For the best experience, open
https://m.samyuktakarnataka.in
on your mobile browser.

ಬಿಜೆಪಿ-ಜೆಡಿಎಸ್‌ನ ಪಿತೂರಿಗೆ ನಾನು ಹೆದರುವ ಪ್ರಶ್ನೆಯೇ ಇಲ್ಲ

04:43 PM Sep 24, 2024 IST | Samyukta Karnataka
ಬಿಜೆಪಿ ಜೆಡಿಎಸ್‌ನ ಪಿತೂರಿಗೆ ನಾನು ಹೆದರುವ ಪ್ರಶ್ನೆಯೇ ಇಲ್ಲ

ಬೆಂಗಳೂರು: ಕಾಂಗ್ರೆಸ್ ಸರ್ಕಾರವನ್ನು ಅಭದ್ರಗೊಳಿಸಿ ಹಾಗೂ ನನಗೆ ಕಪ್ಪು ಮಸಿ ಬಳಿಯಲು ಬಿಜೆಪಿ ಜೆಡಿಎಸ್ ನಡೆಸುತ್ತಿರುವ ಪ್ರಯತ್ನಕ್ಕೆ ಸೋಲು ಖಚಿತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಉಚ್ಛ ನ್ಯಾಯಾಲಯದ ಆದೇಶ ಹೊರಬಂದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಿಎನ್‌ಎಸ್ಎಸ್ ಪ್ರಕಾರ 218 ಹಾಗೂ ಪಿಸಿ ಕಾಯ್ದೆ 19ರಂತೆ ತನಿಖೆಗೆ ಅನುಮತಿ ನೀಡುವುದನ್ನು ತಿರಸ್ಕರಿಸಿ, ಪಿಸಿ ಕಾಯ್ದೆಯ 17ಎ ಪ್ರಕಾರ ತನಿಖೆಗೆ ಉಚ್ಛನ್ಯಾಯಾಲಯ ಆದೇಶ ನೀಡಿದೆ. ಈ ತೀರ್ಪಿನ ಮೇಲೆ ಕಾನೂನು ಹೋರಾಟದ ಬಗ್ಗೆ ಕಾನೂನು ತಜ್ಞರೊಂದಿಗೆ ಚರ್ಚೆ ಮಾಡಿ, ಮುಂದಿನ ಕ್ರಮದ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದರು.

ಬಿಜೆಪಿ ಜೆಡಿಎಸ್‌ನ ಪಿತೂರಿಗೆ ಹೆದರುವುದಿಲ್ಲ
ಬಿಜೆಪಿ ಜೆಡಿಎಸ್‌ನ ಪಿತೂರಿಗೆ ನಾನು ಎಂದೂ ಹೆದರುವುದಿಲ್ಲ. ಬಿಜೆಪಿ ಜೆಡಿಎಸ್ ಸಂಚು, ರಾಜಭವನ ದುರುಪಯೋಗ ಹಾಗೂ ದುರ್ಬಳಕೆಗೆ ನಾನು ಹೆದರುವುದಿಲ್ಲ. ರಾಜ್ಯದ ಜನ, ಪಕ್ಷದ ಹೈಕಮಾಂಡ್, ಶಾಸಕರು, ಸಚಿವರು, ಕಾರ್ಯಕರ್ತರು ನನ್ನೊಂದಿಗಿದ್ದಾರೆ. ಕಾನೂನು ಹೋರಾಟಕ್ಕೆ ಹೈಕಮಾಂಡ್ ಸಹಕಾರ ನೀಡಲಿದೆ. ನರೆಂದ್ರ ಮೋದಿಯವರ ಬಿಜೆಪಿ ಸರ್ಕಾರ, ಕೇವಲ ನನ್ನ ಮೇಲಷ್ಟೇ ಅಲ್ಲ, ಇಡೀ ದೇಶದ ವಿರೋಧ ಪಕ್ಷಗಳ ವಿರುದ್ಧ ಮೇಲೆ ಸೇಡಿನ ರಾಜಕೀಯ ಮಾಡುತ್ತಿದ್ದಾರೆ ಎಂದರು.

