ಬಿಜೆಪಿ ಕಚೇರಿಗೆ ನುಗ್ಗುವುದೆಂದರೆ ಸುಲಭವಲ್ಲ
ಮಂಗಳೂರು: ವಿಧಾನಸೌಧದಲ್ಲಿ ಪಾಕಿಸ್ತಾನಕ್ಕೆ ಜೈ ಎಂದಿದ್ದವರು ನೀವು. ನಿಮ್ಮಂತಹವರ ಗೊಡ್ಡು ಬೆದರಿಕೆಗಳಿಗೆಲ್ಲ ಭಾರತ್ ಮಾತಾ ಕಿ ಜೈ ಎನ್ನುವ ದೇಶಭಕ್ತ ಬಿಜೆಪಿ ಪಡೆ ಹೆದರುವ ಪ್ರಶ್ನೆಯೇ ಇಲ್ಲ, ತಾಕತ್ತಿದ್ದರೆ ಬನ್ನಿ ಎಂದು ಶಾಸಕ ವೇದವ್ಯಾಸ ಕಾಮತ್ ರವರು ಕಾಂಗ್ರೆಸ್ಸಿಗೆ ಸವಾಲು ಹಾಕಿದರು.
ನಗರದ ಐವನ್ ಡಿಸೋಜರವರ ಮನೆಯಿಂದ ಜಿಲ್ಲಾ ಬಿಜೆಪಿ ಕಚೇರಿವರೆಗೆ ಪಾದಯಾತ್ರೆ ನಡೆಸುವುದಾಗಿ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಘೋಷಿಸಿದ್ದರಿಂದ ಶುಕ್ರವಾರ ಬೆಳಿಗ್ಗೆಯೇ ಪಿವಿಎಸ್ ಕಚೇರಿ ಬಳಿ ಬಿಜೆಪಿ ಶಾಸಕರುಗಳು, ಪ್ರಮುಖರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.
ಈ ವೇಳೆ ಮಾತನಾಡಿದ ಶಾಸಕ ಕಾಮತ್, ಇದು ಬಿಜೆಪಿ ಭದ್ರಕೋಟೆ. ಇಲ್ಲಿ ಕಾಂಗ್ರೆಸ್ಸಿನ ಪುಂಡರ ಬೆದರಿಕೆಗೆ ಜಗ್ಗುವವರು ಯಾರೂ ಇಲ್ಲ. ಇವರು ಬಿಜೆಪಿ ಕಚೇರಿಗೆ ನುಗ್ಗುವುದೆಂದರೆ, ಸಾರ್ವಜನಿಕರ ಬಸ್ಸಿಗೆ ಕಲ್ಲು ಹೊಡೆದಷ್ಟು, ನಿರ್ಜೀವ ಟಯರಿಗೆ ಬೆಂಕಿ ಹಚ್ಚಿದಷ್ಟು ಸುಲಭವಲ್ಲ. ಬೇಕಿದ್ದರೆ ಒಮ್ಮೆ ಬಂದು ಪ್ರಯತ್ನಿಸಿ ನೋಡಲಿ, ವಿಶೇಷ ಚಪ್ಪಲಿಯ ಹಾರಗಳು ಅವರಿಗಾಗಿ ಸಿದ್ಧವಾಗಿವೆ ಎಂದು ಎಚ್ಚರಿಕೆ ನೀಡಿದರು.
ಮಹಿಳಾ ಮೋರ್ಚಾವೂ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಮಧ್ಯಾಹ್ನದವರೆಗೂ ಕಾದರೂ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಕಚೇರಿ ಕಡೆ ಸುಳಿಯದೇ, ಕಂಕನಾಡಿವರೆಗೆ ಮಾತ್ರ ಪಾದಯಾತ್ರೆ ನಡೆಸಿದರು.