ಬಿಡುಗಡೆಯಾದ ಮಗನ ಪುಸ್ತಕ: ಸಚಿವ ಲಾಡ್ ಸಂತಸ
ಅಪ್ಪನಾಗಿ ಮಗನ ಒಂದೊಂದು ಹೆಜ್ಜೆಯನ್ನೂ ಬೆರಗಿನಿಂದ ನೋಡುವ ಸಂತಸ
ಬೆಂಗಳೂರು: ಕರಣ್ ಲಾಡ ಅವರ “ಗ್ಲಿಚ್ ಇನ್ ದ ಸಿಮುಲೇಶನ್” ಗ್ರಂಥದ ಕನ್ನಡ ಅನುವಾದ ‘ಪ್ರತ್ಯನುಕರಣೆಯ ನ್ಯೂನತೆಗಳು’ ಎಂಬ ಕೃತಿಯ ಬಿಡುಗಡೆ ಕುರಿತಂತೆ ಸಚಿವ ಸಂತೋಷ ಲಾಡ ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿದ್ದಾರೆ.
ಮಗ ಕರಣ್ ಲಾಡ ಹಾಗೂ ಪುಸ್ತಕ ಬಿಡುಗಡೆ ಕುರಿತಂತೆ ಪೋಸ್ಟ್ ಮಾಡಿದ್ದು ನನ್ನ ಮಗನಿಗೆ ಸಾಹಿತ್ಯಾಸಕ್ತಿ ಮೂಡಿದೆ ಅಂದಾಗ ನನಗಾದ ಅಚ್ಚರಿ, ಖುಷಿ ಅಷ್ಟಿಷ್ಟಲ್ಲ! ಒಂದು ಪುಸ್ತಕಕ್ಕಾಗುವಷ್ಟು ಬರಹಗಳೊಂದಿಗೆ ಆತ ನನ್ನ ಬಳಿ ಬಂದಾಗ ಅವನ್ನೆಲ್ಲ ಒಟ್ಟುಗೂಡಿಸಿ A Glitch In The Simulation ಎಂಬ ಹೆಸರಿನೊಂದಿಗೆ ಚಂದಗೆ ಅಚ್ಚು ಹಾಕಿಸಿ ಬಿಡುಗಡೆ ಮಾಡಿಸಿದ್ದೆ. ಈಗ ಆ ಕೃತಿಯ ಕನ್ನಡ ಅವತರಣಿಕೆ ಬಿಡುಗಡೆಯಾಗಿದೆ. ಇದರೊಂದಿಗೆ ಕನ್ನಡ ಸಾಹಿತ್ಯಾಸಕ್ತ ಮನಸ್ಸುಗಳನ್ನು ಸಹ ಕರಣ್ ತಾಕಲಿದ್ದಾನೆ. ಇದೇನು ಮಹಾನ್ ಸಾಧನೆ ಎಂಬ ಹಮ್ಮು ಬಿಮ್ಮು ನನಗಿಲ್ಲ. ಆದರೆ ಒಬ್ಬ ಅಪ್ಪನಾಗಿ ಮಗನ ಒಂದೊಂದು ಹೆಜ್ಜೆಯನ್ನೂ ಬೆರಗಿನಿಂದ ನೋಡುವ ನನ್ನ ಬದುಕಿನ ಸಂತಸಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಖುಷಿಯೇ ಬೇರೆ! ಎಂದಿನಂತೆ ನಿಮ್ಮ ಪ್ರೀತಿ, ಆಶೀರ್ವಾದ ನನ್ನ ಕಂದ ಕರಣ್ ಲಾಡ್ ಮೇಲೂ ಇರಲಿ! ಎಂದಿದ್ದಾರೆ.