ಆಪರೇಷನ್ ಕಮಲದ ಪ್ರಯತ್ನ ವಿಫಲ
ಬಿಜೆಪಿ ಹಾಗೂ ಜೆಡಿಎಸ್‌ನವರು ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬಂದಿಲ್ಲ. ವಿಧಾನಸಭೆ ಚುನಾವಣೆಯಲ್ಲಿಯೂ ಸೋತಿದ್ದಾರೆ. ಅವರು ಹಣಬಲದಿಂದ, ಆಪರೇಷನ್ ಕಮಲ ಮಾಡಿ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದರೇ ಹೊರತು, ಜನರ ಆಶೀರ್ವಾದದೊಂದಿಗೆ ಎಂದಿಗೂ ಬಿಜೆಪಿ-ಜೆಡಿಎಸ್ ಅಧಿಕಾರಕ್ಕೆ ಬಂದಿಲ್ಲ. ವಿಧಾನಸಭಾ ಚುನಾವಣೆಯಲ್ಲಿ 136 ಸ್ಥಾನ ಗೆದ್ದಿರುವ ಕಾಂಗ್ರೆಸ್ ಪಕ್ಷ ಬಂದಿದ್ದರಿಂದ ಆಪರೇಷನ್ ಕಮಲ ಮಾಡಲು ಅವರಿಗೆ ಸಾಧ್ಯವಾಗಲಿಲ್ಲ. ದುಡ್ಡನ್ನು ಕೊಟ್ಟು ಶಾಸಕರನ್ನು ಖರೀದಿಸುವ ಪ್ರಯತ್ನ ಮಾಡಿದರು. ನಮ್ಮ ಯಾವ ಶಾಸಕರೂ ದುಡ್ಡಿನ ಹಿಂದೆ ಹೋಗದ ಕಾರಣ, ಅವರ ಪ್ರಯತ್ನ ವಿಫಲವಾಯಿತು ಎಂದರು.

ಬಿಜೆಪಿಯವರು ಸಾಮಾಜಿಕ ನ್ಯಾಯ, ಬಡವರ ವಿರೋಧಿಗಳು
ಕಾಂಗ್ರೆಸ್ ಸರ್ಕಾರದ ಬಡವರ ಪರ ಕಾರ್ಯಕ್ರಮಗಳನ್ನು ಬಿಜೆಪಿ ವಿರೋಧಿಸುತ್ತಾ ಬಂದಿದ್ದಾರೆ. ಶೂಭಾಗ್ಯ, ಪಶುಭಾಗ್ಯ, ಶಾದಿಭಾಗ್ಯ, ಕ್ಷೀರಭಾಗ್ಯ ಸೇರಿದಂತೆ ಹಲವು ಜನಪರ ಯೋಜನೆಗಳು ಹಾಗೂ ಈಗಿನ ಗ್ಯಾರಂಟಿ ಯೋಜನೆಗಳನ್ನು ಸಹ ವಿರೋಧಿಸುತ್ತಿದ್ದಾರೆ. ಬಿಜೆಪಿಯವರು ಸಾಮಾಜಿಕ ನ್ಯಾಯ, ಬಡವರ ವಿರೋಧಿಗಳು. ಸರ್ಕಾರಕ್ಕೆ ಕಪ್ಪು ಮಸಿ ಬಳಿಯುವುದು ಅವರ ದುರಾಲೋಚನೆ. ಹೈಕೋರ್ಟ್ ಆದೇಶದ ಪ್ರತಿಯನ್ನು ಸಂಪೂರ್ಣ ಪರಿಶೀಲಿಸಿ, ಮುಂದಿನ ಪ್ರತಿಕ್ರಿಯೆಯನ್ನು ನೀಡುವುದಾಗಿ ತಿಳಿಸಿದ ಮುಖ್ಯಮಂತ್ರಿಗಳು, ಇಡೀ ದೇಶದಲ್ಲಿ ಪಿತೂರಿ ಮಾಡಿದಂತೆ ಕರ್ನಾಟಕದಲ್ಲಿಯೂ ನನ್ನ ಹಾಗೂ ಸರ್ಕಾರದ ವಿರುದ್ಧ ಪಿತೂರಿ ಮಾಡಲಾಗಿದೆ ಎಂದರು.

