ಬಿಜೆಪಿ ಹಿಂದುತ್ವದಿಂದ ದೂರವಾಗಿ ಸ್ವಜನ ಪಕ್ಷಪಾತದಲ್ಲಿ ತೊಡಗಿದೆ
ಗದಗ: ಬಿಜೆಪಿಯಲ್ಲಿ ಹಿಂದುತ್ವದ ತತ್ವ ಸಿದ್ಧಾಂತಗಳು ಈಗ ಉಳಿದಿಲ್ಲ. ಪ್ರಸ್ತುತ ಬಿಜೆಪಿಯಲ್ಲಿ ಕೇವಲ ಸ್ವಜನ ಪಕ್ಷಪಾತ ನಡೆಯುತ್ತಿದೆ. ಇದಕ್ಕೆ ಈಗಲೇ ಬ್ರೇಕ್ ಹಾಕದಿದ್ದಲ್ಲಿ ಬಿಜೆಪಿಗೆ ಉಳಿಗಾಲವಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಹಿಂದುತ್ವಕ್ಕೆ, ಹಿಂದುತ್ವ ಪ್ರತಿಪಾದಕರಿಗೆ ಸೂಕ್ತ ಗೌರವ, ಬೆಲೆ ಸಿಗಬೇಕು. ಬಿಜೆಪಿಯನ್ನು ಬಿಎಸ್‌ವೈ ಮತ್ತು ಕುಟುಂಬದ ಹಿಡಿತದಿಂದ ಹೊರಗೆ ತರಬೇಕು. ಕುಟುಂಬ ರಾಜಕಾರಣದಿಂದ ಮುಕ್ತವಾಗಬೇಕು ಎಂದರು.
ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರಗೆ ಕಾಂಗ್ರೆಸ್ ಪಕ್ಷದ ಭಿಕ್ಷೆಯಿಂದ ಶಾಸಕರಾಗಿದ್ದಿರಿ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹೇಳಿದ್ದಾರೆ. ಅದಕ್ಕೆ ಈವರೆಗೆ ಬಿಜೆಪಿ ರಾಜ್ಯಾಧ್ಯಕ್ಷರು ಉತ್ತರ ನೀಡಿಲ್ಲ. ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ೧೦ ಸಾವಿರ ವೋಟ್‌ನಿಂದ ಗೆದ್ದರು. ಏನು ಹೊಂದಾಣಿಕೆಯಾಗಿತ್ತು ಎನ್ನುವುದನ್ನು ಡಿ.ಕೆ. ಶಿವಕುಮಾರ್ ಬಹಿರಂಗಪಡಿಸಬೇಕೆಂದು ಆಗ್ರಹಿಸಿದರು. ಹೊಂದಾಣಿಕೆ ರಾಜಕಾರಣದಿಂದ ಬಿಜೆಪಿ ಮುಕ್ತಾಯವಾಗಬೇಕು. ಈ ಎಲ್ಲ ಸಂಗತಿಗಳು ಬಿಜೆಪಿಯಲ್ಲಿ ಚರ್ಚೆಯಾಗಬೇಕು ಎಂದು ಆಗ್ರಹಿಸಿದರು.