For the best experience, open
https://m.samyuktakarnataka.in
on your mobile browser.

ಬಿಜೆಪಿ ವಿರುದ್ಧ ಕೊಟ್ಟ ಹೇಳಿಕೆಗಳಿಗೆ ಈಗ ಅವರೇ ಉತ್ತರ ನೀಡಬೇಕು

01:56 PM Jan 26, 2024 IST | Samyukta Karnataka
ಬಿಜೆಪಿ ವಿರುದ್ಧ ಕೊಟ್ಟ ಹೇಳಿಕೆಗಳಿಗೆ ಈಗ ಅವರೇ ಉತ್ತರ ನೀಡಬೇಕು

ಬೆಂಗಳೂರು: ಬಿಜೆಪಿ ವಿರುದ್ಧ ಕೊಟ್ಟ ಹೇಳಿಕೆಗಳಿಗೆ ಈಗ ಅವರೇ ಉತ್ತರ ನೀಡಬೇಕು ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಹೇಳಿದ್ದಾರೆ.
ಈ ಕುರಿತು ಶುಕ್ರವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬೆಳಗಾವಿ ಹಾಗೂ ಇತರೆ ಭಾಗದ ನಾಯಕರು, ಕಾರ್ಯಕರ್ತರು ಜಗದೀಶ್ ಶೆಟ್ಟರ್ ಅವರು ಬಿಜೆಪಿಗೆ ಹೋಗಿದ್ದು ಒಳ್ಳೆಯದಾಯಿತು ಎಂದು ಹೇಳಿದ್ದಾರೆ. ದೂರದೃಷ್ಟಿ ಇಟ್ಟುಕೊಂಡು ಅವರಿಗೆ ನಾವು ಅವಕಾಶ ಮಾಡಿಕೊಟ್ಟಿದ್ದೆವು. ಅವರು ಬಿಜೆಪಿ ವಿರುದ್ಧ ಕೊಟ್ಟ ಹೇಳಿಕೆಗಳಿಗೆ ಈಗ ಅವರೇ ಉತ್ತರ ನೀಡಬೇಕು. ಅದರ ಬಗ್ಗೆ ನಾವು ಮಾತನಾಡುವ ಅಗತ್ಯವಿಲ್ಲ. ಅವರ ರಾಜೀನಾಮೆಯಿಂದ ತೆರವಾದ ಸ್ಥಾನವನ್ನು ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತನಿಗೆ ನೀಡುತ್ತೇವೆ ಎಂದಿದ್ದಾರೆ.
ಜಗದೀಶ್ ಶೆಟ್ಟರ್ ಅವರು ಬಿಜೆಪಿ ಆಂತರಿಕ ವಿಚಾರದಿಂದ ಬೇಸತ್ತು ಆ ಪಕ್ಷದ ವಿರುದ್ಧ ದೊಡ್ಡ ಆರೋಪ ಮಾಡಿ ಕಾಂಗ್ರೆಸ್ ಸೇರಿದ್ದರು. ಅವರಿಗೆ ಪಕ್ಷದ ಟೆಕೆಟ್ ನೀಡಿದ್ದೆವು. 35 ಸಾವಿರ ಮತಗಳ ಅಂತರದಲ್ಲಿ ಸೋತಿದ್ದರು. ಆದರೂ ಅವರಿಗೆ ವಿಧಾನ ಪರಿಷತ್ತಿಗೆ ನಾಮನಿರ್ದೆಶನ ಮಾಡಿದ್ದೆವು. ಕಳೆದ 2-3 ತಿಂಗಳಿಂದ ಬಿಜೆಪಿ ನಾಯಕರು ಅವರನ್ನು ಸಂಪರ್ಕ ಮಾಡುತ್ತಿದ್ದರು. ಮೊನ್ನೆ ಕೂಡ ಬಿಜೆಪಿ ಸೇರುವುದಿಲ್ಲ ಎಂದು ಅವರು