಿಗಿಳಿತಾರೆ ಎಂದು ಎಚ್ಚರಿಸಿದರು.