For the best experience, open
https://m.samyuktakarnataka.in
on your mobile browser.

ಬಿಜೆಪಿ ವಿರುದ್ಧ ಕೈ ಮಂದಿರಾಸ್ತ್ರ

02:53 AM Jan 25, 2024 IST | Samyukta Karnataka
ಬಿಜೆಪಿ ವಿರುದ್ಧ ಕೈ ಮಂದಿರಾಸ್ತ್ರ

ಕೆ.ವಿ.ಪರಮೇಶ್
ಏಟಿಗೆ ಎದಿರೇಟು. ತಂತ್ರಕ್ಕೆ ಪ್ರತಿತಂತ್ರ. ಅಸ್ತ್ರಕ್ಕೆ ಪ್ರತ್ಯಸ್ತ್ರ. ಇದೀಗ ಬಿಜೆಪಿ ವಿರುದ್ಧ ಅಂತಹದ್ದೇ ರಣತಂತ್ರಕ್ಕೆ ಸಿಎಂ ಸಿದ್ದರಾಮಯ್ಯ ಸಾರಥ್ಯದ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಅಯೋಧ್ಯೆಯ ಶ್ರೀರಾಮಮಂದಿರದ ಪ್ರಭಾವವನ್ನು ತಗ್ಗಿಸಲು ರಾಜ್ಯದಲ್ಲಿಯೇ ನೂರು ರಾಮಮಂದಿರಗಳ ಕಾಯಕಲ್ಪಕ್ಕೆ ಗಂಭೀರ ಚಿಂತನೆ ನಡೆಸಿದೆ. ಇದಕ್ಕೆಂದೇ ಬಜೆಟ್‌ನಲ್ಲಿ ಬರೋಬ್ಬರಿ ೧೦೦ ಕೋಟಿ ಅನುದಾನ ಘೋಷಿಸುವ ಪ್ರಸ್ತಾವನೆಯೂ ಸಿದ್ಧವಾಗುತ್ತಿದೆ.
ಇದೇ ವರ್ಷ ಲೋಕಸಭೆ ಚುನಾವಣೆಯಲ್ಲಿ ಲಾಭಗಿಟ್ಟಿಸುವ ಕಾರಣಕ್ಕೆ ಬಿಜೆಪಿ ಅಯೋಧ್ಯೆಯಲ್ಲಿ ಬಾಲರಾಮನಿಗೆ ಪ್ರಾಣಪ್ರತಿಷ್ಠಾಪನೆ ಮುಖೇನ ರಾಮಮಂದಿರ ಉದ್ಘಾಟಿಸಿದೆ ಎನ್ನುವುದು ಕಾಂಗ್ರೆಸ್ ಬಹಿರಂಗ ಆರೋಪ. ಇದಕ್ಕೆ ರಾಜಕೀಯವಾಗಿಯೇ ಉತ್ತರ ಕೊಡಲು ಸಿದ್ಧತೆ ನಡೆಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಅಯೋಧ್ಯೆಯ ಒಂದು ಮಂದಿರಕ್ಕೆ ಪ್ರತಿಯಾಗಿ ೧೦೦ ರಾಮಮಂದಿಗಳ ಜೀರ್ಣೋದ್ಧಾರಕ್ಕೆ ಯೋಜಿಸಿದೆ. ಇದಕ್ಕೆಂದೇ ೧೦೦ ಕೋಟಿ ರೂಗಳನ್ನು ಮೀಸಲಿರಿಸಿ ಫೆಬ್ರವರಿ ೧೬ರ ರಾಜ್ಯ ಮುಂಗಡಪತ್ರದಲ್ಲಿ ಘೋಷಣೆ ಮಾಡುವ ಸಾಧ್ಯತೆ ದಟ್ಟವಾಗಿದೆ.
