ಬಿಲ್ಲವರನ್ನು ಬೆಂಬಲಿಸಿ: ಸಂಚಲನ ಮೂಡಿಸಿದ ಶಾಸಕರ ಹೇಳಿಕೆ
ಮಂಗಳೂರು: ಬಿಲ್ಲವ ನಾಯಕರು ಯಾವುದೇ ಪಕ್ಷದಲ್ಲಿದ್ದರೂ ಬೆಂಬಲಿಸಬೇಕೆಂಬ ಮೂಲ್ಕಿ ಮೂಡುಬಿದಿರೆ ಶಾಸಕ, ಬಿಜೆಪಿಯ ಉಮಾನಾಥ ಕೋಟ್ಯಾನ್ ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ಸಮಚಲನ ಮೂಡಿಸಿದೆ.
ರಾಷ್ಟ್ರ ಮೊದಲು ಎಂಬ ಸಿದ್ಧಾಂತವನ್ನು ಪ್ರತಿಪಾದಿಸುವ ಬಿಜೆಪಿ ಪಕ್ಷದಿಂದ ಶಾಸಕರಾಗಿರುವ ಉಮಾನಾಥ ಕೋಟ್ಯಾನ್ ಒಂದು ಜಾತಿಗೆ ಸೀಮಿತವಾಗಿ ಬಿಲ್ಲವರು ಯಾವುದೇ ಪಕ್ಷದಲ್ಲಿದ್ದರೂ ಬೆಂಬಲಿಸಿ ಎಂದು ಬಹಿರಂಗವಾಗಿ ಹೇಳಿಕೆ ನೀಡಿರುವುದು ಮುಂಬರುವ ಲೋಕಸಭಾ ಚುನಾವಣೆಯ ವೇಳೆ ಪರಿಣಾಮ ಬೀರುವ ಸಾಧ್ಯತೆ ಇದೆ. ಕರಾವಳಿಯಲ್ಲಿ ಬಿಲ್ಲವ ಮತದಾರರು ಅತ್ಯಧಿಕ ಸಂಖ್ಯೆಯಲ್ಲಿದ್ದಾರೆ.
ಮೂಲ್ಕಿಯಲ್ಲಿ ಭಾನುವಾರ ನಡೆದ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಸಮಾವೇಶದಲ್ಲಿ ಮಾತನಾಡಿದ ಶಾಸಕರು, ಬಿಲ್ಲವ ನಾಯಕರು ಯಾವುದೇ ಪಕ್ಷದಲ್ಲಿದ್ದರೂ ಸಂಕೋಚ, ಹಿಂಜರಿಕೆ ಇಲ್ಲದೆ ಬೆಂಬಲಿಸಿ ಎಂದು ಕರೆ ನೀಡಿದ್ದಾರೆ.
ಉಳಿದ ಪಕ್ಷದ ಸಮುದಾಯ ನಾಯಕರಿಗೆ ಇಲ್ಲದ ಹಿಂಜರಿಕೆ ಬಿಲ್ಲವ ಸಮುದಾಯಕ್ಕಿದೆ, ಅದಕ್ಕಾಗಿ ಬಿಲ್ಲವ ಸಮುದಾಯ ಸಮಾಜದಲ್ಲಿ ಬಹಳಷ್ಟು ಹಿಂದುಳಿದಿದೆ. ಬಿಲ್ಲವ ನಾಯಕರು ಯಾರೇ ನಿಂತರೂ ಪಕ್ಷ ಭೇದ ಮರೆತು ಬೆಂಬಲ ನೀಡಬೇಕು. ಚುನಾವಣೆ ಎದುರಿಸುವ ಬಿಲ್ಲವ ಅಭ್ಯರ್ಥಿಗಳು ಯಾವ ಪಕ್ಷದಲ್ಲಿದ್ದರೂ, ಪಕ್ಷ ಯಾವುದಾದರೂ ಪರವಾಗಿಲ್ಲ ಬಿಲ್ಲವ ಅಭ್ಯರ್ಥಿಗಳನ್ನ ಗೆಲ್ಲಿಸಿ ಆಗ ಮಾತ್ರ ಸಮುದಾಯ ಬಲಿಷ್ಟವಾಗುತ್ತೆ ಎಂದಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೆಳ್ತಂಗಡಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಸೋಲು, ಉಳ್ಳಾಲದಲ್ಲಿ ಬಿಲ್ಲವ ನಾಯಕ, ಬಿಜೆಪಿ ಅಭ್ಯರ್ಥಿ ಸತೀಶ್ ಕುಂಪಲ ಸೋಲಿನ ಬಗ್ಗೆ ಕೂಡ ಉಮಾನಾತ್ ಕೋಟ್ಯಾನ್ ಮಾತನಾಡಿ ಬೇಸರ ವ್ಯಕ್ತಪಡಿಸಿದರು. ಬಿಲ್ಲವ ಅಭ್ಯರ್ಥಿಗಳಿಗೆ ಬೆಂಬಲ ಕೊಡುವುದಕ್ಕೆ ನಿಮಗೆ ಧೈರ್ಯ ಬರೋದಿಲ್ಲ. ಉಮಾನಾಥ್ ಕೋಟ್ಯಾನ್ ಹತ್ತಿರ ಮಾತನಾಡಿದರೆ ನನ್ನ ಪಕ್ಷದವರು ಏನಾದರೂ ಹೇಳುತ್ತಾರೋ ಎಂಬ ಭಯ. ಕಾಂಗ್ರೆಸ್‌ನ ವಿನಯ ಕುಮಾರ್ ಸೊರಕೆ ಹತ್ತಿರ ಮಾತನಾಡಿದರೆ ಏನಾದರೂ ನಮಗೆ ತೊಂದರೆಯಾಗುತ್ತೆ ಎಂಬ ಭಯ. ಇಂತಹ ಹಿಂಜರಿಕೆ ಇಟ್ಟುಕೊಂಡರೆ ಬಿಲ್ಲವ ಸಮಾಜ ಕಟ್ಟಲು ಹೇಗೆ ಸಾಧ್ಯ ? ಬಿಲ್ಲವ ಸಮಾಜದವರಿಗೆ ಯಾಕೆ ಈ ಹಿಂಜರಿಕೆ ? ಚುನಾವಣೆ ಎದುರಿಸುವ ನಮ್ಮ ಜನಪ್ರತಿನಿಧಿಗಳಿಗೆ ಬಿಲ್ಲವ ಸಮಾಜ ಎಷ್ಟು ನೈತಿಕ ಬೆಂಬಲ ನೀಡುತ್ತೆ ಅನ್ನೋದು ಮುಖ್ಯ. ಯಾವುದೇ ರಾಜಕೀಯ ಪಕ್ಷವಿರಲಿ ಬಿಲ್ಲವ ಅಭ್ಯರ್ಥಿಗಳಿಗೆ ಬೆಂಬಲ ನೀಡಿ ಎಂದು ಕರೆ ನೀಡಿದ್ದಾರೆ.