ಬಿಪಿಎಲ್ ಕಾರ್ಡ್ ರದ್ದು ಘೋರ ಅಪರಾಧ
ಬೆಂಗಳೂರು: ರಾಜ್ಯದ ೧೪ ಲಕ್ಷ ಬಡವರಿಗೆ ನೀಡಲಾಗಿದ್ದ ಬಿಪಿಎಲ್ ಕಾರ್ಡ್ ಕಿತ್ತುಕೊಳ್ಳುವ ಘೋರ ಅಪರಾಧವನ್ನು ರಾಜ್ಯ ಸರಕಾರ ಮಾಡಿದೆ. ಅದರಲ್ಲೂ ನಮಗೆ ಮತ ಹಾಕಿದ್ದಾರಾ ಎಂದು ಜಾತಿ, ಕೋಮು ಹುಡುಕಿ ಬಿಪಿಎಲ್ ಕಾರ್ಡ್ ರದ್ದು ಮಾಡುತ್ತಿರುವ ದೂರುಗಳಿವೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಆಕ್ಷೇಪಿಸಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಡವರ ಅನ್ನಕ್ಕೂ ಕನ್ನ ಹಾಕುವ ಪರಮ ಅನ್ಯಾಯ ಇದಾಗಿದೆ. ಜಾತಿ ಹುಡುಕಿ ಕಾರ್ಡ್ ರದ್ದು ಮಾಡಿದ್ದನ್ನು ಸೋಷಿಯಲ್ ಮೀಡಿಯದಲ್ಲಿ ನೋಡಿದ್ದೇನೆ ಎಂದು ಆರೋಪಿಸಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಆರೆಸ್ಸೆಸ್, ಬಿಜೆಪಿಯನ್ನು ವಿಷ ಸರ್ಪಕ್ಕೆ ಹೋಲಿಸಿದ್ದಾರೆ. ಅನುಭವ ಪಕ್ವತೆಯನ್ನು ಪಡೆದುಕೊಳ್ಳಬೇಕು. ಹಿರಿತನಕ್ಕೆ ತಕ್ಕ ಮಾತು ಅದಲ್ಲ; ಅವರ ಮಾತುಗಳು ಹುಚ್ಚುನಾಯಿ ಕಡಿತಕ್ಕೆ ಒಳಗಾದವರು ಆಡುವ ಮಾತಿನಂತಿತ್ತು. ಖರ್ಗೆಯವರು ಆ ಮಾತನಾಡಿದ್ದಾರೋ ಅಥವಾ ಕಾಂಗ್ರೆಸ್ಸಿನ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಖರ್ಗೆಯವರ ಮೂಲಕ ಮಾತನ್ನಾಡಿಸಿದ್ದಾರೋ ಗೊತ್ತಿಲ್ಲ. ಅವರ ಮಾತು ಸಂವಿಧಾನದ ಮೇಲೆ ನಂಬಿಕೆ ಇಟ್ಟವರ ಮಾತಲ್ಲ. ಹೊಡಿ, ಬಡಿ ಕೊಲ್ಲು ಎಂಬ ತಾಲಿಬಾನಿಗಳ ಮಾತಿಗೆ ವಿಷಾದ ವ್ಯಕ್ತಪಡಿಸಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.
ಅಭಿವೃದ್ಧಿಗೆ ಅನುದಾನ ಕೇಳಿದರೆ, ಮುಖ್ಯಮಂತ್ರಿಗಳು ಎಲ್ಲಿಂದ ದುಡ್ಡು ತರೋದು; ಸ್ವಲ್ಪ ತಡ್ಕೊಳ್ಳಿ ಎನ್ನುತ್ತಾರೆ. ಹಾಗಾಗಿ ಇದು ಹೊಸದೇನಲ್ಲ; ಅದಕ್ಕಾಗಿ ಬಡವರ ಅನ್ನವನ್ನೂ ಬಿಪಿಎಲ್ ಕಾರ್ಡ್ ರದ್ದು ಮೂಲಕ ಕಿತ್ತುಕೊಳ್ಳಲು ಹೊರಟಿದ್ದಾರೆ ಎಂದು ದೂರಿದರು.