ಬಿಜೆಪಿ ಟಿಕೆಟ್ ಕೊಡಿಸುವುದಾಗಿ ವಂಚನೆ: ವಾಗ್ಮಿ ಚೈತ್ರಾ ಕುಂದಾಪುರ ಬಂಧನ
ಉಡುಪಿ: ಕಳೆದ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಬೈಂದೂರಿನ ಉದ್ಯಮಿ ಗೋವಿಂದ ಪೂಜಾರಿ ಎಂಬವರಿಗೆ ಸುಮಾರು 7 ಕೋ. ರೂ. ವಂಚಿಸಿದ ಪ್ರಕರಣ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆಯ ನಾಯಕಿ, ವಾಗ್ಮಿ ಚೈತ್ರಾ ಕುಂದಾಪುರ ಅವರನ್ನು ಸಿಸಿಬಿ ಬೆಂಗಳೂರು ವಿಭಾಗದ ಪೊಲೀಸರು ಮಂಗಳವಾರ ಸಂಜೆ ವಶಕ್ಕೆ ಪಡೆದಿದ್ದಾರೆ ಎಂದು ಎಸ್.ಪಿ. ಡಾ. ಅರುಣ್ ತಿಳಿಸಿದ್ದಾರೆ.
ಕಳೆದ ಕೆಲವು ಸಮಯದಿಂದ ತಲೆಮರೆಸಿಕೊಂಡಿದ್ದ ಚೈತ್ರ ಕುಂದಾಪುರ ಅವರನ್ನು ಇಲ್ಲಿನ ಕೃಷ್ಣ ಮಠ ಪಾರ್ಕಿಂಗ್ ಏರಿಯಾದಲ್ಲಿ ಬೆಂಗಳೂರಿನ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಬೈಂದೂರು ಗೋವಿಂದ ಪೂಜಾರಿ ಅವರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ, ಸಂಗಡಿಗರೊಂದಿಗೆ ಸೇರಿಕೊಂಡು ಸುಮಾರು ಏಳು ಕೋಟಿ ರೂ. ವಂಚಿಸಿದ್ದರು ಎಂಬ ಪತ್ರ ಭಾರೀ ವೈರಲ್ ಆಗಿತ್ತು. ಈ ಬಗ್ಗೆ ಅವರು ಬೆಂಗಳೂರಿನಲ್ಲಿ ದೂರು ನೀಡಿದ್ದರು. ಅದರಂತೆ ಬೆಂಗಳೂರಿನಿಂದ ಸಿಸಿಬಿ ಪೊಲೀಸರು ಉಡುಪಿಗೆ ಆಗಮಿಸಿ ಆಕೆಯನ್ನು ವಶಕ್ಕೆ ಪಡೆದಿದ್ದಾರೆ.
ಉತ್ತರ ಕರ್ನಾಟಕ ಭಾಗದಲ್ಲಿ ಭಾಷಣಗಾರ್ತಿಯಾಗಿ ಗುರುತಿಸಿಕೊಂಡಿರುವ ಚೈತ್ರ ಕುಂದಾಪುರ, ಟಿಕೆಟ್ ಕೊಡಿಸುವುದಾಗಿ ನಾಲ್ಕೈದು ಜನರ ತಂಡದೊಂದಿಗೆ ನಾಟಕವಾಡಿದ್ದರು. ಕೇಂದ್ರದ ನಾಯಕರು, ಆರ್.ಎಸ್.ಎಸ್. ಪ್ರಮುಖರ ಹೆಸರಿನಲ್ಲಿ ಪಂಗನಾಮ ಹಾಕಿದ್ದಲ್ಲದೆ, ಆರ್.ಎಸ್.ಎಸ್ ಪ್ರಮುಖರು ಎಂದು ನಕಲಿ ನಾಯಕರನ್ನು ಚೈತ್ರ ಅಂಡ್ ಟೀಮ್ ಸೃಷ್ಟಿ ಮಾಡಿತ್ತು. ಚೈತ್ರಾ ಕುಂದಾಪುರ ಜೊತೆಗೆ ಶ್ರೀಕಾಂತ್ ನಾಯಕ್ ಪೆಲತ್ತೂರು ಎಂಬಾತನನ್ನೂ ಪೊಲೀಸರು ವಶಕ್ಕೆ ಪಡೆದಿದ್ದು, ಇಬ್ಬರು ಆರೋಪಿಗಳನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಈ ವಂಚನೆ ಪ್ರಕರಣದಲ್ಲಿ ಈವರೆಗೆ ಗಗನ್ ಕಡೂರು, ಪ್ರಸಾದ್ ಎಂಬವರನ್ನು ಈಗಾಗಲೇ ಪೊಲೀಸರು ವಶಕ್ಕೆ ಪಡೆದಿದ್ದು, ಇದೀಗ ಚೈತ್ರಾ ಕುಂದಾಪುರ ಮತ್ತು ಶ್ರೀಕಾಂತ ನಾಯಕ್ ನನ್ನು ವಶಕ್ಕೆ ಪಡೆಯಲಾಗಿದೆ.