ಬಿಜೆಪಿ ಸಂಸದರಿಗೆ ಮಾನ ಮರ್ಯಾದೆ ಇಲ್ಲ
ಕಲಬುರಗಿ: ರಾಜ್ಯದ ಬಿಜೆಪಿ ಸಂಸದರು, ರಾಜ್ಯದ ಕೇಂದ್ರ ಸಚಿವರಿಗೆ ಮಾನ ಮರ್ಯಾದೆ ಇದ್ದರೆ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಿದ್ದ ಬರ ನಿರ್ವಹಣೆಯ ಅನುದಾನದ ಪಾಲು ದೊರೆಕಿಸಿಕೊಡಲಿ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಒಂದೇ ಒಂದು ದಿನ ಭೇಟಿ ಮಾಡಿ ಮನವರಿಕೆ ಮಾಡಿಕೊಡಲಿಲ್ಲ, ರಾಜ್ಯಕ್ಕೆ ಬಿಜೆಪಿ ಸಂಸದರು ಕೊಡುಗೆ ಏನಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಪ್ರಶ್ನಿಸಿದರು.
ಕಲಬುರಗಿಯ ವಿಮಾನ ನಿಲ್ದಾಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಕ್ಕೆ ಕೇಂದ್ರ ಸರ್ಕಾರ ಮಾಡುತ್ತಿರುವ ಅನ್ಯಾಯ ಖಂಡಿಸಿ ದಿ. ೭ ರಂದು ನವದೆಹಲಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಮೊದಲ ಹಂತದಲ್ಲಿ ಸಚಿವರು, ಶಾಸಕರು, ಎಂಎಲ್‌ಸಿಗಳು, ಪಕ್ಷದ ಸಂಸದರು ಪ್ರತಿಭಟನೆಯಲ್ಲಿ ಪಾಲ್ಗೊಳಲಿದ್ದಾರೆ. ಇನ್ನು ಕೇಂದ್ರದ ಪಾಲು ದೊರೆಕಿಸಿ ಕೊಡುವಲ್ಲಿ ಬಿಜೆಪಿ ನಾಯಕರು ವಿಫಲರಾಗಿದ್ದರಿಂದ ರಾಜ್ಯದಲ್ಲಿ ಬಿಜೆಪಿಗೆ ಧಿಕ್ಕರಿಸಿದ್ದಾರೆ. ಹೀಗಾಗಿ, ಬಿಜೆಪಿಯವರು ಒಮ್ಮೆ ಆತ್ಮವಿಮರ್ಶೆ ಮಾಡಿಕೊಳ್ಳಲಿ ಎಂದು ಸವಾಲೆಸದರು. ರಾಜ್ಯದಲ್ಲಿ ಅದೇ ದಿನ ಬಿಜೆಪಿಯವರು ರಾಜ್ಯ ಸರ್ಕಾರದ ವಿರುದ್ಧ ಹೋರಾಟದ ಬಗ್ಗೆ ಗೊತ್ತಿಲ್ಲ ಎಂದರು.
ಕೇಂದ್ರ ಬಜೆಟ್‌ನಲ್ಲೂ ರಾಜ್ಯಕ್ಕೆ ತಾರತಮ್ಯ: ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್‌ನಲ್ಲಿ ರಾಜ್ಯಕ್ಕೆ ಅನುದಾನ ಮೀಸಲಿಡುವಲ್ಲಿ ತಾರತಮ್ಯವೆಸಗಲಾಗಿದೆ. ಈ ಹಿಂದಿನ ಬಜೆಟ್‌ನಲ್ಲೂ ಘೋಷಣೆ ಮಾಡಿದ ಅನುದಾನ ಕೂಡ ಹರಿದುಬಂದಿಲ್ಲ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದಲ್ಲಿ ರಾಜ್ಯಕ್ಕೆ ಅನ್ಯಾಯ ಮುಂದುವರಿದಿದೆ. ಈ ಬಗ್ಗೆ ಕಾಂಗ್ರೆಸ್ ಪಕ್ಷವು ಗಂಭೀರವಾಗಿ ಪರಿಗಣಿಸಿದ್ದು, ಕೇಂದ್ರ ಸರ್ಕಾರದ ವಿರುದ್ಧ ಧ್ವನಿ ಎತ್ತಲೇಬೇಕಿದೆ ಎಂದರು.
ಯಾವುದೇ ಅಸ್ಪೃಶ್ಯತೆ ಇಲ್ಲ: ಚಿತ್ರದುರ್ಗ ನಗರದ ಬಾಗೂರನಲ್ಲಿ ಚೆನ್ನಕೇಶವ ದೇವಸ್ಥಾನಕ್ಕೆ ಕನಕ ಗುರು ಪೀಠದ ಪೀಠಾಧಿಪತಿ ಈಶ್ವರಾನಂದಪುರಿ ಸ್ವಾಮೀಜಿ ಪ್ರವೇಶದ ನಂತರ ದೇವಸ್ಥಾನ ಶುಚಿಗೊಳಿಸಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ಅದನ್ನು ನಾನು ಗಮನಿಸಿದ್ದೇನೆ. ಸಾಮಾನ್ಯವಾಗಿ ಬೆಳಿಗ್ಗೆ ಹಾಗೂ ಸಂಜೆ ದೇವಸ್ಥಾನ ಶುಚಿಗೊಳಿಸುತ್ತಾರೆ. ಮುಜರಾಯಿ ಹಾಗೂ ಸಂಬಂಧಿಸಿದ ಜಿಲ್ಲಾ ಮಂತ್ರಿಯಿಂದ ಮಾಹಿತಿ ಪಡೆದುಕೊಳ್ಳುವೆ. ಒಟ್ಟಾರೆ ಉದ್ದೇಶ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕುತ್ತೇನೆ ಎಂದು ಸ್ಪಷ್ಟಪಡಿಸಿದರು. ನಮ್ಮಲ್ಲಿ ಯಾವುದೇ ಅಸ್ಪೃಶ್ಯತೆ ಇಲ್ಲ, ನಮ್ಮಲ್ಲಿ ಎಲ್ಲ ಒಂದೇ, ನಾವೆಲ್ಲರೂ ಒಂದು ಎಂಬ ಭಾವವಿದೆ. ಎಲ್ಲ ಧರ್ಮದವರಿಗೂ ದೇವಸ್ಥಾನದಲ್ಲಿ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಹೀಗಾಗಿ, ರಾಜ್ಯದಲ್ಲಿ ಅಸ್ಪೃಶ್ಯತೆ ಇದೆ ಎಂಬ ಪರಿಸ್ಥಿತಿ ಇಲ್ಲವೇ ಇಲ್ಲ ಎಂದು ಪುನರುಚ್ಚಿಸಿದರು. ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಶಾಸಕ ಅಲ್ಲಮಪ್ರಭು ಪಾಟೀಲ್, ಮಾಜಿ ಸಚಿವ ರೇವುನಾಯಕ ಬೆಳಮಗಿ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ್, ಮುಖಂಡರಾದ ಸೋಮಶೇಖರ ಹಿರೇಮಠ ಮತ್ತಿತರರಿದ್ದರು.