For the best experience, open
https://m.samyuktakarnataka.in
on your mobile browser.

ಬಿಜೆಪಿ ನಗರಸಭೆ ಸದಸ್ಯ ಅಪಹರಣ

05:52 PM Aug 30, 2024 IST | Samyukta Karnataka
ಬಿಜೆಪಿ ನಗರಸಭೆ ಸದಸ್ಯ ಅಪಹರಣ

ಚನ್ನಮ್ಮನ ಕಿತ್ತೂರು: ಐತಿಹಾಸಿಕ ಕಿತ್ತೂರು ಪಟ್ಟಣದ ಪಟ್ಟಣ ಪಂಚಾಯತ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಹಿನ್ನೆಲೆಯಲ್ಲಿ ಓರ್ವ ಚುನಾಯಿತ ವ್ಯಕ್ತಿಯನ್ನು ಅಪಹರಣ ಮಾಡಿದ ಘಟನೆ ಗುರುವಾರ ರಾತ್ರಿ ನಡೆದಿದೆ.
ವಾರ್ಡ್ ನಂ. ೨ರ ಬಿಜೆಪಿ ಸದಸ್ಯ ನಾಗರಾಜ ಅಸುಂಡಿ ಅವರನ್ನು ಗುರುವಾರ ರಾತ್ರಿ ಚೌಕಿಮಠ ಕ್ರಾಸ್ ಹತ್ತಿರ ಅಪಹರಿಸಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಮಾಹಿತಿ ಆಧಾರದ ಮೇಲೆ ನಾಗರಾಜ ತಂದೆ ಬಸವರಾಜ ಅಸುಂಡಿ ಕಿತ್ತೂರು ಠಾಣೆಯಲ್ಲಿ ಕಾಂಗ್ರೆಸ್ ಪಕ್ಷದ ಮೇಟ್ಯಾಲ ಗ್ರಾಮದ ಅಶೋಕ ಚನ್ನಬಸಪ್ಪ ಮಾಳಗಿ, ಚೆನ್ನಾಪುರ ಗ್ರಾಮದ ಬಸವರಾಜ ಶೇಖಪ್ಪ ಸಂಗೊಳ್ಳಿ, ಕಿತ್ತೂರು ಸೋಮವಾರ ಪೇಟೆಯ ಸುರೇಶ ಈರಪ್ಪ ಕಡೆಮನಿ ಅವರುಗಳ ಮೇಲೆ ದೂರು ದಾಖಲು ಮಾಡಿದ್ದಾರೆ. ಕಿತ್ತೂರು ಠಾಣೆಯಲ್ಲಿ ಅಧಿಕಾರಿಗಳು ದೂರು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಕಿತ್ತೂರು ತಾಲೂಕಿನ ಎರಡು ಪಟ್ಟಣ ಪಂಚಾಯಿತಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಿಸಿದ್ದರು. ಕಿತ್ತೂರು ಪಟ್ಟಣ ಪಂಚಾಯತನ ೧೮ ಸದಸ್ಯರ ಆಯ್ಕೆಗೆ ಸುಮಾರು ಮೂರು ವರ್ಷಗಳ ಹಿಂದೆ ಚುನಾವಣೆ ನಡೆದು ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ನಡೆದಿರಲಿಲ್ಲ. ಈಗ ಬರುವ ಸೆ.೩ರಂದು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಹಾಗೂ ಉಪಾಧ್ಯಕ್ಷರ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.
ಬಿಜೆಪಿಯಿಂದ ೯, ಕಾಂಗ್ರೆಸ್‌ನಿಂದ ೫, ಸ್ವತಂತ್ರ ಅಭ್ಯರ್ಥಿಗಳು ೪ ಜನ ಆಯ್ಕೆಯಾಗಿದ್ದಾರೆ. ಉಭಯ ಪಕ್ಷಗಳು ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ತಮ್ಮದಾಗಿಸಿಕೊಂಡು ಗದ್ದುಗೆ ಏರಬೇಕು ಎಂದು ಪೈಪೋಟಿಗೆ ಬಿದ್ದಿವೆ.