ಅಯೋಧ್ಯೆಯಲ್ಲಿ ರಾಮಭವನ: ಮತ್ತೊಂದು ಪ್ರಮುಖ ನಡೆಯಲ್ಲಿ ಅಯೋಧ್ಯೆಯಲ್ಲಿ ಉತ್ತರಪ್ರದೇಶ ಸರ್ಕಾರ ಅಗತ್ಯ ಭೂಮಿ ಒದಗಿಸಿದಲ್ಲಿ ಕರ್ನಾಟಕದಿಂದ ಅಲ್ಲಿಗೆ ತೆರಳುವ ಭಕ್ತಾದಿಗಳಿಗೆ ಅನುಕೂಲವಾಗುವಂತೆ ಸುಸಜ್ಜಿತ 'ರಾಮಭವನ' ನಿರ್ಮಾಣಕ್ಕೂ ಉದ್ದೇಶಿಸಿದ್ದು ಇದಕ್ಕೆ ೧೦೦ ಕೋಟಿ ರೂ ಮೀಸಲಿರಿಸಲು ಇಲಾಖೆ ಪ್ರಸ್ತಾವನೆಯಲ್ಲಿ ಉಲ್ಲೇಖಿಸಿದೆ. ಈಗಾಗಲೇ ರಾಜ್ಯ ಸರ್ಕಾರ ಸಿಎಂ ಯೋಗಿ ಆದಿತ್ಯನಾಥ ಅವರಿಗೆ ಅಧಿಕೃತ ಪತ್ರ ರವಾನಿಸಿದೆ. ಬಜೆಟ್ ಬಳಿಕ ಅಯೋಧ್ಯಗೆ ತೆರಳಲು ನಿರ್ಧರಿಸಿರುವ ಸಿಎಂ ಸಿದ್ದರಾಮಯ್ಯ ಖುದ್ದು ಉಪ್ರ ಸಿಎಂ ಜೊತೆ ಪ್ರಸ್ತಾವನೆ ಬಗ್ಗೆ ಸಮಾಲೋಚಿಸಲು ಮುಂದಾಗಿದಾರೆ ಎನ್ನಲಾಗಿದೆ.
೨ ದೇಗುಲಗಳಿಗೆ ಪ್ರಾಧಿಕಾರ: ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿರುವ ಹಾಗೂ ಉತ್ತಮ ಆದಾಯದೊಂದಿಗೆ ದೊಡ್ಡಮಟ್ಟದ ಭಕ್ತಬಳಗವನ್ನೂ ಹೊಂದಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಘಾಟಿಸುಬ್ರಮಣ್ಯ ದೇವಾಲಯ ಮತ್ತು ಕೊಪ್ಪಳ ಜಿಲ್ಲೆಯ ಹುಲಿಗಮ್ಮ ದೇಗುಲಗಳಿಗೆ ಪ್ರತ್ಯೇಕ ಅಭಿವೃದ್ಧಿ ಪ್ರಾಧಿಕಾರ ರಚಿಸುವ ಬಗ್ಗೆಯೂ ಸರ್ಕಾರ ಆಲೋಚಿಸಿದೆ. ಆ ಮೂಲಕ ಎರಡೂ ದೇವಾಲಯಗಳನ್ನು ಇನ್ನಷ್ಟು ಅಭಿವೃದ್ಧಿ ಮತ್ತು ಭಕ್ತಮುಖಿಯಾಗಿಸಲು ಕ್ರಮವಹಿಸಲಿದೆ.
ಒಟ್ಟಾರೆ ಲೋಕಸಭಾ ಚುನಾವಣೆ ಮಾತ್ರದಲ್ಲಿ ರಾಜ್ಯದಲ್ಲಿ ಈ ವರ್ಷವೇ ಎದುರಾಗಲಿರುವ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗಳಲ್ಲಿಯೂ ಕಾಂಗ್ರೆಸ್‌ಪಕ್ಷ ಹಿಂದುತ್ವದ ಪರ ಹಾಗೂ ಶ್ರೀರಾಮನ ಪರ ಎನ್ನುವುದನ್ನು ಕಾರ್ಯಕ್ರಮಗಳ ಮೂಲಕವೇ ಸಾಬೀತುಪಡಿಸಲು ಯೋಜಿಸಿದೆ. ಇದರ ಫಲಶ್ರುತಿ ಸಿಗಲಿದೆಯೇ ಎನ್ನುವುದನ್ನು ಕಾಲವೇ ನಿರ್ಧರಿಸಬೇಕಾಗುತ್ತದೆ.