ಕಾನೂನಾತ್ಮಕ ಹೋರಾಟ:
ಆದೇಶ ತೃಪ್ತಿ ತಂದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಇದೊಂದು ಕಾನೂನಾತ್ಮಕ ಹೋರಾಟ. ಈ ಬಗ್ಗೆ ಕಾನೂನು ತಜ್ಞರೊಂದಿಗೆ ಚರ್ಚೆ ಮಾಡಿ ಪ್ರತಿಕ್ರಿಯೆ ನೀಡುವುದಾಗಿ ಹೇಳಿದರು.

ತಪ್ಪು ಮಾಡಿಲ್ಲ
ನನ್ನ ಪ್ರಕಾರ ನಾನು ತಪ್ಪು ಮಾಡಿಲ್ಲ. 17ಎ ಅಡಿ ತನಿಖೆ ಮಾಡಲು ಆದೇಶ ನೀಡಿದ ಮಾತ್ರಕ್ಕೆ ನಾನು ತಪ್ಪು ಮಾಡಿದ್ದೇನೆ ಎಂದಲ್ಲ. ಬಿಎನ್ಎಸ್ಎಸ್ ಕಾಯ್ದೆಯಡಿ 218 ಆದೇಶ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಸಚಿವ ಕುಮಾರಸ್ವಾಮಿಯವರಿಗೆ ಅನ್ವಯವಾಗುವುದಿಲವೇ
ಬಿಜೆಪಿಯವರು ಮುಖ್ಯಮಂತ್ರಿಗಳು ರಾಜೀನಾಮೆ ಕೊಡಲು ಒತ್ತಾಯಿಸಿ ಪ್ರತಿಭಟನೆ ಮಾಡುತ್ತಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ ಅವರನ್ನು ನಾವು ಎದುರಿಸುತ್ತೇವೆ. ರಾಜಿನಾಮೆ ಏಕೆ ಕೊಡಬೇಕು ಎಂದು ಪ್ರಶ್ನಿಸಿದರು. ರಾಜೀನಾಮೆ ಕೇಳುವುದಿಲ್ಲ ಎಂದು ಕೇಂದ್ರ ಸಚಿವ ಕುಮಾರಸ್ವಾಮಿಯವರಿಗೆ ಹೇಳಿಕೆಗೆ ಪ್ರತಿಕ್ರಿಯಿಸಿ ಅವರ ಮೇಲೆ ಎಫ್.ಐ.ಆರ್ ಆಗಿದ್ದು ಅವರು ಜಾಮೀನಿನ ಮೇಲೆ ಇದ್ದಾರೆ. ಅವರು ರಾಜೀನಾಮೆ ಕೊಟ್ಟಿದ್ದಾರೆಯೇ? ಇದು ಅವರಿಗೆ ಅನ್ವಯವಾಗುವುದಿಲ್ಲವೇ? ತನಿಖೆ ಹಂತದಲ್ಲಿಯೇ ರಾಜೀನಾಮೆ ಕೊಡುವ ಬಗ್ಗೆ ಕುಮಾರಸ್ವಾಮಿಯವರನ್ನು ಕೇಳಿ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು.
ನ್ಯಾಯಾಲಯದ ತೀರ್ಪನ್ನು ನಾನು ಪೂರ್ತಿ ಓದಿಲ್ಲ. ಮಾಧ್ಯಮಗಳಲ್ಲಿ ಬಿತ್ತರಿಸಿರುವುದನ್ನು ಮಾತ್ರ ಓದಿದ್ದೇನೆ ಎಂದರು. ಓದಿದ ನಂತರ ಪುನಃ ಪ್ರತಿಕ್ರಿಯೆ ನೀಡುತ್ತೇನೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

Tags :