For the best experience, open
https://m.samyuktakarnataka.in
on your mobile browser.

ಬಿಜೆಪಿ ರಾಜಭವನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ

03:20 PM Aug 02, 2024 IST | Samyukta Karnataka
ಬಿಜೆಪಿ ರಾಜಭವನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ

ರಾಜ್ಯಪಾಲರ ನೋಟೀಸಿನಿಂದ ಆರ್. ಅಶೋಕ್ ಅವರು ಹೆದರಿರಬಹುದು, ನನಗೆ ಯಾಕೆ ಹೆದರಿಕೆಯಾಗಬೇಕು? ಕಾನೂನಿನ ರೀತ್ಯಾ ಅವರು ನೋಟೀಸು ನೀಡಿಲ್ಲ. ತಪ್ಪು ಮಾಡಿದ್ದರೆ ಹೆದರಬೇಕು. ನಾನು ತಪ್ಪು ಮಾಡಿಲ್ಲ.

ಮೈಸೂರು: 136 ಶಾಸಕರ ಬೆಂಬಲದಿಂದ ಮುಖ್ಯಮಂತ್ರಿ ಸ್ಥಾನದಲ್ಲಿ ಇರುವವರಿಗೆ ನೋಟೀಸ್‌ ನೀಡುವ ಮೊದಲು ಕನಿಷ್ಠ ಅದನ್ನು ಕೂಲಂಕಷವಾಗಿ ಪರಿಶೀಲನೆ ಮಾಡಬೇಕಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಅವರು ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ರಾಜ್ಯಪಾಲರು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಹಾಗೂ ಬಿಜೆಪಿ, ಜೆಡಿಎಸ್ ಪಕ್ಷದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ.
ಶೋಕಾಸ್ ನೋಟೀಸು ಕೊಟ್ಟಿರುವುದು ಕಾನೂನುಬಾಹಿರ ಮತ್ತು ಸಂವಿಧಾನಕ್ಕೆ ವಿರುದ್ಧವಾಗಿದೆ. ಕೇಂದ್ರ ಬಿಜೆಪಿ ಸರ್ಕಾರ ರಾಜಭವನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ. ನಿನ್ನೆ ನಡೆದ ಸಚಿವ ಸಂಪುಟ ಸಭೆಗೆ ಕೆಟ್ಟ ಸಾಂಪ್ರದಾಯವಾಗುತ್ತದೆ ಎಂದು ನಾನು ಹೋಗದೇ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಸಚಿವ ಸಂಪುಟ ಸಭೆ ನಡೆಸಲು ನೇಮಿಸಲಾಗಿತ್ತು. ಶೋಕಾಸ್ ನೋಟಿಸ್ ಬಗ್ಗೆ ಸುದೀರ್ಘ ಚರ್ಚೆ ಮಾಡಿ, ನೋಟೀಸು ನೀಡಿರುವುದು ಕಾನೂನು ಬಾಹಿರವಾಗಿದ್ದು, ನೋಟೀಸನ್ನು ಹಿಂಪಡೆಯಬೇಕೆಂದು ನಿರ್ಧರಿಸಲಾಗಿದೆ. ಕೆ.ಜೆ.ಅಬ್ರಹಾಂ ಅವರ ಇತಿಹಾಸ ನೋಡಿದರೆ ಅವರೊಬ್ಬ ಬ್ಲಾಕ್ ಮೇಲರ್ ಎಂದು ಗೊತ್ತಾಗುತ್ತದೆ. ಆತನ ದೂರಿನ ಮೇಲೆ ಕ್ರಮ ಕೈಗೊಂಡಿರುವುದು ಕಾನೂನು ಬಾಹಿರವಾದ ವಿಚಾರ. ಆತ ಈ ರೀತಿ ಅನೇಕ ಜನರ ಮೇಲೆ ದೂರುಗಳನ್ನು ನೀಡಿದ್ದಾರೆ. ಅಬ್ರಹಾಂ ಅವರು ಜುಲೈ 26 ರಂದು 11.30ಕ್ಕೆ ದೂರು ನೀಡಿದ್ದು, ಅಂದೇ ರಾಜ್ಯಪಾಲರು ಶೋಕಾಸ್ ನೋಟಿಸ್ ಕೊಟ್ಟಿದ್ದಾರೆ. ಒಂದೇ ದಿನದಲ್ಲಿ ಕಾನೂನು ವಿಷಯವನ್ನು ಒಳಗೊಂಡ ವಿಚಾರವನ್ನು, 136 ಜನ ಶಾಸಕರ ಬೆಂಬಲದಿಂದ ಆಯ್ಕೆಯಾದ ಮುಖ್ಯಮಂತ್ರಿಗೆ ನೋಟೀಸು ಕೊಡುವಾಗ ಎಲ್ಲಾ ಕಾನೂನನ್ನು ಕೂಲಂಕಷವಾಗಿ ಪರಿಶೀಲಿಸಬೇಕು. ಏನು ನೋಡದೇ ಆತುರವಾಗಿ ನಿರ್ಧಾರ ಮಾಡಿದ್ದಾರೆ. ಅಂದೇ ನೋಟೀಸು ನೀಡಿದ್ದಾರೆ. ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಅವರಿಗೆ ವಿಶೇಷ ಕರ್ತವ್ಯಾಧಿಕಾರಿ ಪ್ರಭು ಶಂಕರ್ ಎಂಬುವರು ಕರೆ ಮಾಡಿ ಶೋಕಾಸ್ ನೋಟಿಸ್ ಸಿದ್ಧವಿದೆ ತೆಗೆದುಕೊಳ್ಳಬೇಕು ಎಂದಿದ್ದಾರೆ. ರಾತ್ರಿಯಾಗಿರುವುದರಿಂದ ಅದನ್ನು ಪಡೆಯಲಾಗಲಿಲ್ಲ. ಮಾರನೇ ದಿನ 2.00 ಗಂಟೆಗೆ ನೋಟೀಸನ್ನು ಆತುರವಾಗಿ ಕೊಟ್ಟಿದ್ದಾರೆ. ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ, ಜನಾರ್ಧನ್ ರೆಡ್ಡಿಯವರುಗಳ ಮೇಲೆ ವರ್ಷಗಟ್ಟಲೇ ದೂರಿದೆ. ಅವರ ಮೇಲೆ ಏಕೆ ಕ್ರಮ ತೆಗೆದುಕೊಂಡಿಲ್ಲ? ನನ್ನ ತಪ್ಪು ಏನೂ ಇಲ್ಲದೆ ಅನಗತ್ಯವಾಗಿ ಈ ರೀತಿ ಮಾಡುತ್ತಿದ್ದಾರೆ. ರಾಜ್ಯಪಾಲರಿಗೆ ಸಲಹೆ ನೀಡಬೇಕಿರುವುದು ನಮ್ಮ ಮಂತ್ರಿಮಂಡಲದವರು. ನಾವು ಸಲಹೆ ನೀಡಿಲ್ಲ. ಮುಖ್ಯ ಕಾರ್ಯದರ್ಶಿಗಳು ವಿವರವಾದ ಪತ್ರವನ್ನು ಜುಲೈ 26 ರಂದು ಸಂಜೆ 6.30 ಗಂಟೆಗೆ ರಾಜ್ಯಪಾಲರಿಗೆ ತಲುಪಿಸಿದ್ದಾರೆ. ಅದನ್ನೂ ಅವರು ನೋಡಿಲ್ಲ. ಮೂಡಾ ಪ್ರಕರಣದ ಬಗ್ಗೆ ನ್ಯಾಯಾಂಗ ಆಯೋಗವನ್ನು ಜುಲೈ 14 ರಂದು ಸರ್ಕಾರ ರಚಿಸಿದೆ. ಆಯೋಗದ ವರದಿಯನ್ನು ನಿರೀಕ್ಷಿಸಲಾಗಿದೆ. ತನಿಖೆ ನಡೆಸಿ ತಪ್ಪುಗಳಾಗಿದ್ದರೆ ವರದಿ ಸಲ್ಲಿಸುತ್ತಾರೆ. ಅದನ್ನೂ ಪರಿಗಣಿಸದೆ ರಾಜ್ಯಪಾಲರು ನೋಟೀಸು ನೀಡಿದ್ದಾರೆ. ರಾಜ್ಯಪಾಲರ ನೋಟೀಸಿನಿಂದ ಆರ್. ಅಶೋಕ್ ಅವರು ಹೆದರಿರಬಹುದು, ನನಗೆ ಯಾಕೆ ಹೆದರಿಕೆಯಾಗಬೇಕು? ಕಾನೂನಿನ ರೀತ್ಯಾ ಅವರು ನೋಟೀಸು ನೀಡಿಲ್ಲ. ತಪ್ಪು ಮಾಡಿದ್ದರೆ ಹೆದರಬೇಕು. ನಾನು ತಪ್ಪು ಮಾಡಿಲ್ಲ. ಕರ್ನಾಟಕ ಬಿಜೆಪಿ ಪಾದಯಾತ್ರೆ ಮಾಡುವ ಬಗ್ಗೆ ನಮ್ಮ ಅಭ್ಯಂತರವಿಲ್ಲ. ಕೇಂದ್ರ ಸಚಿವರು ಹಾಗೂ ಜೆಡಿಎಸ್ ಅಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಈ ಪ್ರಕರಣದಲ್ಲಿ ಏನೂ ಇಲ್ಲ ಎಂದು ಪಾದಯಾತ್ರೆ ಬೇಡ ಎಂದರು. ಮಳೆ ಹೆಚ್ಚಾಗಿದೆ, ಜಲಾಶಯಗಳು ತುಂಬಿ ಪ್ರವಾಹ ಬಂದಿದೆ ಅದರ ಕಡೆಗೆ ಗಮನ ನೀಡಬೇಕೆಂದು ಹೇಳಿದರು. ಈಗ ಅದು ಮರೆತುಹೋಯಿತೇ? ಹಾಗಾದರೆ ಅವರ ಸ್ವ ಇಚ್ಛೆಯಿಂದ ಮಾಡುತ್ತಿಲ್ಲ ಎಂದಾಯಿತು. ಮಳೆಯಿಂದ ಮನೆ ಬಿದ್ದಿರುವುದು, ರಸ್ತೆ ಹಾಳಾಗಿರುವುದು, ಸೇತುವೆಗಳು, ವಿದ್ಯುತ್ ಕಂಬಗಳು ಬಿದ್ದಿರುವುದರ ಬಗ್ಗೆ ವರದಿ ತರಿಸಲಾಗುತ್ತಿದೆ. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಲಾಗಿದ್ದು, ಎಸ್.ಡಿ.ಆರ್.ಎಫ್ ಮಾರ್ಗಸೂಚಿ ಪ್ರಕಾರ ಎಷ್ಟು ಕೊಡಬೇಕೋ ಅಷ್ಟು ಪರಿಹಾರ ನೀಡಿ ಮನೆಯನ್ನೂ ಕಟ್ಟಿಕೊಡಲಾಗುವುದು ಎಂದರು.