ಬಿಜೆಪಿಯ ಎಲ್ಲ ಸ್ಥಾನ ಮಾರಾಟಕ್ಕಿವೆ
ಕೊಪ್ಪಳ: ಬಿಜೆಪಿಯ ಎಲ್ಲ ಸ್ಥಾನ ಮಾರಾಟಕ್ಕಿದ್ದು, ಈ ಪೈಕಿ ರಾಜ್ಯದ ವಿಧಾನಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನವು ಇನ್ನೂ ಟೆಂಡರ್ ಆಗಿಲ್ಲ. ಹಾಗಾಗಿ ಈ ಸ್ಥಾನ ಖಾಲಿ ಇದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಲೇವಡಿ ಮಾಡಿದರು.
ನಗರದ ಜಿಲ್ಲಾ ಕ್ರೀಡಾಂಗಣದ ಕಚೇರಿ ಸಭಾಂಗಣದಲ್ಲಿ ಭಾನುವಾರ ಕಲ್ಯಾಣ ಕರ್ನಾಟಕ ಉತ್ಸವದ ಧ್ವಜಾರೋಹಣದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಮುಖ್ಯಮಂತ್ರಿ ಸ್ಥಾನಕ್ಕೆ ೨,೫೦೦ ಕೋಟಿ ರೂ. ಮಂತ್ರಿ ಸ್ಥಾನಕ್ಕೆ ೭೦-೮೦ ಕೋಟಿ ರೂ. ಮತ್ತು ವಿಧಾನಸಭಾ ಟಿಕೆಟಿಗೆ ೭-೮ ಕೋಟಿ ರೂ. ಬಿಜೆಪಿ ಪಕ್ಷವು ಹಣ ನಿಗದಿ ಮಾಡಿದ್ದಾರೆ. ವಿರೋಧ ಪಕ್ಷದ ನಾಯಕರ ಹುದ್ದೆಗೆ ಟೆಂಡರ್ ಆಗಿಲ್ಲ. ಟೆಂಡರ್ ಮೂಲಕ ಆಯ್ಕೆ ಮಾಡಬಹುದು. ಟೆಂಡರ್ ಕರೆದಿದ್ದಾರೆ. ಆದರೆ, ಇದರಲ್ಲಿ ಯಾರೂ ಭಾಗವಹಿಸಿಲ್ಲ ಅನಿಸುತ್ತದೆ. ಈ ಟೆಂಡರಿನಲ್ಲಿ ಜೆಡಿಎಸ್‌ನವರು ಭಾಗವಹಿಸಬಹುದು. ಟೆಂಡರನ್ನು ಪತ್ರಿಕೆ, ದೂರದರ್ಶನ ಮತ್ತು ಗ್ಲೋಬಲ್ ಈ ಮೂರಲ್ಲಿ ಯಾವುದರ ಮೂಲಕ ಕರೆಯುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ ಎಂದರು.
ಸಹೋದರಿ ಚೈತ್ರಾ ಕುಂದಾಪುರ ಬಂಧನವಾದ ಮೇಲೆ ಇದು ನಿಜವಾಗಿದೆ. ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಿಎಂ, ಮಂತ್ರಿ ಸ್ಥಾನಕ್ಕೆ ಹಣ ನೀಡಬೇಕು ಎನ್ನುತ್ತಿದ್ದರು. ಅವರು ಹೇಳಿರುವುದು ಕೂಡಾ ಸತ್ಯ ಎನಿಸುತ್ತಿದೆ. ಮುಂಬರುವ ಲೋಕಸಭಾ ಚುನಾವಣೆಯ ಟಿಕೆಟ್‌ಗಳು ಮಾರಾಟಕ್ಕಿವೆ ಎಂದು ಟೀಕಿಸಿದರು.
ಚೈತ್ರಾ ಕುಂದಾಪುರ ವಂಚನೆ ಪ್ರಕರಣವನ್ನು ಸಿಸಿಬಿಗೆ ವಹಿಸಿದರೆ, ಎಲ್ಲವೂ ಬಹಿರಂಗಗೊಳ್ಳುತ್ತದೆ. ಚೈತ್ರಾ ಕುಂದಾಪುರ ಚಕ್ರವರ್ತಿ ಸೂಲಿಬೆಲೆಯವರ ಸಹೋದರಿಯಾಗಿದ್ದಾರೆ. ಅವರ ಹೆಸರು ಬರಬಹುದು ಎಂದರು.