ಹೇಳಿದ್ದರು. ಆದರೆ ನಿನ್ನೆ ಏಕಾಏಕಿ ಪಕ್ಷ ತೊರೆದಿದ್ದಾರೆ. ನಮ್ಮ ಪಕ್ಷ 136 ಸೀಟು ಗೆದ್ದಿದೆ. ನಮ್ಮ ತಪ್ಪಿನಿಂದ 6-7 ಸೀಟು ಸೋತಿದ್ದೇವೆ. ಈಗಲೂ ಬಹಳ ಮಂದಿ ನಮ್ಮ ಪಕ್ಷ ಸೇರಲು ಎದುರು ನೋಡುತ್ತಿದ್ದಾರೆ. ನಾವು ಸಿದ್ಧಾಂತ, ನೀತಿ ಮೇಲೆ ರಾಜಕಾರಣ ಮಾಡುವವರು. ಹಿಂದೆ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಜೆಡಿಎಸ್‌ನ ಕುಮಾರಸ್ವಾಮಿ ಅವರಿಗೆ ಬೇಷರತ್ ಬೆಂಬಲ ನೀಡಿ ಮುಖ್ಯಮಂತ್ರಿ ಮಾಡಿದ್ದೇವು. ಆ ಸರ್ಕಾರವನ್ನು ಅವರು ಉಳಿಸಿಕೊಳ್ಳಲಿಲ್ಲ. ಆಪರೇಷನ್ ಕಮಲದ ಮೂಲಕ ಸರ್ಕಾರ ಬೀಳಿಸಿದವರ ಜತೆ ಕುಮಾರಸ್ವಾಮಿ ಇಂದು ನೆಂಟಸ್ಥನ ಬೆಳೆಸಿದ್ದಾರೆ. ಬಿಜೆಪಿ ವಕ್ತಾರರಂತೆ ಕುಮಾರಸ್ವಾಮಿ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಶಾಸಕ ಲಕ್ಷ್ಮಣಸವದಿ ಕಾಂಗ್ರೆಸ್ ಬಿಡುವುದಿಲ್ಲ. ಸವದಿ ಅವರು ಶೆಟ್ಟರ್ ಜತೆ ಬಂದವರಲ್ಲ. ಈಗಲೂ ಅವರು ನಮ್ಮ ಪಕ್ಷದ ಪ್ರಮುಖ ನಾಯಕ ಹಾಗೂ ಆಸ್ತಿ ಎಂದರು. ಬಿಜೆಪಿಯವರು ಸವದಿ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರಿಗೆ ಗಾಳ ಹಾಕಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಯಾರನ್ನೂ ಬಿಡುತ್ತಿಲ್ಲ. ನಾವು ಆ ರೀತಿ ಮಾಡಬಹುದು. ನಾವು ಮನಸ್ಸು ಮಾಡಿದ್ದರೆ ಎಷ್ಟೋ ಮನೆಗಳು ಖಾಲಿಯಾಗಿರುತ್ತಿದ್ದವು, ಮಾಧ್ಯಮಗಳಲ್ಲಿ ಅನೇಕ ಚರ್ಚೆ ಆಗುತ್ತಿವೆ. ಇಂಡಿಯಾ ಒಗ್ಗಟ್ಟಿನಿಂದ ಚುನಾವಣೆ ಎದುರಿಸುತ್ತದೆ. ಕೆಲವರು ಪ್ರತ್ಯೇಕವಾಗಿ ಚುನಾವಣೆ ಎದುರಿಸುತ್ತೇವೆ ಎಂದು ನೀಡಿರುವ ಹೇಳಿಕೆಯನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇವೆ. ಕಾಂಗ್ರೆಸ್ ಹಾಗೂ ಇಂಡಿಯಾ ಮೈತ್ರಿಕೂಟ ಒಗ್ಗಟ್ಟಿನಿಂದ ಚುನಾವಣೆ ಎದುರಿಸಲಿದೆ ಎಂದರು.