ಬಿಜೆಪಿ ಹಿಂದುತ್ವ ಮರೆತಿದ್ದಕ್ಕೆ ವಿಪಕ್ಷದ ಸ್ಥಾನದಲ್ಲಿ
ಹಾವೇರಿ: ಬಿಜೆಪಿ ಹಿಂದುತ್ವವನ್ನು ಮರೆತಿದ್ದಕ್ಕೆ ಇಂದು ವಿಪಕ್ಷದ ಸ್ಥಾನದಲ್ಲಿದೆ. ಜನರಿಗೆ ನೀಡಿದ್ದ ಭರವಸೆಯನ್ನು ಈಡೇರಿಸದೇ ಕೇವಲ ರಾಜಕಾರಣ ಮಾಡಿದ್ದರಿಂದ ಜನತೆ ಬಿಜೆಪಿಯನ್ನು ತಿರಸ್ಕರಿಸಿದ್ದಾರೆ ಎಂದು ಶ್ರೀರಾಮ ಸೇನಾ ಅಧ್ಯಕ್ಷ ಪ್ರಮೋದ ಮುತಾಲಿಕ್ ಅವರು ಬಿಜೆಪಿ ವಿರುದ್ಧ ಹರಿಹಾಯ್ದರು.
ನಗರದ ಶಂಕರಮಠದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಬಿಜೆಪಿ ಕಟ್ಟಲು ನಾವೆಲ್ಲ ಕಷ್ಟಪಟ್ಟಿದ್ದೇವೆ. ಹೀಗಾಗಿ ಅವರನ್ನು ಪ್ರಶ್ನಿಸುವ ಹಕ್ಕು ನಮಗಿದೆ. ಇನ್ನು ಕಿತ್ತೂರು ರಾಣಿ ಚೆನ್ನಮ್ಮನನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಕಡೆಗಣಿಸಿದೆ. ೨೦೦ನೇ ವಿಜಯೋತ್ಸವ ಸಪ್ಪೆಯಾಗಿದೆ. ಯಾವುದೇ ಪತ್ರಿಕೆಯಲ್ಲಿ ಜಾಹೀರಾತು ಇಲ್ಲ. ಆದರೇ ತಮ್ಮ ಇಲಾಖೆ ಅಥವಾ ವೈಯಕ್ತಿಕ ಹಿತಾಸಕ್ತಿಯ ವಿಚಾರಗಳಿಗೆ ಹೆಚ್ಚಿನ ಜಾಹೀರಾತುಗಳನ್ನು ನೀಡುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.
ಶಿಗ್ಗಾವಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಅವರಿಗೆ ಮನವಿ ನೀಡುತ್ತವೆ. ಅವರು ನಮ್ಮ ಬೇಡಿಕೆ ಈಡೇರಿಸಬೇಕು. ಆಗ ನಮ್ಮ ಬೆಂಬಲ ನೀಡುವ ಜೊತೆಗೆ ಪ್ರಚಾರದಲ್ಲೂ ನಾವು ಪಾಲ್ಗೊಳ್ಳುತ್ತೇವೆ. ಇಲ್ಲದಿದ್ದರೆ ಚರ್ಚೆ ಮಾಡಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.
ಕಾಂಗ್ರೆಸ್‌ಗೆ ಬೆಂಬಲಿಸುವ ಪ್ರಶ್ನೆಯೇ ಇಲ್ಲ. ಮತಾಂಧರ, ಹಿಂದೂ ವಿರೋಧಿಗಳಿಗೆ ಯಾವತ್ತೂ ನಮ್ಮ ಬೆಂಬಲವಿಲ್ಲ. ಇವರು ನಮ್ಮ ಬೇಡಿಕೆಗೆ ಸ್ಪಂದಿಸದೇ ಇದ್ದಲ್ಲಿ ನೋಟಾ ಚಲಾವಣೆ, ಅಥವಾ ಒಬ್ಬ ಸಾಮಾನ್ಯ ಹಿಂದೂ ಕಾರ್ಯಕರ್ತನನ್ನು ನಿಲ್ಲಿಸಿ ಗೆಲ್ಲಿಸುತ್ತೇವೆ ಎಂದರು.