ಬಿಜೆಪಿ ನಡೆಸುತ್ತಿರುವುದು ವಿಜಯೇಂದ್ರ ಹಠಾವೋ ಹೋರಾಟ!
ಬೆಂಗಳೂರು: ಸುಳ್ಳಿನ ಮೆರವಣಿಗಾಗಿ ಸತ್ಯದ ಕೊಲೆ ಮಾಡಿ ಸಮಾಧಿ ಮಾಡುವ ಪ್ರಯತ್ನ “ಭ್ರಷ್ಟ ಜನತಾ ಪಾರ್ಟಿ“ಯವರದ್ದು. ಆದರೆ ಸತ್ಯಕ್ಕೆ ಸಾವಿಲ್ಲ ಎಂಬ ಅರಿವು ಅವರಿಗೆ ಇದ್ದಂತಿಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಕೂಸನ್ನು ಚಿವುಟುವುದೂ ಬಿಜೆಪಿಯವರೇ, ತೊಟ್ಟಿಲು ತೂಗುವುದೂ ಬಿಜೆಪಿಯವರೇ, ಬಿಜೆಪಿಯವರ ಈ ಕಳ್ಳಾಟ ವಕ್ಫ್ ವಿಚಾರದಲ್ಲಿ ಬಟಾಬಯಲಾಗಿದೆ. ಅಂದಹಾಗೆ, ಬಿಜೆಪಿಗರು ನಡೆಸುತ್ತಿರುವುದು ರೈತರ ಪರವಾದ ಹೋರಾಟವಲ್ಲ, ವಿಜಯೇಂದ್ರ ಹಠಾವೋ ಹೋರಾಟ! ಈ ಸತ್ಯ ಜಗನ್ನಾಥ ಭವನದ ಪ್ರತಿ ಕಿಟಕಿ ಬಾಗಿಲುಗಳಿಗೂ ತಿಳಿದಿದೆ!
- 2018-2023ರ ನಡುವೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಾಸಕ ಕುಮಾರ್ ಬಂಗಾರಪ್ಪ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ವಿಧಾನ ಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಮಿತಿಯು ಜಿಲ್ಲಾಧಿಕಾರಿಗಳೊಂದಿಗೆ ಹಲವಾರು ಸಭೆ ನಡೆಸಿ ವಕ್ಫ್ ಆಸ್ತಿ ಗುರುತಿಸಿ, ತೆರವುಗೊಳಿಸಲು ಸೂಚನೆ ನೀಡಿದ್ದು ಏಕೆ?
- 2019ರಿಂದ 2020ರ ಅವಧಿಯಲ್ಲಿ ಬಿಜೆಪಿ ಸರ್ಕಾರ 2,865 ಎಕರೆ ವಿಸ್ತೀರ್ಣದ ಜಮೀನಿಗೆ ವಕ್ಫ್ ಆಸ್ತಿ ಎಂದು ಅಧಿಸೂಚನೆ ಹೊರಡಿಸಿದ್ದು ಏಕೆ?
- ಹಿಂದಿನ ಬಿಜೆಪಿ ಸರ್ಕಾರ 1,735 ರೈತರಿಗೆ ವಕ್ಫ್ ಅಸ್ತಿಗೆ ಸಂಬಂಧಿಸಿದಂತೆ ನೋಟಿಸ್ ನೀಡಿದ್ದು ಏಕೆ?
- ಹಿಂದಿನ ಬಿಜೆಪಿ ಸರ್ಕಾರ 4,720 ಎಕರೆಯಷ್ಟು ಜಮೀನನ್ನು ಪರಬಾರೆಯಾಗದಂತೆ ವಕ್ಫ್ ಆಸ್ತಿ ಎಂದು ಫ್ಲಾಗ್ ಆಫ್ ಮಾಡಿದ್ದು ಏಕೆ?
- ರೈತರ ಹೆಸರಲ್ಲಿರುವ ಆಸ್ತಿಗಳ ಪಹಣಿಗಳಲ್ಲಿ ವಕ್ಫ್ ಆಸ್ತಿ ಎಂದು ನಮೋದಿಸಬೇಕು ಎಂದು ಕುಮಾರ್ ಬಂಗಾರಪ್ ಸಮಿತಿ ಸೂಚಿಸಿದ್ದು ಏಕೆ?
- ರಾಜ್ಯದಾದ್ಯಂತ ತಾಲೂಕುವಾರು ವಕ್ಫ್ ಆಸ್ತಿಗಳನ್ನು ಪರಿಶೀಲಿಸಿ ಭೂಮಿ ಸಾಫ್ಟ್ ವೇರ್ ನಲ್ಲಿ ವಕ್ಫ್ ಆಸ್ತಿ ಎಂದು ನಮೋದಿಸಬೇಕು ಎಂದು ಸೂಚಿಸಿದ್ದು ಏಕೆ?
- ಬಿಜೆಪಿ ಸರ್ಕಾರದ ಅವಧಿಯ ಕುಮಾರ್ ಬಂಗಾರಪ್ಪ ಸಮಿತಿ ಬೆಂಗಳೂರಿನ ಕೆ.ಆರ್ ಮಾರುಕಟ್ಟೆಯನ್ನು ವಕ್ಫ್ ಆಸ್ತಿ ಎಂದು ನೀಡಿದ್ದ ವರದಿಯನ್ನು ಸದನದಲ್ಲಿ ಅಂಗೀಕರಿಸಲಾಗಿತ್ತು, ಆಗ ಬಿಜೆಪಿಯವರ ಪ್ರಜ್ಞೆ ಎಲ್ಲಿ ಉದುರಿ ಬಿದ್ದಿತ್ತು?
ಈ ಎಲ್ಲಾ ಪ್ರಶ್ನೆಗಳಿಗೆ ವಕ್ಫ್ ಆಸ್ತಿ ಅಲ್ಲಾನ ಆಸ್ತಿ ಎಂದಿದ್ದ ಬೊಮ್ಮಾಯಿಯವರು ಉತ್ತರಿಸುತ್ತಾರೋ? ಟಿಪ್ಪು ಟೋಪಿ ಧರಿಸಿ ಖಡ್ಗ ಹಿಡಿದಿದ್ದ ಯಡಿಯೂರಪ್ಪನವರು ಉತ್ತರಿಸುತ್ತಾರೋ? ಅಥವಾ ವಕ್ಫ್ ವಿಚಾರಕ್ಕಾಗಿ ರಾಜ್ಯ ಪ್ರವಾಸಕ್ಕೆ ಹೊರಡುತ್ತಿರುವ ಬಿಜೆಪಿಯ A ಟೀಮ್, B ಟೀಮ್ ನಾಯಕರು ಜನತೆಗೆ ಈ ಸತ್ಯಗಳನ್ನು ತಿಳಿಸಿ ಬರುತ್ತಾರೆಯೇ? ಎಂದು ಪ್ರಶ್ನಿಸಿದ್ದಾರೆ.