ಬಿಜೆಪಿಯೊಂದಿಗೆ ಮೈತ್ರಿ: 6ರಿಂದ 8ಲೋಕಸಭಾ ಸ್ಥಾನ ಜೆಡಿಎಸ್‌ಗೆ
ಹುಬ್ಬಳ್ಳಿ : ದೇಶದ ಅಭಿವೃದ್ಧಿ, ಸುಭದ್ರ ಆಡಳಿತದ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗಬೇಕು ಎಂಬ ಉದ್ದೇಶದಿಂದ ಜೆಡಿಎಸ್ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಪಕ್ಷದ ತತ್ವ, ಸಿದ್ಧಾಂತದ ವಿಚಾರದಲ್ಲಿ ರಾಜೀ ಇಲ್ಲ ಎಂದು ಜೆಡಿಎಸ್ ರಾಜ್ಯ ಘಟಕದ ಕೋರ ಕಮೀಟಿ ಅಧ್ಯಕ್ಷ, ಶಾಸಕ ಜಿ.ಟಿ ದೇವೇಗೌಡ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಎಲ್ಲ 28 ಕ್ಷೇತ್ರಗಳನ್ನು ಬಿಜೆಪಿ ಜೊತೆ ಸೇರಿ ಗೆಲ್ಲುವ ಗುರಿ ಹೊಂದಿದ್ದೇವೆ ಎಂದರು.
ಹಾಸನ, ತುಮಕೂರು, ಮಂಡ್ಯ, ಚಿಕ್ಕಬಳ್ಳಾಪುರ, ಮೈಸೂರು, ಬೆಂಗಳೂರು ಉತ್ತರ ಮತ್ತು ದಕ್ಷಿಣ ಕ್ಷೇತ್ರದಲ್ಲಿ ಪಕ್ಷ ಬಲಿಷ್ಠವಾಗಿದೆ. ಜೆಡಿಎಸ್ ಗೆ ಈ ಕ್ಷೇತ್ರಗಳನ್ನು ಪಡೆದುಕೊಳ್ಳಬೇಕು ಎಂದು ಪಕ್ಷದ ರಾಷ್ಟ್ರೀಯ ನಾಯಕರಾದ ಎಚ್.ಡಿ ದೇವೇಗೌಡ, ಪಕ್ಷದ ನಾಯಕ ಎಚ್.ಡಿ ಕುಮಾರಸ್ವಾಮಿ ಅವರಿಗೆ ತಿಳಿಸಿದ್ದೇವೆ ಎಂದು ಹೇಳಿದರು.
ಪಕ್ಷ, ಸಿದ್ಧಾಂತದಲ್ಲಿ ರಾಜೀ ಇಲ್ಲ ಜೆಡಿಎಸ್ ಜಯಪ್ರಕಾಶ ನಾರಾಯಣ ಅವರ ತತ್ವ ಸಿದ್ಧಾಂತ ಬಿಟ್ಟು ಕೊಡುವುದಿಲ್ಲ. ತತ್ವ, ಸಿದ್ಧಾಂತದ ವಿಷಯದಲ್ಲಿ ರಾಜೀ ಇಲ್ಲ. ಬಿಜೆಪಿಯವರ ಸಿದ್ಧಾಂತ ಬಿಜೆಪಿಯವರಿಗೆ. ನಮ್ಮ ಸಿದ್ಧಾಂತ ನಮಗೆ ಎಂದರು.
ಲೋಕಸಭಾ ಚುನಾವಣೆಗೆ ಮಾತ್ರ ಅಲ್ಲ: ಮುಂದಿನ ವಿಧಾನ ಸಭಾ ಚುನಾವಣೆಯಲ್ಲೂ ಬಿಜೆಪಿ, ಜೆಡಿಎಸ್ ಮೈತ್ರಿ ಇರುತ್ತದೆ. ಇದಕ್ಕಾಗಿ ರಾಜ್ಯವ್ಯಾಪಿ ಜಿಲ್ಲಾ ಮಟ್ಟ, ತಾಲೂಕು ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡುತ್ತಿದ್ದೇವೆ. ಸಮಿತಿಗಳ ಮರು ರಚನೆ ಮಾಡಲಾಗುತ್ತಿದೆ. ಇಡೀ ರಾಜ್ಯಾದ್ಯಂತ ಬಿಜೆಪಿ ಜೊತೆ ಜೆಡಿಎಸ್ ನ ಭಿನ್ನಾಭಿಪ್ರಾಯವಿಲ್ಲ ಎಂದು ಸ್ಪಷ್ಟಪಡಿಸಿದರು.