ಬಿತ್ತನೆ ಸಾಲ ಏರುತ್ತಲೇ ಇದೆ: ಸಂಕಷ್ಟ ತೋಡಿಕೊಂಡ ರೈತರು
ಕುಷ್ಟಗಿ: ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ನೇತೃತ್ವದ ಬಿಜೆಪಿ ತಂಡ ಕುಷ್ಟಗಿ ತಾಲೂಕಿನಲ್ಲಿ ಬರ ಅಧ್ಯಯನ ನಡೆಸಿ, ರೈತರ ಅಹವಾಲು ಕೇಳಿತು.
ತಾಲೂಕಿನ ಚಳಗೇರಾ ಗ್ರಾಮದ ರೈತ ಈರಣ್ಣ ಗಾಣಿಗೇರ್ ಅವರಿಗೆ ಸೇರಿದ ಮಲಕಾಪುರ ಸೀಮಾದ ಜಮೀನಿಗೆ ಭೇಟಿ ನೀಡಿದ ತಂಡವು ಬರ ಅಧ್ಯಯನ ನಡೆಸಿ ಪರಿಸ್ಥಿತಿ ಅವಲೋಕಿಸಿತು. ಈ ವೇಳೆ ಗ್ರಾಮದ ರೈತ ಈರಣ್ಣ ಗಾಣಿಗೇರ ಮಳೆ ಬೆಳೆ ಇಲ್ಲದೆ ತಾವೆದುರಿಸುತ್ತಿರುವ ಸಂಕಷ್ಟ ತೋಡಿಕೊಂಡರು.
ಬರ ಘೋಷಣೆಯಾಗಿರದ ಕುಷ್ಟಗಿ ತಾಲೂಕಿನಲ್ಲೂ ಬರ ಭೀಕರವಾಗಿದೆ ಎಂದು ಬಿಜೆಪಿ ತಂಡದ ಇದೇ ತಾಲೂಕನ್ನೇ ಆಯ್ಕೆ ಮಾಡಿ ಬರ ಅಧ್ಯಯನ ನಡೆಸಿತು.
ಶೇಂಗಾ ಬೆಳೆ ಸಂಪೂರ್ಣವಾಗಿ ಬಾಡಿ ಹೋಗಿರುವುದನ್ನು ಬಿಜೆಪಿ ತಂಡ ಗಮನಿಸಿತು. ಈ ವೇಳೆ ಈರಣ್ಣ ಗಾಣಗೇರ ಸೇರಿದಂತೆ ಮತ್ತಿತರ ರೈತರು, ಸಾಲ ಮಾಡಿ ಬಿತ್ತಿದ್ದು, ಬೆಳೆ ಬರುತ್ತಿಲ್ಲ. ನೀರು ಹರಿಸಿ ಬೆಳೆ ಉಳಿಸಿಕೊಳ್ಳಲು ವಿದ್ಯುತ್ ಸಮಸ್ಯೆ. ಪರಿಹಾರವೂ ಇಲ್ಲ, ವಿದ್ಯುತ್ ಸಹ ಇಲ್ಲ. ಸಾಲ ಏರುತ್ತಲೇ ಇದೆ ಎಂದು ನೋವು ವ್ಯಕ್ತಪಡಿಸಿದರು.
ಸರ್ಕಾರದ ಸ್ಪಂದನೆ ಇಲ್ಲ: ಸಂಕಷ್ಟದಲ್ಲಿರುವ ರೈತರಿಗೆ ರಾಜ್ಯ ಸರ್ಕಾರ ಯಾವ ರೀತಿಯಲ್ಲೂ ಸ್ಪಂದಿಸುತ್ತಿಲ್ಲ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸಿದರು. ಬರದ ವಿಷಯದಲ್ಲಿ ಕೇಂದ್ರ ಸರ್ಕಾರ ರಾಜಕಾರಣ ಮಾಡಿಲ್ಲ. ಈಗಾಗಲೇ ಅಧಿಕಾರಿಗಳ ತಂಡವನ್ನು ರಾಜ್ಯಕ್ಕೆ ಕಳುಹಿಸಿ, ಅಧ್ಯಯನ ಮಾಡಿಸಿದೆ. ಆದರೆ, ರಾಜ್ಯ ಸರ್ಕಾರ ಬರದಿಂದಾದ ನಷ್ಟದ ಬಗ್ಗೆ ವರದಿಯನ್ನೇ ಕೇಂದ್ರಕ್ಕೆ ಸಲ್ಲಿಸಿಲ್ಲ. ರಾಜ್ಯದಲ್ಲಿ ತೀವ್ರ ಬರಗಾಲ ಆವರಿಸಿದೆ. ಎಲ್ಲೇ ಹೋದರೂ ರೈತರು ಕಣ್ಣೀರು ಹಾಕುತ್ತಿದ್ದಾರೆ. ಬೆಳೆ ನಾಶ ಆಗಿದೆ. ಆದರೂ ಸರ್ಕಾರ ರೈತರ ನೆರವಿಗೆ ಧಾವಿಸುತ್ತಿಲ್ಲ. ಯಾವುದೇ ಮಂತ್ರಿ ಒಂದು ಹೊಲಕ್ಕೂ ಹೋಗಿಲ್ಲ, ರೈತನ ಬಳಿ ಮಾತಾಡಿಲ್ಲ. ಸರ್ವೇ ಮಾಡುವಲ್ಲೂ ವಿಳಂಬ ಮಾಡಿ, ನಂತರ ಬರ ಘೋಷಣೆಗೂ ತಡ ಮಾಡಿದರು. ಗ್ಯಾರಂಟಿಗಳಿಗೆ ಹಣ ಕೊಡುತ್ತೇವೆ ಎಂದು ಅಲ್ಲೂ ಫೇಲ್ ಆಗಿದ್ದಾರೆ. ರೈತರಿಗೆ ಪರಿಹಾರ ನೀಡುತ್ತಿಲ್ಲ. ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡುವುದನ್ನು ಬಿಟ್ಟು ರಾಜ್ಯ ಸರ್ಕಾರ ತನ್ನ ಪಾಲಿನ ಪರಿಹಾರವನ್ನು ರೈತರಿಗೆ ತಕ್ಷಣ ನೀಡಬೇಕು ಎಂದು ಆಗ್ರಹಿಸಿದರು.