For the best experience, open
https://m.samyuktakarnataka.in
on your mobile browser.

ಬಿಜೆಪಿ ಚುನಾವಣಾ ಪ್ರಚಾರಕ್ಕೆ ಐಷಾರಾಮಿ ವಾಹನ ರೆಡಿ

10:34 PM Apr 01, 2024 IST | Samyukta Karnataka
ಬಿಜೆಪಿ ಚುನಾವಣಾ ಪ್ರಚಾರಕ್ಕೆ ಐಷಾರಾಮಿ ವಾಹನ ರೆಡಿ

ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ೨೮ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲು ಬಿಜೆಪಿ ಐದು ಐಷಾರಾಮಿ ವಾಹನಗಳನ್ನು ಸಿದ್ಧಪಡಿಸಿದ್ದು, ಸೋಮವಾರ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದ ಎದುರು ಚಾಲನೆ ನೀಡಲಾಯಿತು.
ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದಲ್ಲಿ ಪಾಲ್ಗೊಳ್ಳುವ ಚುನಾವಣಾ ಪ್ರಚಾರ ಸಭೆಗಳಲ್ಲಿ ಬಳಸುವ ಬುಲೆಟ್‌ಪ್ರೂಫ್ ವಾಹನ ಮಾತ್ರವಲ್ಲದೇ ಸ್ಟಾರ್ ಪ್ರಚಾರಕರು ರಾಜ್ಯದೆಲ್ಲೆಡೆ ಬಳಸುವ ಐಷಾರಾಮಿ ಬಸ್‌ಗಳನ್ನೂ ಉದ್ಘಾಟಿಸಲಾಯಿತು. ವಿಧಾನಪರಿಷತ್ ಸದಸ್ಯ ಕೇಶವಪ್ರಸಾದ್, ಶಾಸಕ ಎಸ್. ಮುನಿರಾಜು, ಉತ್ತರ ಜಿಲ್ಲಾ ಅಧ್ಯಕ್ಷ ಹರೀಶ್, ಕೇಂದ್ರ ಜಿಲ್ಲಾ ಅಧ್ಯಕ್ಷ ಸಪ್ತಗಿರಿಗೌಡ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.
ಐಷಾರಾಮಿ ಬಸ್ ವಿಶೇಷ ಏನು: ರಾಜ್ಯಾದ್ಯಂತ ಬಿಜೆಪಿ ಪ್ರಚಾರಕ್ಕೆ ಬಳಸಲಿರುವ ಐಷಾರಾಮಿ ಬಸ್ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಬಸ್‌ನಲ್ಲಿ ವೇದಿಕೆ ರೂಪಿಸಲಾಗಿದ್ದು, ೩ರಿಂದ ೫ ನಾಯಕರು ಅದರಲ್ಲಿರುವ ರ‍್ಯಾಂಪ್ ಮೇಲೆ ನಿಂತು ಪ್ರಚಾರ ಭಾಷಣ ಮಾಡಬಹುದಾಗಿದ್ದು, ಅದಕ್ಕಾಗಿ ಮೈಕ್, ಸೌಂಡ್‌ಬಾಕ್ಸ್, ವಿದ್ಯುತ್‌ದೀಪ, ಎಲ್‌ಇಡಿ ಸ್ಕ್ರೀನ್ ಒಳಗೊಂಡಿದೆ. ಹೀಗಾಗಿ ಪ್ರಚಾರ ಸಭೆಗೆ ಪ್ರತ್ಯೇಕ ವೇದಿಕೆ ರೂಪಿಸುವ ಬದಲು ಸರಿಸುಮಾರು ೩ ಸಾವಿರದಿಂದ ೫ ಸಾವಿರ ಜನರು ಭಾಗವಹಿಸುವ ಬಹಿರಂಗ ಸಭೆಯನ್ನು ಬಸ್ಸನ್ನೇ ವೇದಿಕೆಯಾಗಿ ಮಾರ್ಪಡಿಸಬಹುದು..
ಬಸ್ ಮತ್ತೊಂದು ಭಾಗದಲ್ಲಿ ೫ರಿಂದ ೮ ನಾಯಕರು ತುರ್ತುಸಭೆ ನಡೆಸಲು ಹಾಲ್, ರೆಫ್ರಿಜರೇಟರ್, ಎ.ಸಿ., ವಿಶ್ರಾಂತಿಗಾಗಿ ಬೆಡ್ ಹೀಗೆ ಕಾರವಾನ್‌ನಲ್ಲಿರುವ ಎಲ್ಲ ವ್ಯವಸ್ಥೆಯನ್ನೂ ಒಳಗೊಂಡಿದೆ. ೩ರಿಂದ ೪ ಲೋಕಸಭಾ ಕ್ಷೇತ್ರಗಳಲ್ಲಿ ಇಂತಹ ಬಸ್‌ಗಳು ಸಂಚರಿಸಲಿದ್ದು, ಮುಂದಿನ ೪೫ ದಿನಗಳ ಕಾಲ ಈ ವಾಹನಗಳು ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಿವೆ.
ಬುಲೆಟ್ ಪ್ರೂಫ್ ಕಾರ್: ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯದಲ್ಲಿ ಪಾಲ್ಗೊಳ್ಳುವ ರೋಡ್ ಶೋಗಳಿಗೆ ಬುಲೆಟ್ ಪ್ರೂಫ್ ಕಾರ್ ಬಳಕೆ ಆಗಲಿದೆ. ವಿಶೇಷವಾಗಿ ಮೋದಿ ಅವರು ನಡೆಸುವ ರೋಡ್ ಶೋಗಳು ದೀರ್ಘಕಾಲ ಹಾಗೂ ಅಪಾರ ಜನರ ನಡುವೆ ನಡೆಯುವುದರಿಂದ ಅದಕ್ಕೆ ಬೇಕಾದ ಸೌಕರ್ಯಗಳನ್ನು ಹಾಗೂ ಸುರಕ್ಷತಾ ಕ್ರಮಗಳನ್ನು ಈ ಕಾರ್‌ನಲ್ಲಿ ಅಳವಡಿಸಲಾಗಿದೆ.