ಬಿಜೆಪಿ ಮಾನಸಿಕ ಬಿರುಕು ಮುಚ್ಚುವುದು ಕಷ್ಟ
ರಾಜ್ಯದಲ್ಲಿ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ನಡೆದ ಮೇಲೆ ಬಿಜೆಪಿ ಕೆಲವು ನಾಯಕರಲ್ಲಿ ಮಾನಸಿಕ ಭಿನ್ನಾಭಿಪ್ರಾಯ ತಲೆದೋರಿದ್ದು, ಅದನ್ನು ಸರಿಪಡಿಸುವ ಮೊದಲ ಸಭೆಯನ್ನು ಆರ್‌ಎಸ್‌ಎಸ್-ಬಿಜೆಪಿ ನಾಯಕರು ನಿನ್ನೆ ನಡೆಸಿದ್ದಾರೆ. ಒಂದೇ ಸಭೆಯಲ್ಲಿ ಇದು ಫಲಕಾರಿಯಾಗುವುದು ಕಷ್ಟ. ತೊಂದರೆ ಇರುವುದು ಬಿಜೆಪಿ ನಾಯಕರಲ್ಲೇ ಹೊರತು ಆರ್‌ಎಸ್‌ಎಸ್ ನಾಯಕರಲ್ಲ ಎಂಬುದು ಸ್ಪಷ್ಟ. ಆರ್‌ಎಸ್‌ಎಸ್ ಮೊದಲಿನಿಂದಲೂ ತನ್ನ ಬದ್ಧತೆಯನ್ನು ಬಿಟ್ಟುಕೊಟ್ಟಿಲ್ಲ. ರಾಜ್ಯ ಬಿಜೆಪಿಯಲ್ಲಿ ಬಿರುಕು ಕಾಣಿಸಲು ಹಲವು ಕಾರಣಗಳಿವೆ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ಬಿಜೆಪಿ ತನ್ನ ಸ್ಥಾನ ಭದ್ರ ಪಡಿಸಿಕೊಳ್ಳಲು ಹೋಗಲಿಲ್ಲ. ಅಲ್ಲದೆ ಆರ್‌ಎಸ್‌ಎಸ್ ಪಡೆಯನ್ನು ಎಷ್ಟು ಬಳಸಿಕೊಂಡು ರಾಜಕೀಯವಾಗಿ ಬೇರೂರಬೇಕಿತ್ತೊ ಅಷ್ಟು ಮಾಡಲಿಲ್ಲ. ಕೆಲವು ಕಡೆ ಅಧಿಕಾರಕ್ಕೆ ಬಂದವರು ಆರ್‌ಎಸ್‌ಎಸ್ ಕಾರ್ಯಕರ್ತರನ್ನು ದೂರವಿಟ್ಟು ತಮ್ಮದೇ ಆದ ಪಡೆಯನ್ನು ಕಟ್ಟುವ ಕೆಲಸ ಕೈಗೊಂಡರು. ಇದರ ಪರಿಣಾಮ ಆರ್‌ಎಸ್‌ಎಸ್ ಕಾರ್ಯಕರ್ತರು ಚುನಾವಣೆ ಕಾಲದಲ್ಲಿ ಪೂರ್ಣ ಮನಸ್ಸಿನಿಂದ ಕೆಲಸ ಮಾಡಲಿಲ್ಲ. ಹೀಗಾಗಿ ಚುನಾವಣೆ ಫಲಿತಾಂಶ ಬದಲಾಯಿತು. ಚುನಾವಣೆ ನಂತರ ವಿಜಯೇಂದ್ರ ಪಕ್ಷದ ಅಧ್ಯಕ್ಷರಾದರು. ಅವರೊಂದಿಗೆ ಸಹಕರಿಸಲು ಕೆಲವು ನಾಯಕರು ಈಗಲೂ ಒಪ್ಪಿಲ್ಲ. ಕೆಲವರು ಬಹಿರಂಗವಾಗಿ ಟೀಕಿಸಿದ್ದರೆ ಮತ್ತೆ ಕೆಲವರು ಒಳಗಿಂದೊಳಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರಿಂದ ಪ್ರತಿಪಕ್ಷವಾಗಿ ಎಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಿತ್ತೊ ಅಷ್ಟು ಪ್ರಬಲವಾಗಿ ಬಿಜೆಪಿ ಕೆಲಸ ಮಾಡುತ್ತಿಲ್ಲ ಎಂಬುದು ಬಿಜೆಪಿ ದೆಹಲಿ ಪ್ರಭುಗಳಿಗೂ ತಿಳಿದಿದೆ. ಈ ಬಿರುಕನ್ನು ಮುಚ್ಚಲು ಆರ್‌ಎಸ್‌ಎಸ್ ಮತ್ತು ಬಿಜೆಪಿ ನಾಯಕರು ಸಭೆ ನಡೆಸಿ ಕೈಕೈ ಕುಲುಕಿದ್ದಾರೆ. ಎಲ್ಲವೂ ಸುಖಾಂತ್ಯ ಎಂದು ಭಾವಿಸಿರುವಾಗಲೇ ಕೆಲವು ನಾಯಕರು ಪಕ್ಷದ ಅಧ್ಯಕ್ಷರನ್ನೇ ಬಿಟ್ಟು ರಾಜ್ಯಪಾಲರನ್ನು ಕಂಡು ವಾಲ್ಮೀಕಿ ಹಗರಣದ ವಿರುದ್ಧ ಮನವಿ ಸಲ್ಲಿಸಿದ್ದಾರೆ. ಇತ್ತೀಚೆಗೆ ಮಳೆ ಬಂದು ಎಲ್ಲ ರಸ್ತೆಗಳ ಗುಂಡಿ ಎದ್ದು ಕೊಂಡಿವೆ. ಅದನ್ನು ಮುಚ್ಚುವ ಕೆಲಸವನ್ನು ಸ್ಥಳೀಯಸಂಸ್ಥೆ ಕೈಗೊಂಡಿದೆ. ಆದರೆ ಬಿಜೆಪಿ ನಾಯಕರ ಮನಸ್ಸಿನಲ್ಲಿ ಕಾಣಿಸಿಕೊಂಡಿರುವ ಮಾನಸಿಕ ಗುಂಡಿಗಳನ್ನು ಅಷ್ಟು ಬೇಗ ಮುಚ್ಚುವುದು ಕಷ್ಟ ಎಂಬುದು ಆರ್‌ಎಸ್‌ಎಸ್ ನಾಯಕರಿಗೂ ಗೊತ್ತಿದೆ. ಆರ್‌ಎಸ್‌ಎಸ್ ಕಾರ್ಯಕರ್ತರು ನಿಷ್ಠೆಯಿಂದ ಕೆಲಸ ಮಾಡುವಂತೆ ಬಿಜೆಪಿ ಕಾರ್ಯಕರ್ತರು ದುಡಿಯುವುದಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಕಮ್ಯೂನಿಷ್ಟ್ ಪಕ್ಷಕ್ಕೆ ಮಾತ್ರ ನಿಷ್ಠಾವಂತ ಕಾಮ್ರೇಡ್ ಪಡೆ ಇದೆ. ಅದನ್ನು ಬಿಟ್ಟರೆ ಬಿಜೆಪಿಗೆ ಇರುವುದು ಆರ್‌ಎಸ್‌ಎಸ್ ಪಡೆ. ಅದನ್ನು ಕಡೆಗಣಿಸುವುದು ಎಷ್ಟು ದುಬಾರಿ ಎಂಬ ಅರಿವು ಈಗ ಬಿಜೆಪಿ ನಾಯಕರಿಗೆ ಆಗಿರಬೇಕು. ಬಿಜೆಪಿ ಎಲ್ಲ ನಾಯಕರೂ ಆರ್‌ಎಸ್‌ಎಸ್‌ನಿಂದ ಬಂದಿರುವುದಾಗಿ ಹೇಳುತ್ತಾರೆ. ಆದರೆ ಅಧಿಕಾರಕ್ಕೆ ಬಂದ ಮೇಲೆ ಆರ್‌ಎಸ್‌ಎಸ್‌ನಿಂದ ದೂರ ಉಳಿಯುತ್ತಿದ್ದಾರೆ. ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ರಾಜಕೀಯ ದಾಳ ಉರುಳಿಸಲು ಅನುಕೂಲವಾಗಿದೆ. ಆರ್‌ಎಸ್‌ಎಸ್ ಅಧಿಕಾರ ಉಳಿಸಿಕೊಳ್ಳಲು ತನ್ನ ನಿಲುವಿನಲ್ಲಿ ಕೆಲವು ಬದಲಾವಣೆತರಲು ಮಾನಸಿಕವಾಗಿ ಒಪ್ಪಿಕೊಳ್ಳುತ್ತಿದ್ದರೂ ಬಿಜೆಪಿ ನಾಯಕರೇ ಮಾನಸಿಕವಾಗಿ ಸಿದ್ಧಗೊಳ್ಳುತ್ತಿಲ್ಲ ಎಂಬುದು ಕಹಿ ಸತ್ಯ. ಕಾಂಗ್ರೆಸ್‌ಗೂ ಬಿಜೆಪಿಗೂ ಅಂತರವೇನು ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಟ್ಟಲ್ಲಿ ಮಾತ್ರ ಎರಡೂ ಪಕ್ಷಗಳು ತಮ್ಮದೇ ಆದ ಮತ ಬ್ಯಾಂಕ್ ನಿರ್ಮಿಸಿಕೊಳ್ಳಬಹುದು. ಈಗಿನ ಸಂದರ್ಭದಲ್ಲಿ ಪ್ರತಿಪಕ್ಷವಾಗಿ ಬಿಜೆಪಿ ಕ್ರಿಯಾಶೀಲವಾಗದೇ ಇರುವುದು ಜೆಡಿಎಸ್‌ಗೆ ಅನುಕೂಲವಾಗಿದೆ. ಬಿಜೆಪಿ ನಾಯಕರು ಇನ್ನೂ ಅಧಿಕಾರದ ಗುಂಗಿನಲ್ಲಿದ್ದಾರೆ. ಪ್ರತಿಪಕ್ಷವಾಗಿ ಬೀದಿಗೆ ಇಳಿಯುವ ಹುಮ್ಮಸ್ಸು ತೋರಿಸುತ್ತಿಲ್ಲ. ಆ ಹುಮ್ಮಸ್ಸು ತುಂಬಲು ಆರ್‌ಎಸ್‌ಎಸ್ ಬಿಜೆಪಿಯ ನಾಯಕರ ಸಮನ್ವಯ ಸಭೆ ನಡೆಸುವ ಮೂಲಕ ಪಕ್ಷದಲ್ಲಿ ಹೊಸ ವಾತಾವರಣ ಮೂಡಿಸಲು ಯತ್ನಿಸುತ್ತಿದೆ. ಇದರ ಪ್ರಭಾವದಿಂದ ಮುಂದಿನ ದಿನಗಳಲ್ಲಿ ಬಿಜೆಪಿ ನಾಯಕರು ತಮ್ಮ ಬಟ್ಟೆ ಕೊಳಕಾದರೂ ಅಡ್ಡಿಯಿಲ್ಲ ಎಂದು ಬೀದಿಗೆ ಇಳಿಯಬೇಕಿದೆ.
ಆರ್‌ಎಸ್‌ಎಸ್-ಬಿಜೆಪಿ ನಡುವೆ ಸಮನ್ವಯ ಮೂಡಿಸುವ ನಾಯಕನ ಕೊರತೆ ಈಗ ಕಂಡು ಬರುತ್ತಿದೆ. ಹಿಂದೆ ಬಿಜೆಪಿ ನಾಯಕರಿಗೆ ಸಂಪೂರ್ಣ ಬೆಂಬಲ ಆರ್‌ಎಸ್‌ಎಸ್‌ನಿಂದ ಲಭಿಸಿತ್ತು. ಅದರಿಂದ ಜನರ ಬೆಂಬಲ ಗಳಿಸುವುದು ಬಿಜೆಪಿಗೆ ಸುಲಭವಾಗಿತ್ತು. ಈಗ ಅದರ ಕೊರತೆ ಕಂಡು ಬರುತ್ತಿದೆ. ಮುಂಬರುವ ಸ್ಥಳೀಯ ಸಂಸ್ಥೆಯ ಚುನಾವಣೆಗೆ ಮುನ್ನ ಬಿಜೆಪಿ ನಾಯಕರಲ್ಲಿ ಒಮ್ಮತ ಮತ್ತು ಆರ್‌ಎಸ್‌ಎಸ್ ಜತೆ ಸಮನ್ವಯ ಮೂಡಬೇಕಿದೆ. ಈಗಿನ ಪರಿಸ್ಥಿತಿಯಲ್ಲಿ ದೆಹಲಿಯ ಬಿಜೆಪಿ ನಾಯಕರು ಕುಮಾರಸ್ವಾಮಿಯ ಮೇಲೆ ಅವಲಂಬಿಸುವುದು ಅನಿವಾರ್ಯವಾಗಿದೆ. ಬಿಜೆಪಿ ನಾಯಕರು ಚುನಾವಣೆ ಸೋಲಿನ ಬಗ್ಗೆ ಇನ್ನೂ ಆತ್ಮಾವಲೋಕನ ಮಾಡಿಕೊಳ್ಳುವ ಹಂತ ತಲುಪಿಲ್ಲ. ಪಕ್ಷದ ಹೊರಗೆ ಪರಸ್ಪರ ದೋಷಾರೋಪಣೆಯಲ್ಲೇ ನಾಯಕರು ನಿರತರಾಗಿರುವುದು ಕಾರ್ಯಕರ್ತರಲ್ಲಿ ನಿರುತ್ಸಾಹ ಮೂಡಿಸಿರುವುದಂತೂ ನಿಜ. ಅಧಿಕಾರ ಕಳೆದುಕೊಂಡ ಮೇಲೆ ಎಲ್ಲ ರಾಜಕೀಯ ಪಕ್ಷಗಳು ಇಂಥ ಪರಿಸ್ಥಿತಿ ಎದುರಿಸುವುದು ಸಹಜ. ಇದರಿಂದ ಹೊರಬರುವುದು ಇಂದಿನ ಅಗತ್ಯ. ಇದನ್ನೇ ಆರ್‌ಎಸ್‌ಎಸ್ ನಾಯಕರು ಮನವರಿಕೆ ಮಾಡಿಕೊಡಲು ಯತ್ನಿಸಿದ್ದಾರೆ.